Labels

Sunday, 29 March 2020

ಏಕೆ ದಯಮಾಡಲೊಲ್ಲೆ - ಎಲೊ ಹರಿಯೆ |


ಏಕೆ ದಯಮಾಡಲೊಲ್ಲೆ - ಎಲೊ ಹರಿಯೆ |
ಮೂಕನಾಗುವರೆ ಹೀಗೆ ಪ
ಲೋಕವನು ರಕ್ಷಿಪ ಲಕ್ಷ್ಮೀಕಾಂತನು ನೀನೇ |
ವಾಕುಮೊರೆಗಳ ಕೇಳಿ ಒಲಿದು ದಯಮಾಡಯ್ಯ ಅ.ಪ
ಅರ್ಥವಿಲ್ಲದ ಬಾಳ್ವೆಯು - ಇರುವುದಿದು|
ವ್ಯರ್ಥವಾಗಿದೆ ಶ್ರೀಪತಿ ||
ಕರ್ತು ನಿನ್ನೊಳು ನಾನು ಕಾಡಿ ಬೇಡುವನಲ್ಲ|
ಸತ್ವರದಿ ದಯಮಾಡೊ ತುಳಸೀದಳಪ್ರಿಯ 1
ಮನದೊಳಗಿನ ಬಯಕೆ - ಎಲೈಸ್ವಾಮಿ |
ನಿನಗೆ ಪೇಳುವೆನು ನಾನು ||
ಬಿನುಗು ದೇವತೆಗಳಿಗೆ ಪೇಳಲಾರೆವೊ ಹರಿಯೆ|
ತನುಮನ ನಿನ್ನ ಕೂಡ ಇಹವು ದಯಮಾಡೊ 2
ಮೂರು ಲೋಕವ ಪಾಲಿಪ - ಎನ್ನಯ ಸ್ವಾಮಿ |
ಭಾರವೆ ನಿನಗೆ ನಾನು ||
ಕಾರುಣ್ಯನಿಧಿ ನಮ್ಮ ಪುರಂದರವಿಠಲ ಶ್ರೀ - |
ದಾರಾ ಮನೋಹರ ಸಾಕಾರ ದಯವಾಗೊ 3


No comments:

Post a Comment