Labels

Sunday, 29 March 2020

ಏಕೆ ಕಕುಲಾತಿ ಪಡುವೆ - ಎಲೆ ಮನವೆ


ಏಕೆ ಕಕುಲಾತಿ ಪಡುವೆ - ಎಲೆ ಮನವೆ ಪ
ಲೋಕವನೆ ಸಲಹುವ ಶ್ರೀನಿವಾಸನು ನಮ್ಮ |
ಸಾಕಲಾರದೆ ಬಿಡುವನೇ - ಮನವೆ ಅಪ
ಆನೆಗಳಿಗೆಯ್ದಾರು ಮಣವಿನಾಹಾರ
ವನು ಅಲ್ಲಿ ತಂದಿತ್ತವರದಾರೊ |
ಜೇನುನೊಣ ಮೊದಲಾದ ಕ್ರಿಮಿ - ಕೀಟಗಳಿಗೆಲ್ಲ |
ತಾನುಣಿಸದಲೆ ಬಿಡುವನೇ - ಮರುಳೆ 1
ಕಲ್ಲಿನೊಳಗಿರುವ ಕಪ್ಪೆಗಳಿಗಾಹಾರವನು
ಅಲ್ಲಿ ತಂದಿತ್ತವರದಾರೊ |
ಎಲ್ಲವನು ತೊರೆದು ಅರಣ್ಯ ಸೇರಿದ್ರ್ದವರ |
ಅಲ್ಲಿ ನಡಸದೆ ಬಿಡುವನೇ - ಮರುಳೆ 2
ಅಡವಿಯೊಳಗೇ ಪುಟ್ಟುವಾ ಮೃಗಕುಲಕ್ಕೆಲ್ಲ
ಒಡೆಯನಾರುಂಟು ಪೇಳೊ |
ಗಿಡದಿಂದ ಗಿಡಕೆ ಹಾರುವ ಪಕ್ಷಿಗಳಿಗಲ್ಲಿ |
ಪಡಿಯ ನಡೆಸದೆ ಬಿಡುವನೇ - ಮರುಳೆ 3
ಕಂಡಕಂಡವರ ಕಾಲಿಗೆ ಎರಗಿ ಎಲೆ ಮರುಳೆ
ಮಂಡೆ ದಡ್ಡಾಯಿತಲ್ಲ |
ಭಂಡ ಮನವೇ ನೀನು ಕಂಡವರಿಗೆರಗದಿರು
ಕೊಂಡಾಡಿ ಹರಿಯ ಭಜಿಸೋ - ಮರುಳೆ 4
ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನ್ನು
ಬೆಂಬಿಡದೆ ಸಲುಹುತಿಹನು |
ನಂಬು ಶ್ರೀ ಪುರಂದರವಿಠಲನ ಪಾದವನು
ನಂಬಿದರೆ ಸಲಹದಲೆ ಬಿಡುವನೇ - ಮರುಳೆ 5


No comments:

Post a Comment