Labels

Friday 10 April 2020

ದಯೆಮಾಡಿ ಸಲಹಯ್ಯ dayamaadi salahayya


ದಯೆಮಾಡಿ ಸಲಹಯ್ಯ ಭಯನಿವಾರಣನೆ 
ಹಯವದನ ನಾ ನಿನ್ನ ಚರಣ ನಂಬಿದೆ ಕೃಷ್ಣ \\ಪ\\
ಕ್ಷಣಕ್ಷಣಕೆ ನಾ ಮಾಡಿದಂಥ ಪಾಪಗಳೆಲ್ಲ ಎಣಿಸಲಳವಲ್ಲಷ್ಟು ಇಷ್ಟು ಎಂದು 
ಫಣಿಶಾಹಿ ಅವಗುಣವ ನೋಡದೇ ಚರಣ ಸ್ಮರಣೆಯ ಮಾಡುವಂಥ ಭಕುತಿಯನಿತ್ತು \\1\\
ಕಂಡ ಕಂಡ ಕಡೆಗೆ ಪೋಪ ಚಂಚಲಮನಸು ಲಂಡತನದಲಿ ಬಹಳ ಭ್ರಷ್ಟ ನಾನು 
ಭಂಡಾಟದವನೆಂದು ಬಹಿರಂಗಕೆಳೆಯದೆ  ಕೊಂಡಾಡುವಂಥ ಭಕುತಿಯನಿತ್ತು ಸಲಹಯ್ಯ \\2\\
ಜಾತಿಧರ್ಮವ ಬಿಟ್ಟು ಅಜಮಿಳನು ಇರತಿರಲು ಪ್ರೀತಿಯಿಂದಲಿ ಮುಕುತಿಕೊಡಲಿಲ್ಲವೆ 
ಖ್ಯಾತಿಯನು ಕೇಳಿ ಮೊರೆಹೊಕ್ಕೆ ದಯಾನಿಧಿಯೆ ಬೆ|ನ್ನಾತು ಕಾಯಯ್ಯ ಶ್ರೀ ಪುರಂದರವಿಠಲ \\3\\


ದಣಿಯ ನೋಡಿದೆನೋ ವೆಂಕಟನ ಮನ daniya nodidano venkatana


ದಣಿಯ ನೋಡಿದೆನೋ ವೆಂಕಟನ ಮನ ದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನ \\ಪ\\ 
ಕೇಸಕ್ಕಿ ಅನ್ನ ಉಂಬುವನ ದುಡ್ಡು ಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||
ದೋಸೆ ಅನ್ನವ ಮಾರಿಸುವನ ತನ್ನ ದಾಸರ ಮೇಳದಿ ಕುಣಿದಾಡುತಿಹನ  \\1\\
ಗಂಟಿನೊಲ್ಲಿಯ ಹೊದ್ದಿಹನಹೊರ ಹೊಂಟು ಹೋಗಿ ಬೇಟೆಯಾಡುತಲಿಹನ ||
ಗಂಟೆ ನಾದಕೆ ಒಲಿಯುವನ ಭೂವೈಕುಂಠವಿದೆಂದು ಹಸ್ತವ ತೋರಿದವನ  \\2\\
ಬೆಟ್ಟದೊಳಗೆ ಇದುತಿಹನ ಮನ ಮುಟ್ಟೆ ಭಜಿಪ ಭಕುತರಿಗೊಲಿದವನ ||
ಕೊಟ್ಟ ವರವ ತಪ್ಪದವನ ಈ ಸೃಷ್ಟಿಗಧಿಕ ಪುರಂದರ ವಿಠಲನ  \\3\\


