Labels

Monday, 30 March 2020

ಓಡಿ ಬಾರಯ್ಯ ವೈಕುಂಠಪತಿ


ಓಡಿ ಬಾರಯ್ಯ ವೈಕುಂಠಪತಿ ನಿನ್ನ
ನೋಡುವೆ ಮನದಣಿಯೆ ಪ
ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ
ಪಾಡಿ ಪೊಗಳುವೆನು ಪರಮ ಪುರುಷ ಹರಿ ಅ.ಪ
ಕೆಂದಾವರೆಯಂತೆ ಪಾದಂಗಳೆರಡು
ಅಂದುಗೆ ಕಿರಿಗೆಜ್ಜೆ ಘಲುಘಲುರೆನುತ ||
ಚೆಂದದಿ ಪೀತಾಂಬರವಲೆದಾಡುತ
ಕುಂದಣದುಡುದಾರ ಝಣ ಝಣ ಝಣಕುತ 1
ಕೋಟಿ ಸೂರ್ಯ ಪ್ರಕಾಶಗಳಿಂದಲಿ ಲ-
ಲಾಟದಲ್ಲಿ ಇಟ್ಟ ಕಸ್ತುರಿ ತಿಲಕ ||
ಕೂಟದ ಗೋಪಾಂಗನೆಯರ ಕೂಡೆ
ಆಟ ಸಾಕು ಬಾರೋ ಅರವಿಂದ ನಯನ 2
ಕಿರುತುರುಬಿನ ಮೇಲೆ ಒಲೆವುತಿರುತಿರೆ
ಮುರುಗು ಮಲ್ಲಿಗೆ ಜಾಜಿ ಶ್ರೀತುಳಸೀ ||
ಕರದಲಿ ಪಿಡಿದಾ ಪೊಂಗೊಳಲೂದುತ
ತಿರಿತಿಂದು ಬಾಹೋ ಸಡಗರ ಸಾಕೋ 3
ಎಣ್ಣೂರಿಗತಿರಸ ಸದಮಲ ದೋಸೆ ಬೆಣ್ಣೆ
ಅಣ್ಣಯ್ಯ ನಿನಗೆ ಕೊಡುವೆನೋ ಬಾರೋ ||
ಕಣ್ಣಮುಚ್ಚಿ ಗೋಪಾಂಗನೆಯರ ಕೂಡಿ |
ಬೆಣ್ಣೆಯ ಮೆಲುವುದು ಉಚಿತವೆ ಸಾಕೋ 4
ಮಂಗಳಾತ್ಮಕ ಮೋಹನಾಕಾರನೆ
ಸಂಗೀತ ಲೋಲ ಸದ್ಗುಣ ಶೀಲ ||
ಮಂಗಳೆ ಲಕುಮಿಯ ಸಹಿತವಾಗಿ ಬಂದು
ಕಂಗಳ ಮುಂದಾಡೊ ಪುರಂದರ ವಿಠಲ 5


No comments:

Post a Comment