ಒಳಿತು ಈ ಶಕುನ ಫಲವಿಂದು ನಮಗೆ
ಜಲಜನಾಭನ ಸಂಗ ದೊರಕುವುದೆ ರಮಣಿ ಪ.
ವಾಮಗರುಡನ ನೋಡು ವಾಯಸದ ಬಲವನ್ನು
ಕೋಮಲಾಂಗಿಯರೈದು ಪೂರ್ಣಕುಂಭ ||
ಸಾಮಾನ್ಯವೇ ಗೌಳಿ ಬಲಕಾಗಿ ನುಡಿಯುತಿದೆ
ಪ್ರೇಮದಲಿ ಮಧುರ ವಚನವ ಕೇಳು ರಮಣಿ 1
ಮೊಳಗುತಿವೆ ಭೇರಿ ದುಂದುಭಿ ಘಂಟೆ ವಾದ್ಯಗಳು
ಫಲ ಪುಷ್ಪ ದಧಿಗಳಿದಿರಾಗುತಿದೆಕೊ ||
ಚೆಲುವ ಭಾರದ್ವಾಜ ಪಕ್ಷಿ ಬಲವಾಗುತಿದೆ
ಬಲು ಹಂಗ ಎಡವಾಗುತಿದೆ ನೋಡು ಕೆಳದಿ 2
ನೋಡು ದ್ವಯ ಬ್ರಾಹ್ಮಣರು ಇದಿರಾಗಿ ಬರುವುದನು
ಕೂಡಿದುವು ಮನದ ಸಂಕಲ್ಪವೆಲ್ಲ ||
ಬೇಡಿದ ವರಗಳೀವ ಪುರಂದರವಿಠಲನ
ನೋಡಿ ಸಂತೋಷದಲಿ ನೆನೆವೆನೆಲೆ ರಮಣಿ 3
No comments:
Post a Comment