ತ್ರುಟಿಗೆ ಕ್ಷಣಕೆ ನೆನೆಮನವೇ - ಹರಿಯ trutige kshanake nenemanave


ತ್ರುಟಿಗೆ ಕ್ಷಣಕೆ ನೆನೆಮನವೇ ಹರಿಯ  ತ್ರುಟಿಗೆ ಕ್ಷಣಕೆ ನೆನೆಮನವೆ ಪತ್ರುಟಿಗೆ ಕ್ಷಣಕೆ ನೆನೆ ಕ್ಷಣಕೆ ಲವಕೆ ನೆನೆ \\ಪ\\
ಘಟಿಗೆ ಘಟಿಗೆ ನೆನೆ, ಇರುಳು ಹಗಲು ನೆನೆ ಅ.ಪಜಠರದಿ ಜಗತಿಗೆ ಹಿರಿಯಜಗನ್ನಾಟಕಮೋಹ ಸೂತ್ರಧಾರಿಯ ||
ಪಟು ಹಿರಣ್ಯಾಕ್ಷ ಸಂಹಾರಿಯ ನಿಷ್ಠುರನಾದ ಕಂಸಾರಿಯ   \\1\\
ರಣಿತ ಕಂಕಣ ನೂಪುರಿಯರುಕ್ಮಿಣಿಯನಾಳುವ ದೊಡ್ಡ ದೊರೆಯ ||
ಗುಣನಿಧಿ ಗೋವರ್ಧನಧಾರಿಯನೀ ಕರುಣಿಯು ಅವನೆಂದರಿಯ   \\2\\
ನವನೀತದಧಿತಸ್ಕರಿಯ ಈ ಭವಹರ ಒಡೆಯನೆಂದರಿಯ ||
ಜವನು ಕೇಳಲು ನಿನ್ನ ಮೊರೆಯ ಚಿಹಿ ಅವನ ನಾಲಗ್ಗೆ ಮುಳ್ಳು ಮುರಿಯ   \\3\\
ಮನಕಭಾಗಿಗೆ ಶ್ರುತಿಯರಿಯದಂಥ ಘನಪಾಪಿಗಳಿಗವ ದೊರೆಯ ||
ನೆನೆವರ ಪಾಲಿಪುದ ಮರೆಯ ಸುಮ್ಮನೆ ಇರಲವ ನಮ್ಮ ಪೊರೆಯ  \\4\\
ಸ್ಮರಿಸಲು ಯಮ ನಿನ್ನ ದಾರಿಯ ಹೋಗ ವರಭಾರತಿಪತಿ ಮರೆಯ \\
ಪುರಂದರವಿಠಲ ದೊರೆಯ ನೆನೆದಿರೆ ಯಮ ನಿನ್ನನು ಕೊರೆಯ \\5\\



ತೋಳು ತೋಳು ತೋಳು ಕೃಷ್ಣ-ತೋಳನ್ನಾಡೈ | tolu tolu Krishna


ತೋಳು ತೋಳು ತೋಳು ಕೃಷ್ಣತೋಳನ್ನಾಡೈ ನೀಲ ಮೇಘಶ್ಯಾಮ ಕೃಷ್ಣ ತೋಳನ್ನಾಡೈ \\ಪ\\
ಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋ
ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋ
ನೆಲುವು ನಿಲುಕದೆಂದೊರಳ ತಂದಿಡುವನೆ ತೋ
ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋ\\1\\
ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋ-|
ಕಟ್ಟದ ಕರಡೆಯ ಕರುವೆಂದೆಳೆವನೆ ತೋ-||
ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋ-|
ಬಟ್ಟಲ ಹಾಲನು ಕುಡಿದು ಕುಣಿವನೆ ತೋ\\2\\
ಅಂಬೆಗಾಲಿಲೊಂದೊರಳನ್ನೆಳೆವನೆ ತೋ-|
ತುಂಬಿದ ಬಂಡಿಯ ಮುರಿಯಲೊದ್ದವನೆ ತೋ-|
ಕಂಬದಿಂದಲವತರಿಸಿದವನೆ ನೀ ತೋ-|
ನಂಬಿದವರನು ಹೊರೆವ ಕೃಷ್ಣ ತೋ \\3\\
ಕಾಲಕೂಟದ ವಿಷವ ಕಲಕಿದ ತೋ-|
ಕಾಳಿಂಗನ ಹೆಡೆಯನು ತುಳಿದ ತೋ-||
ಕಾಳೆಗದಲಿ ದಶಕಂಠನ ಮಡುಹಿದ ತೋ-|
ಶಾಲಕ ವೈರಿಯೆ ಕರುಣಿಗಳರಸನೆ ತೋ \\4\\


