Labels

Wednesday, 18 December 2019

ಸಂದಿತಯ್ಯ ಪ್ರಾಯವು sanditayya prayavu

ಸಂದಿತಯ್ಯ ಪ್ರಾಯವು |
ಸಂದಿತಯ್ಯ ಪ್ರಾಯವು ಪ
ಮೂರು ತಿಂಗಳು
ಸಂದುಹೋಯಿತು ತಿಳಿಯದೆ ||
ಬಂದೆ ತಾಯಿಯ ಜಠರದಲಿ ಮ-|
ತ್ತೊಂದು ಬುದ್ಧಿಯನರಿಯದೆ ||
ಬೆಂದೆ ನವಮಾಸದಲಿ ಗರ್ಭದಿ |
ಒಂದು ದಿವಸವು ತಡೆಯದೆ ||
ಕುಂದದೀಪರಿಯೊಂದು ವರುಷವು |
ಇಂದಿರೇಶನೆ ಕೇಳು ದುಃಖವ 1
ಕತ್ತಲೆಯೊಳಿರಲಾರೆನೆನುತಲಿ |
ಹೊತ್ತೆ ಹರಕೆಯ ನಿನ್ನನು ||
ಮತ್ತೆ ಜನಿಸಲು ಭೂಮಿಯೊಳು ನಾ |
ಅತ್ತುನಿನ್ನನು ಮರೆತೆನು ||
ಮತ್ತೆ ಮಲ-ಮೂತ್ರದೊಳು ಬಾಲ್ಯದಿ |
ಹೊತ್ತು ದಿನಗಳ ಕಳೆದೆನು ||
ಮತ್ತೆ ನರಕದೊಳುರುಳುತುರುಳುತ |
ಉತ್ತಮೋತ್ತಮ ನಿನ್ನ ನೆನೆಯದೆ 2
ಚಿಕ್ಕತನವನು ಮಕ್ಕಳಾಟದಿ |
ಅಕ್ಕರಿಂದಲಿ ಕಳೆದೆನು ||
ಸೊಕ್ಕಿ ಹದಿನಾರಲಿ ನಾನತಿ |
ಮಿಕ್ಕಿ ನಡೆದೆನು ನಿನ್ನನು ||
ಸಿಕ್ಕಿ ಬಹು ಸಂಸಾರ ಮಾಯೆಯ |
ಕಕ್ಕುಲಿತೆಯೊಳು ಬಿದ್ದೆನು ||
ಹೊಕ್ಕುದಿಲ್ಲವು ನಿನ್ನ ಪಾದವ |
ರಕ್ಕಸಾರಿಯೆ ಕೇಳು ದುಃಖವ 3
ಸುಳಿದೆ ಮನೆಮನೆ ಕಳೆದೆ ಕಾಲವ |
ಉಳಿದ ಯೋಚನೆ ಮಾಡದೆ ||
ಬೆಳೆದೆ ತಾಳೆಯ ಮರದ ತೆರದಲಿ ||
ಉಳಿವ ಬಗೆಯನು ನೋಡದೆ ||
ಎಳೆಯ ಮನದೊಳೆ ಇಳೆಯ ಜನರೊಳು |
ಬಳಕೆ ಮಾತುಗಳಾಡಿದೆ ||
ಕಳೆದೆ ಈ ಪರಿಯಿಂದ ಕಾಲವ |
ನಳಿನನಾಭನೆ ನಿನ್ನ ನೆನೆಯದೆ 4
ಎಡೆಬಿಡದೆಅನುದಿನದಿ ಪಾಪದ |
ಕಡಲೊಳಗೆ ನಾನಾಳ್ದೆನು ||
ದರವ ಕಾಣೆದೆ ಮಧ್ಯದಲಿ ಎ-|
ನ್ನೊಡಲೊಳಗೆ ನಾನೊಂದನು ||
ದೃಢದಿ ನಿನ್ನಯ ಧ್ಯಾನವೆಂಬಾ |
ಹಡಗವೇರಿಸು ಎನ್ನನು ||
ಒಡೆಯ ಪುರಂದರವಿಠಲ ಎನ್ನನು |
ಬಿಡದೆ ಕಾಯೈ ಬೇಗ ಶ್ರೀ ಹರಿ 5

No comments:

Post a Comment