ಎಲೆ ಮನವೆ ನೀ ತಿಳಿ ಹರಿ ಸರ್ವೋತ್ತಮನೆಂದು |
ಸುಲಲಿತಾತ್ಮನ ಭಜಿಸಿ ಸುಖಿಯಾಗೊ ಮನವೆ ಪ.
ಇಕ್ಷುದಂಡಗಳಿರಲು ಇಂಧನವ ಮೇಲೇಕೆ |
ಅಕ್ಷಯ ಪಾತ್ರೆಯಿರಲು ಹಸಿವೆಯೆನಲೇಕೆ |
ನಿಕ್ಷೇಪ ನಿಧಿಯಿರಲು ನಿರುತ ದಾರಿದ್ರ್ಯವೇಕೆ |
ಪಕ್ಷಿವಾಹನನಿರಲು ಪರದೈವವೇಕೆ 1
ಸುರಧೇನು ಕೈಸೇರಿ ಸುಖವಿಲ್ಲವೆನಲೇಕೆ |
ಗರುಡ ಮಂತ್ರವ ಜಪಿಸಿ ಗರಳಭಯವೇಕೆ ||
ತರಣಿಕಿರಣಗಳಿರಲು ಹಲವು ಜ್ಯೋತಿಗಳೇಕೆ |
ಮುರಹರನ ಪೂಜಿಸದೆ ಮುಂದುಗೆಡಲೇಕೇ 2
ಭಾವಶುದ್ಧಿಗಳಿರಲು ಬಯಲಡಂಬರವೇಕೆ |
ದೇವತಾ ಸ್ತುತಿಯಿರದ ದೇಹವೇಕೆ ||
ಆವಗಂ ಹರಿಯೆನದೆ ಅನ್ಯಚಿಂತೆಗಳೇಕೆ |
ದೇವ ಪುರಂದರವಿಠಲನಿರಲು ಭಯವೇಕೆ 3
No comments:
Post a Comment