ತೇಲಿಸೊ ಇಲ್ಲ ಮುಳುಗಿಸೊ- ನಿನ್ನ teliso illa mulagiso


ತೇಲಿಸೊ ಇಲ್ಲ ಮುಳುಗಿಸೊ ನಿನ್ನ ಪಾಲಿಗೆ ಬಿದ್ದೆನೊ ಪರಮ ದಯಾಳೊ \\ಪ\\
ಸತಿಸುತ ಧನದಾಶೆ ಎಂತೆಂಬ ಮೋಹದಿ  ಹಿತದಿಂದ ಅತಿನೊಂದು ಬಳಲಿದೆನೊ ||
ಗತಿಯನೀವರ ಕಾಣೆ ಮೊರೆಯ ಲಾಲಿಸೊ ಲಕ್ಷ್ಮೀ ಪತಿ ನಿನ್ನ ಚರಣದ ಸ್ಮರಣೆಯಿತ್ತೆನ್ನ \\1\\
ಜರೆ ರೋಗ ದಾರಿದ್ರ್ಯ ಕಶ್ಮಲವೆಂತೆಂಬ ಶರಧಿಯೊಳಗೆ ಬಿದ್ದು ಮುಳುಗಿದೆನೊ ||
ಸ್ಥಿರವಲ್ಲ ಈ ದೇಹ ನೆರೆನಂಬಿದೆನು ನಿನ್ನ ಕರುಣಾಭಯವನಿತ್ತು ಪಾಲಿಸೊ ಹರಿಯೆ \\2\\
ದೋಷವುಳ್ಳವ ನಾನು ಭಾಷೆಯುಳ್ಳವ ನೀನು ಮೋಸ ಹೋದೆನೊ ಭಕ್ತಿರಸವ ಬಿಟ್ಟು ||
ದಾಸರ ಸಂಗವಿತ್ತು ಪಾಲಿಸೊ ಹರಿಯೆ\\ 3\\


ತೂಗಿರೆ ರಂಗನ್ನ ತೂಗಿರೆ ಕೃಷ್ಣನ tugire rangana tugire krishnanna


ತೂಗಿರೆ ರಂಗನ್ನ ತೂಗಿರೆ ಕೃಷ್ಣನ ತೂಗಿರೆ ಅಚ್ಯುತಾನಂತನ \\ಪ\\
ತೂಗಿರೆ ವರಗಿರಿ ಅಪ್ಪ ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ \\ಅಪ\\
ಇಂದ್ರಲೋಕದೊಳುಪೇಂದ್ರ ಮಲಗಿಹನೆ ಬಂದೊಮ್ಮೆ ತೊಟ್ಟಿಲ ತೂಗಿರೆ
ಮಂದಗಮನೆಯರು ಚೆಂದದಿ ಪಾಡುತ ನಂದನ ಕಂದನ ತೂಗಿರೆ \\1\\
ನಾಗಲೋಕದಲ್ಲಿ ನಾರಾಯಣ ಮಲಗಿಹನೆ ಹೋಗಿ ನೀವ್ ತೊಟ್ಟಿಲ ತೂಗಿರೆ
ನಾಗವೇಣಿಯರು ನಾಲ್ಕು ನೇಣನು ಪಿಡಿದು ಭಾಗ್ಯವಂತನೆಂದು ತೂಗಿರೆ\\2\\
ಜಲಧಿಯೊಳಾಲದ ಎಲೆಯಲ್ಲಿ ಮಲಗಿದ ಚೆಲುವನ ತೊಟ್ಟಿಲ ತೊಗಿರೆ
ಸುಲಭ ದೇವರ ದೇವ ಬಲಿಬಂಧಮೋಚಕ ಎಳೆಯನ ತೊಟ್ಟಿಲ ತೂಗಿರೆ\\ 3\\
ಸೂಸುವ ಮಡುವಿನೊಳ್ ಕಾಳಿಯನ ತುಳಿದಿಟ್ಟ ದೋಷವಿದೂರನ ತೂಗಿರೆ
ಸಾಸಿರ ನಾಮದ ಸರ್ವೋತ್ತಮನೆಂದು ಲೇಸಾಗಿ ತೊಟ್ಟಿಲ ತೂಗಿರೆ \\4\\
ಅರಳೆಲೆ ಮಾಗಾಯಿ ಕೊರಳ ಪದಕ ಸರ ತರಳನ ತೊಟ್ಟಿಲ ತೂಗಿರೆ
ಉರಗಾದ್ರಿವಾಸ ಶ್ರೀ ಪುರಂದರವಿಠಲನ ಹರುಷದಿ ಪಾಡುತ ತೂಗಿರೆ \\5\\


