Labels

Sunday, 29 March 2020

ಏಕೆ ವೃಂದಾವನವು ಸಾಕು ಗೋಕುಲವಾಸ |


ಏಕೆ ವೃಂದಾವನವು ಸಾಕು ಗೋಕುಲವಾಸ |
ಏಕೆ ಬಂದೆಯೊ ಉದ್ಧವಾ? ಪ
ಸಾಕು ಸ್ನೇಹದ ಮಾತನೇಕ ಮಹಿಮನು ತಾನು |
ಆ ಕುಬುಜೆಯನು ಕೂಡಿದ-ಉದ್ಧವಾ ಅ.ಪ
ಬಿಲ್ಲು ಬಿಳಿಯಯ್ಯನ ಬೇಟ ನಗೆನುಡಿ ನೋಟ |
ಇಲ್ಲದಂತಾಯಿತಲ್ಲ ||
ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನವ |
ವಲ್ಲಭನ ಒಯ್ದನಲ್ಲ ||
ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದು |
ಘಲ್ಲನಾಭನ ತಂದು ತೋರೈ-ಉದ್ಧವಾ 1
ಅನುದಿನೊಳಾದರಿಸಿ ಅಧರಾಮೃತವನಿತ್ತು |
ಇನಿದಾದ ಮಾತುಗಳಲಿ ||
ಮನದ ಮರ್ಮವ ತಿಳಿದ ಮನಸಿಜಪಿತನ ಸಖವು |
ಮನಸಿಜನ ಕೇಳಿಯಲ್ಲಿ ||
ಕನಸಿನಲಿ ಕಂಡ ತೆರನಾಯಿತಾತನ ಕಾಂಬು |
ವನಕ ಬದುಕುವ ಭರವಸೆ ಹೇಳು-ಉದ್ಧವಾ 2
ಕರುಣನಿಧಿಯೆಂಬುವರು ಕಪಟನಾಟಕದರಸು |
ಸರಸ ವಿರಸವ ಮಾಡಿದ ||
ಸ್ಮರಿಸಿದವರನು ಕಾಯ್ವ ಬಿರುದುಳ್ಳ ಸಿರಿರಮಣ |
ಮರೆದು ಮಧುರೆಯ ಸೇರಿದ ||
ಪರಮಭಕ್ತರ ಪ್ರಿಯ ಪುರಂದರವಿಠಲನ |
ನೆರೆಗೂಡಿಸೈ ಕೋವಿದ-ಉದ್ಧವಾ 3


No comments:

Post a Comment