ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಪ.
ವೇದ ಶಾಸ್ತ್ರ ಪಂಚಾಗ ಓದಿಕೊಂಡು ಪರರಿಗೆ
ಬೋಧನೆಯ ಮಾಡವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 1
ಚಂಡ ಭಟರಾಗಿ ನಡೆದು ಕತ್ತಿಢಾಲು ಕೈಲಿ ಹಿಡಿದು
ಖಂಡ ತುಂಡು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2
ಅಂಗಡಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿ
ಭಂಗಬಿದ್ದು ಗಳಿಸುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3
ಕುಂಟಿ ತುದಿಗೆ ಕೊರಡುಹಾಕಿ ಹೆಂಟೆಮಣ್ಣು ಸಮಮಾಡಿ
ರೆಂಟೆ ಹೊಡೆದು ಬೆಳೆಸುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4
ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳು ಮಾಡಿ
ಸುಳ್ಳು ಬೊಗಳಿ ತಿಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5
ಕೊಟ್ಟಣವ ಕುಟ್ಟಿಕೊಂಡು ಕಟ್ಟಿಗೆಯ ಹೊತ್ತುಕೊಂಡು
ಕಷ್ಟಮಾಡಿ ತಿಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6
ತಾಳದಂಡಿಗೆ ಶೃತಿ ಮೇಳ ತಂಬೂರಿ ಹಿಡಿದುಕೊಂಡು
ಸೂಳೆಯಂತೆ ಕುಣಿಯುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಭೈರಾಗಿ
ನಾನಾ ವೇಷ ಹಾಕುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8
ಹಳ್ಳದಲ್ಲಿ ಕುಳಿತು ಕೊಂಡು ಕಲ್ಲು ದೊಣ್ಣೆ ಹಿಡುದುಕೊಂಡು
ಕಳ್ಳತನವ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ ಮೆರೆಯುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10
ಉನ್ನಂತ ಪುರಂದರ ರಾಯನ ಧ್ಯಾನವನು
ಮನಮುಟ್ಟಿ ಮಾಡುವುದು
ಮುಕ್ತಿಗಾಗಿ ಆನಂದಕಾಗಿ* 11
No comments:
Post a Comment