ತುರುಕರು ಕರೆದರೆ ಉಣಬಹುದಣ್ಣ turakaru karedare unabahudanna


ತುರುಕರು ಕರೆದರೆ ಉಣಬಹುದಣ್ಣ ತುರುಕರು ಕರೆದರೆ ಉಣಬಹುದು \\ ಪ\\
ಕರ ಕರೆ ಚಂಚಲ ಮಾಡದಿರಣ್ಣ ತುರುಕರು ಕರೆದರೆ ಉಣಬಹುದು \\ಅಪ \\
ತುರುಕರುವಿಂದ ಮುಟ್ಟು ಮುಡಚಟ್ಟು ಹೋಹುದು  ತುರುಕರುವಿಂದ ಹೋಹದು ಎಂಜಲವು ||
ತುರುಕರು ಕಂಡರೆ ಸರಕನೆ ಏಳಬೇಕು  ತುರುಕರುವಿನ ಮಂತ್ರ ಜಪಿಸಬೇಕಣ್ಣ\\1\\
ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು  ತುರುಕರುವಿಂದ ನರಕ ದೂರಪ್ಪುದು ||
ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು  ಗರತಿಯರೆಲ್ಲ ಮುತ್ತೈದೆಯರಣ್ಣ \\2\\
ತುರುಕರುವಿನ ನೀರೆರಕೊಂಡ ನಮ್ಮ ದೇವ  ಉರವಕೊಂಡ ನೀರೆಲ್ಲ ಸನಕಾದಿಗೆ ||
ಬೆರಕೆಯ ಮಾಡಿದ ಪುರಂದರವಿಠಲ  ಅರಿಕೆಯ ಮಾಡಿದ ಹರಿದಾಸರಿಗೆಲ್ಲ\\3\\


ತುದಿನಾಲಿಗೆ ಬೆಲ್ಲ ಎದೆಗತ್ತರಿಯವರ tudinaalige bella


ತುದಿನಾಲಿಗೆ ಬೆಲ್ಲ ಎದೆಗತ್ತರಿಯವರ ಸಂಗಬೇಡ ಹೃದಯ ದಾಕ್ಷಿಣ್ಯವನರಿಯದ ಮನುಜರ ಪ್ರಸಂಗಬೇಡ \\ಪ\\
ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗಬೇಡ ಕುಂದು  ನಿಂದೆಗಳ ಪ್ರಯೋಗ ಮಾಡುವರ
ಪ್ರಸಂಗ ಬೇಡ \\1\\
ಆಡಿ ಅಳುಕದ ಅಜ್ಞಾನಿ ಮನುಜರ ಸಂಗಬೇಡ ಕೂಡಿ ಕುಮಂತ್ರವ ಎಣಿಸುವ ನರರ ಪ್ರಸಂಗ ಬೇಡ\\ 2\\
ವಿನಯ - ವಿವೇಕವಿಲ್ಲದ ವಿದ್ವಾಂಸರ ಸಂಗಬೇಡ ತನಗಲ್ಲದ ಬಂಟ  ನಂಟ ಮಿತ್ರಾಂಗಳ ಸಂಗಬೇಡ \\3\\
ತಮ್ಮ ಕಾರ್ಯಕ್ಕಾಗಿ ಪರರ ಕೆಡಿಸುವರ ಸಂಗ ಬೇಡ ನಮ್ಮ ಪುರಂದರವಿಠಲನಿರಲನ್ಯ ಪ್ರಸಂಗ ಬೇಡ \\4\\


