ಏನಾಯಿತು ರಂಗನೆ ನೋಡಿರಮ್ಮ-ನಿ-|
ಧಾನಿಸಿ ಎನಗೊಂದು ಪೇಳಿರಮ್ಮ ಪ
ಪುಟ್ಟಿದಾರಭ್ಯ ಕಣ್ಣ ಮುಚ್ಚನಮ್ಮ-ತಾನು |
ಎಷ್ಟಾದರೂ ಮೊಲೆಯುಣ್ಣನಮ್ಮ ||
ಸೊಟ್ಟಾದ ಮುಖ ಮೇಲಕ್ಕೆತ್ತನಮ್ಮ-ಹೀಗೆ |
ಎಷ್ಟು ಹೇಳಲಿ ಬಾಯ ಮುಚ್ಚನಮ್ಮ 1
ಕಾಯ ಇದ್ದಂತಿದ್ದು ಹೆಚ್ಚಿತಮ್ಮ-ಹೆತ್ತ |
ತಾಯಿಯ ಬಲವಿಲ್ಲದಾಯಿತಮ್ಮ ||
ನೋಯೆ ನೋಟಕೆ ಅಬ್ಧಿ ಬತ್ತಿತಮ್ಮ-ಅವನ |
ಬಾಯಿಯೊಳಗೆ ವಿಶ್ವ ತೋರಿತಮ್ಮ 2
ಅತ್ಯಂತ ಮಾತುಗಳನಾಡಿದನಮ್ಮ-ಮುಂದೆ |
ಸತ್ಯವು ಕುದುರೆಯನೇರುವನಮ್ಮ ||
ನಿತ್ಯ ನಿರ್ದೋಷ ಪುರಂದರವಿಠಲ ತನ್ನ-|
ಭಕ್ತರ ಸಲಹುವದೇವನಮ್ಮ 3
No comments:
Post a Comment