ಎಲ್ಲಿರುವನೋ ರಂಗನೆಂಬ ಸಂಶಯ ಬೇಡ |
ಎಲ್ಲಿ ಭಕುತರು ಕರೆದರಲ್ಲಿ ಬಂದೊದಗುವನು ಪ.
ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದು |
ಬರೆದೋದಲವನ ಪಿತ ಕೋಪದಿಂದ ||
ಸ್ಥಿರವಾದೊಡೀ ಕಂಬದಲಿ ತೋರು - ತೋರೆನಲು |
ಭರದಿ ಬರಲಾಗ ವೈಕುಂಠವಲ್ಲಿಹುದೊ ? 1
ಕುರುಪತಿಯು ದ್ರೌಪದಿಯ ಸೀರೆ ಸೆಳೆಯುತಿರೆ |
ತರುಣಿ ಹಾ ಕೃಷ್ಣ ಎಂದೊದರೆ ಕೇಳಿ ||
ಭರದಿಂದಲಕ್ಷಯಾಂಬರವೀಯೆ ಹಸ್ತಿನಾ |
ಪುರವು ದ್ವಾರಾವತಿಗೆ ಕೂಗಳತೆಯೆ 2
ಕರಿರಾಜನನು ನೆಗಳು ನುಂಗುತಿರೆ ಭಯದಿಂದ |
ಹರಿಯೆ ಕಾಯೆಂದು ಮೊರೆಯಿಡಲು ಕೇಳಿ ||
ಕರುಣದಿಂ ಬಂಧನವ ಬಿಡಿಸಲಾ ಗಜರಾಜ - |
ನಿರುವ ಸರಸಿಗೆ ಅನಂತಾಸನ ಮುಮ್ಮನೆಯೆ 3
ಪಾಪಕರ್ಮವ ಮಾಡಿದಜಮಿಳನ ಯಮಭಟರು ||
ಕೋಪದಿಂದಲಿ ಸೆಳೆಯೆ ಭೀತಿಯಿಂದ ||
ತಾ ಪುತ್ರನನು ಕರೆಯೆ ಕೇಳಿ ರಕ್ಷಿಸಿ ಶ್ವೇತ -
ದೀಪವೀ ಧರೆಗೆ ಸಮೀಪವಾಗಿಹುದೆ ? 4
ಅಣು - ಮಹತ್ತುಗಳಲ್ಲಿ ಪರಿಪೂರ್ಣನೆಂದೆನಿಸಿ |
ಎಣೆಯಿಲ್ಲದ ಮಹಾಗುಣಪೂರ್ಣನು ||
ಘನಮಹಿಮನಾದ ಶ್ರೀ ಪುರಂದರವಿಠಲನು |
ನೆನೆದವರ ಮನದೊಳಗೆ ಇಹನೆಂಬ ಬಿರುದುಂಟು 5
No comments:
Post a Comment