ತು0ಟನಿವನು ಕಾಣಮ್ಮ ಗೋಪಾಲನು tuntanivanu kaanamma


ತು0ಟನಿವನು ಕಾಣಮ್ಮ ಗೋಪಾಲನು| ಉಂಟೋ ಇಲ್ಲವೊ ಕೇಳಮ್ಮ \\ಪ\\
ಎಂತೆರಡು ಸಾವಿರ ನಂತರ ಹೆಂಗಳ ತುಂಟು ಮಾಡಿ ರವಿಕೆಗಂಟು ಬಿಚ್ಚಿ ನಿಂತ \\ಅ.ಪ\\
ಹಸಿರು ಪಟ್ಟೆಯನು ಉಟ್ಟು ನಮ್ಮನೆ ಹೆಣ್ಣು ಮೊಸರು ಕಡೆಯುತಿರಲು||
ನಸುನಗುತಲಿ ಬಂದು ಕುಸುಮ ಮಲ್ಲಿಗೆ ಮುಡಿಸಿ| ಬಸಿರು ಮಾಡಿದನೆಂಥ ಹಸುಳನೆ ಗೋಪಿ \\ 1\\
ಮುದ್ದುನಾರಿಯರು ಕೂಡಿ-ನಮ್ಮನೆಯಲಿ ಉದ್ದಿನ ವಡೆಯ ಮಾಡಲು||
ಸದ್ದು ಮಾಡದೆ ಎಂದು ಎದ್ದೆದ್ದು ನೋಡುತ ಇದ್ದ ವಡೆಯನೆಲ್ಲ ಕದ್ದು ಮೆದ್ದೋಡಿದ \\2\\
ಗೊಲ್ಲ ಬಾಲಕರ ಕೂಡಿ-ಮನೆಯಲಿದ್ದ ಎಲ್ಲ ಬೆಣ್ಣೆಯ ಮೆಲ್ಲಲು ||
ಗುಲ್ಲು ಮಾಡದೆ ನಾವು ಎಲ್ಲರು ಒಂದಾಗಿ  ತಳ್ಳ ಹೋದರೆ ನಮಗೆ ಬೆಲ್ಲವ ತೋರಿದ \\3\\
ಹೊತ್ತು ಮುಳುಗುವ ಸಮಯದಿ-ನಮ್ಮನೆ ಹೆಣ್ಣು  ಹತ್ತಿ ಹೊಸೆಯುತಿರಲು |
ಮುತ್ತು ಹವಳ ಸರ ಕತ್ತಿಗೆ ಹಾಕಿ ಸೀರೆ  ಎತ್ತಿ ನೋಡಿದನು ತಾ ಬತ್ತಲೆ ನಿಂತ\\4\\
ತಿಲಕ ಕತ್ತುರಿಯನಿಟ್ಟು-ನಮ್ಮನೆ ಹೆಣ್ಣು  ಗಿಲುಕು ಮಂಚದಲಿರಲು ||
ತಿಲಕ ತಿದ್ದುತ ಕುಚಕಲಶ ಪಿಡಿದು ತನ್ನ |ಕೆಲಸವ ತೀರಿಸಿದ ಪುರಂದರವಿಠಲ \\5\\


ತುಂಗೆ ಮಂಗಳತರಂಗೆ-ಹರಿಸರ್ವಾಂಗೇ tunge mangala tarange


ತುಂಗೆ ಮಂಗಳತರಂಗೆ-ಹರಿಸರ್ವಾಂಗೇ  ಜಯಜಯ ಜಯತು ತುಂಗೆ  \\ ಪ\\
ಆದಿಯಲೊಬ್ಬ ದೈತ್ಯ ಮೇದಿನಿಯಕದ್ದೊಯ್ದ ಸಾಧಿಸಿ ರಸಾತಳದಲ್ಲಿರಿಸೆ ||
ಭೇದಿಸಿದವನ ನಾಸಿಕದಲ್ಲಿ ಪುಟ್ಟಿದೆ  ಆದಿವರಾಹನ ದಾಡೆಯಲಿ ಬಂದೆ ದೇವಿ   \\1\\
ಜಲವೆಲ್ಲ ಹರಿಮಯ, ಶಿಲೆಯೆಲ್ಲ ಶಿವಮಯ ಮಳಲುಮಿಟ್ಟೆಗಳೆಲ್ಲ ಮುನಿಮಯವು ||
ಬೆಳೆದ ದರ್ಭೆಗಳು ಸಾಕ್ಷಾತು ಬ್ರಹ್ಮಮಯ ನಳಿನನಾಳವು ಸರ್ವ ವಿಷ್ಣುಮಯ   \\2\\
ಇದೆ ವೃಂಧಾವನ, ಇದೆ ಕ್ಷೀರಾಂಬುಧಿ  ಇದೆ ವೈಕುಂಠಕೆ ಸರಿಮಿಗಿಲೆನಿಸಿದೆ ||
ಇದೆ ಬದರಿಕಾಶ್ರಮ, ಇದೆ ವಾರಣಾಸಿಗೆ, ಅಧಿಕವೆಂದೆನಿಸಿದೆ ದೇವಿ ತುಂಗೆ   \\3\\
ಧರೆಗೆ ದಕ್ಷಿಣವಾರಣಾಸಿಯೆಂದೆನಿಸಿದೆ  ಪರಮ ಪವಿತ್ರ ಪಾವನ ಚರಿತ್ರೆಯು ನಿನ್ನ ||
ಸ್ಮರಣೆಮಾತ್ರದಿ ಕೋಟಿ ಜನ್ಮದಘವನಳಿವ  ಪರಮ ಸಾಯುಜ್ಯದ ಫಲವೀವ ದೇವಿ  \\ 4\\
ಪರಮಭಕ್ತ ಪ್ರಹ್ಲಾದಗೊಲಿದು ಬಂದ  ಪರಮ ನರಸಿಂಹಕ್ಚೇತ್ರವೆಂದೆನಿಸಿ ಮೆರೆದೆ ||
ಧರೆಯೊಳಧಿಕವಾದ ಕೂಡಲಿ ಪುರದಲಿ  ವರದ ಪುರಂದರ ವಿಠಲನಿರಲು ಬಂದೆ   \\5\\


