Labels

Monday, 30 March 2020

ಕಾಳಬೆಳದಿಂಗಳು - ಈ ಸಂಸಾರ -


ಕಾಳಬೆಳದಿಂಗಳು - ಈ ಸಂಸಾರ -
ಕತ್ತಲೆ ಬೆಳುದಿಂಗಳು ಪ.
ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |
ವ್ಯರ್ಥ ಭಂಢಾರವೆಲ್ಲವನು ಸೋತು ||
ಬತ್ತಲೆ ಪೋಗಿ ವಿರಾಟನ ಮನೆಯೊಳು |
ತೊತ್ತಾದಳು ದ್ರೌಪದಿ ಒಂದು ವರುಷ 1
ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |
ಬೆಂಬತ್ತಿ ತಿರುಗುತಲಿಪ್ಪರು ||
ಎಂಬಾತಗೆ ನೋಡಿ ಬಡತನ ಬಂದರೆ |
ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2
ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |
ಬಂಟರಂತೆ ಬಾಗಿಲ ಕಾಯ್ವರು |
ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |
ಹೆಂಟೆಯಾಗಿ ತಿರುಗುತಿಪ್ಪರಯ್ಯ 3
ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |
ಕೊಂಡು ಸಾರಥಿಯಾದ ಫಲ್ಗುಣನ ||
ಮಂಡಲವಾಳವ ಹರಿಶ್ಚಂದ್ರರಾಯನು ||
ಕೊಂಡು ಕಾಯ್ದ ಚಂಡಾಲನ ಮನೆಯ 4
ನೊಂದಿತು ಕಾಯವು ಬೆಂದಿತು ಒಡಲು |
ಬೆಂದ ಒಡಲಿಗಾಗಿ ಹಾಸ್ಯಮಾಡಿ ||
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |
ತೊಂಡನಾಗಿ ನೀ ಸುಖವಾಗಿ ಬಾಳು * 5



No comments:

Post a Comment