ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ ಗೋವರ್ಧನ ಗಿರಿಯೆತ್ತಿದ ಗೋವಿಂದ ನಮ್ಮ ರಕ್ಷಿಸೊ \\ಪ.\\
ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ ಕರ್ತು ಯಮನವರೆಳೆದು ಒಯ್ಯಲು ಅರ್ಥ ಪುತ್ರರು ಕಾಯ್ವರೆ \\1\\
ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು ಸಂಚಿತಾರ್ಥವ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ \\2\\
ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು ಬಿಡದೆ ಯಮನವರೆಳದು ಒಯ್ಯಲು ಎಡವಿ ಬಿದ್ದಿತು ನಾಲಗೆ \\3\\
ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು ಪ್ರಾಣ ಹೋಗಲು ಮುಟ್ಟಲಂಜುವಳು ಜಾಣೆ ಕರೆದರೆ ಬಾರಳು \\4\\
ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು \\5\\
ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು \\6\\
ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರಸೀಳಿದ ಮುಟ್ಟಿ ಭಜಿಸಿರೊ ಶ್ರೀ ಪುರಂದರವಿಠಲೇಶನ ಚರಣವ \\7\\
No comments:
Post a Comment