ತಾಳು ತಾಳೆಲೊ ರಂಗಯ್ಯ taalu taalelu rangayya


ತಾಳು ತಾಳೆಲೊ ರಂಗಯ್ಯ ನೀ  ತಾಳು ತಾಳೆಲೊ ಕೃಷ್ಣಯ್ಯ   \\ಪ \\
ನಾಳೆ ನೀನು ನಮ್ಮ ಮನೆಗೆ ಬಂದರೆ  ಕಾಲ ಕಂಬಕೆ ಕಟ್ಟಿ ಪೇಳುವೆ ಗೋಪಿಗೆ   \\ಅ.ಪ\\
ದೊರೆಗಳ ಮಗನೆಂಬುದಕೇನೊ ಬಹು  ಧುರದಿ ಮನೆಯ ಪೊಕ್ಕ ಪರಿಯೇನೊ ||
ದುರುಳತನದ ಬುದ್ಧಿ ಸರಿಯೇನೊ ನೀನು ತಿರಿದು ಬೇಡುಂಡದ್ದು ಮರೆತೆಯೇನೊ   \\1\\
ಚಿಕ್ಕಮಕ್ಕಳು ಇಲ್ಲವಂತೇನೊ ನಿನಗೆ ಕಕ್ಕೂಲಾತಿಯಿಂದಲಿ ನಿನ್ನ ||
ಸಿಕ್ಕಿದ ಶ್ರೀಲೋಲ ಹಿಡಿಹಿಡಿಯೆಂದರೆ  ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ   \\2\\
ಕಟ್ಟಿದ ತುರುಗಳ ಮೊಲೆಯುಂಡು ಕರು  ಬಿಟ್ಟ ಕಾರಣವೇನು ಹೇಳೊ ||
ಸೃಷ್ಟೀಶ ಪುರಂದರವಿಠಲರಾಯನೆ  ಇಟ್ಟಿಗೆಯ ಮೇಲೆ ಬಂದು ನಿಂತ ಕಾರಣವೇನೊ?  \\3\\

