ಏಕೆ ಮುರ್ಖನಾದೆ - ಮನುಜಾ
ಏಕೆ ಮುರ್ಖನಾದೆ ? ಪ.
ಏಕೆ ಮೂರ್ಖನಾದೆ ನೀನು
ಕಾಕು ಬುದ್ಧಿಗಳನು ಬಿಟ್ಟು
ಲೋಕನಾಥನ ನೆನೆಯೊ ಮನುಜಾ ಅಪ
ಮಕ್ಕಳು ಹೆಂಡರು ತನ್ನವರೆಂದು
ರೊಕ್ಕವನು ಗಳಿಸಿಕೊಂಡು
ಸೊಕ್ಕಿಂದ ತಿರುಗುವರೇನೊ ಹೇ ಮನುಜಾ 1
ಕಕ್ಕಸದ ಯಮದೂತರು ಬಂದು
ಲೆಕ್ಕವಾಯಿತು ನಡೆಯೆಂದರೆ
ಸಿಕ್ಕವರೆಲ್ಲ ಬಿಡಿಸುವರೇನೊ ಹೇ ಮನುಜಾ 2
ಅರಿಷಡ್ವರ್ಗದ ಆಟವ ಬಿಟ್ಟು
ಪುರಂದರವಿಠಲನ ಹೊಂದಲುಬೇಕು
ಹರಿಯನು ಸೇರುವ ಮಾರ್ಗವ ನೋಡೋ ಹೇ ಮನುಜಾ 3
No comments:
Post a Comment