ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪ
ವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||ವಾಸವಾಗಿರೆ ವನದಿ ಮೃಗ ತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ 1
ಖಳ ಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ 2
ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ 3
ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||ಪರಮಾತ್ಮನಿಗೆ ದೂತನಹುದು ಶುಭ ವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ 4
ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ 5
ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ 6
ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜ ಪಿತನಿಗೆ ಬಿನ್ನೈಸೊ ತಮ್ಮ 7
ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ 8
ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ 9
No comments:
Post a Comment