ತಾಳಿಯ ಹರಿದು ಬಿಸಾಡೆ ನೀ taaliya haridu bisade nee


ತಾಳಿಯ ಹರಿದು ಬಿಸಾಡೆ ನೀ ಹೇಳಿದವರ ಮಾತ ಕೇಳೇ ಗೈಯ್ಯಾಳಿ   \\ಪ.\\
ಎಲ್ಲಮ್ಮ ಎಕಲಾತಿ ಉರಿಮಾರಿ ಉಡತಮ್ಮ ಬುಲ್ಲ ಮಹಿಸಾಸುರ ದೈವವೆಂದೆ
ಎಲ್ಲ ದೈವಗಳು ನಾಯಾಗಿ ಹರಿವಾಗ ಕಳ್ಳದೇವರ ನೆಚ್ಚಿ ಕೆಡಬೇಡ ಮೂಳಿ   \\1\\
ಕೊರಳೊಳು ಕವಡಿಯ ಶಿರದಲಿ ಹಡಲಿಗೆ ಕರದಲಿ ದೀವಟಿಗೆ ಉರಿಸುತಲಿ
ಉರಿವ ಪಂಜನೆ ಪಿಡಿದು ಉಧೋ ಉಧೋ ಎನುತಲಿ ತಿರುಗಿದ ಕೇರಿಗುಂಟ ಮೂಳಿ  \\2\\
ಸೀಡಿಯ ಮುಳ್ಳನೆ ತಂದು ನಡುಬೆನ್ನಲೂರಿಕೊಂಡು ಒಡೆಯ ಮಲ್ಲಣನೆಂದು ಜೋಲಾಡು
ಕಡುಹರಿ ಯಮದೂತರು ಬಂದು ಎಳೆವಾಗ ಒಡೆಯ ಮೆಲ್ಲುಣ್ಣೆತ್ತು ಹೋದನೆ ಮೂಳಿ   \\3\\
ಗುಂಡಿಗೆ ಎಣ್ಣೆಯ ಎಡಗೈಯಲಿಟ್ಟು ಕೊಂಡು ಗುಂಡಿಗೆ ತುಪ್ಪವ ಮುಂದಿಟ್ಟು ಕೊಂಡು
ಮಿಂಡೆ ಮೈಲಾರಿಯ ಖಂಡೆರಾಯನೆಂದು ಕೆಂಡದ ಮೇಲೆ ರೊಟ್ಟಿಯ ಸುಟ್ಟು ಮೂಳಿ   \\4\\
ಹೊನ್ನುನಾಗರ ಮಾಡಿ ಬಣ್ಣಿಸಿ ಕಿವಿಗಿಟ್ಟು ನನ್ನಯ್ಯ ನಾಗಪ್ಪ ಸಲುಹೆನ್ನುತ
ಚಿನ್ನನಾಗರ ಬಂದು ಓಡಾಡಿ ಕಡಿವಾಗ ಹೊನ್ನನಾಗರ ಎತ್ತ ಹೋದನೆ ಮೂಳಿ  \\ 5\\


ತಾಳಬೇಕು - ತಕ್ಕ - ಮೇಳಬೇಕು taalabeku tanna melabeku



ತಾಳಬೇಕು ತಕ್ಕ ಮೇಳಬೇಕು - 
ಶ್ರೀ ಲೋಲನಚರಿತೆಯ ಹೇಳುವ ದಾಸರಿಗೆ ಪಗಳಶುದ್ಧಿ ಇರಬೇಕು |
 ತಿಳಿದು ಪೇಳಲು ಬೇಕು|ಕಳವಳಬಿಡಬೇಕು ಕಳೆಮೊಗವಿರಬೇಕು 1
ಯತಿ ಪ್ರಾಸವಿರಬೇಕು  ಗತಿಗೆ ನಿಲ್ಲಿಸಬೇಕು ||
ಶ್ರುತಿಪತಿ ಕೇಳಬೇಕು ರತಮುಖವಿರಬೇಕು 2
ಹರಿದಾಸನಾಗಿರಬೇಕು ಹರುಷ ಪಡುತಿರಬೇಕು 
ಪುರಂದರವಿಠಲನಲಿ  ಸ್ಥಿರಚಿತ್ತವಿರಬೇಕು 3


ತಾಸು ಬಾರಿಸುತಿದೆ ಕೇಳಿ - ಹರಿದಾಸರೆಲ್ಲ taasu baarisutide keli


ತಾಸು ಬಾರಿಸುತಿದೆ ಕೇಳಿ  ಹರಿದಾಸರೆಲ್ಲ ತಾಸು ಬಾರಿಸುತಿದೆ ಕೇಳಿ \\ಪ.\\
ಹಾಸುಮಂತ ಸುಪ್ಪತ್ತಿಗೆಯಲಿ  ಹಗಲು ಇರುಳು ಹೇಸರಗತ್ತೆಯಂತೆ ಹೊರಳಿ  ಸ್ತ್ರೀಯರಗೂಡ |
ಬೇಸರದೆ ನಿತ್ಯವು ಉರುಳಿ ||ಈ ಪರಿ ಕಾಲವ ಕಳೆದೆಯೊ ಕಾಲ ಸಮೀಪವಾಯಿತು ಎಂದೀಗಲೆ  \\1\\
ವೃಧ್ಧ ಯಾವನ ಬಾಲಕಾಲ  ವಿವೇಕವಿಲ್ಲದ ಬುದ್ಧಿ ಮಾಂದ್ಯವು ಹಲವು ಕಾಲ  ಆಹಾರಸಂಗ 
ನಿದ್ರೆಯಿಂದಲಿ ಅತಿಲೋಲ ಈಶನ ಭಜಕರ ಭಜಿಸದೆ ಮಾನುಷಾ ಯುಷ್ಯವೆಲ್ಲವು ವ್ಯರ್ಥವಾಯಿತಾಯಿತೆಂದು \\ 2\\
ಕಂಡ ವಿಷಯವ ಕಾಮಿಸಿ  ಕಷ್ಟಪಡದೆ  ತಾಂಡವ ಕೃಷ್ಟನ ಭೇಸಿ  ಪುಂಡನೆನಿಸದೆ
ಭಂಡಧಾವತಿಯನು ತ್ಯಜಿಸಿ ಪುಂಡರೀಕಾಕ್ಷ ಪುರಂದರವಿಠಲನ ಕೊಂಡು ಭಜಿಸಿರೈಯ ಢಂ ಢಂ ಢಂ ಡಣ್ಣೆಂದು \\3\\.


ತಾರಿಸೊ ಶ್ರೀಹರಿ ತಾರಿಸೊ taarisu shree taariso


ತಾರಿಸೊ ಶ್ರೀಹರಿ ತಾರಿಸೊ ಪ
ತಾರಿಸೊ ಭವವ ನಿವಾರಿಸೊ ನಿನ್ನಡಿಯ ತೋರಿಸೊ ವೈಕುಂಠ ಸೇರಿಸೋ ರಂಗಯ್ಯ ಅ.ಪ
ಪಾಪವಿನಾಶನ ಮಾಡುವಿ ನೀ ತಾಪಸರನು ನಿತ್ಯ ಸಲಹುವಿ ||
ವ್ಯಾಪಿಸಿ ಸರ್ವತ್ರ ನಿನ್ನವರನು ಕಾಯ್ವ ಶ್ರೀ ಪಾಂಡುರಂಗ ಪರಮಾತ್ಮ ಮುಕುಂದ 1
ಹಿರಣ್ಯಕಶಿಪುವನು ಸೀಳಿದೆ ಅವನ ಕರುಳನು ಕೊರಳೊಳು ಹಾಕಿದೆ ||
ದುರಳ ಬುದ್ಧಿಯ ತಳೆದ ದೈತ್ಯಾಧಮನ ಕೊಂದ ಕರುಣ ದಿಂದಲಿ ಕಂದಗೊಲಿದೆ ಗೋವಿಂದ 2
ಅಸುರೆ ಪೂತನಿಯ ಸಂಹರಿಸಿದೆ ನೀ ಶಶಿಮುಖಿಯಭಿಮಾನ ಕಾಯ್ದೆ ||
ಶಿಶುವಾಗಿ ಬಾಲಲೀಲೆಗಳನು ತೋರಿದೆ ಕುಸುಮನಾಭ ಶ್ರೀ ಪುರಂದರ ವಿಠಲ 3


ತಾರಮ್ಮಯ್ಯ-ಯದುಕುಲ taarammayya yadukula


ತಾರಮ್ಮಯ್ಯಯದುಕುಲ ವಾರಿಧಿ ಚಂದ್ರಮನ   \\ಪ\\
ಮಾರಜನಕನಮೋಹನಾಂಗನ ಸೇರಿ ಸುಖಿಸೆ ಹಾರೈಸಿ ಬಂದೆವು   \\ಅ.ಪ\\
ಬಿಲ್ಲು ಹಬ್ಬಗಳಂತೆ ಅಲ್ಲಿ ಬೀದಿ ಶೃಂಗಾರವಂತೆ ||
ಮಲ್ಲಕಾಳಗೆ ಮದ್ದಾನೆಗಳಂತೆ  ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ  \ \1\\
ಮಧುರಾಪುರವಂತೆ-ಅಲ್ಲಿ-ಮಾವ ಕಂಸನಂತೆ ||
ಒದಗಿದ ