ಎಳ್ಳು ಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯ
ಬೆಳ್ಳಕ್ಕಿಯಂತೆ ನಿನ್ನ ಧ್ಯಾನವ ಮಾಡುವೆನಯ್ಯಾ ಪ
ಗಂಡು ಮುಳುಗಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿ
ಮಂಡೆ ಶೂಲೆಯಲ್ಲದೆ ಗತಿಯು ಇಲ್ಲ
ಮಂಡೆ ಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ 1
ಗಾಣದೆತ್ತಿನಂತೆ ಕಣ್ಣಕಟ್ಟಿ ಪ್ರದಕ್ಷಿಣೆ ಮಾಡಿ
ಕಾಣದೆ ನಾ ತಿರುಗಿದೆ ಕಂಡುದಿಲ್ಲ
ಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿ
ಆಣಿಕಾರಿಕೆ ಮಾಡಿದಂಥ ಈ ಕುಯುಕ್ತಿಯು 2
ಇಕ್ಕಳವ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆ
ಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲ
ಪೊಕ್ಕಳ ಪೂವಿನ ಶ್ರೀ ಪುರಂದರವಿಠಲನೆ
ಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ * 3
No comments:
Post a Comment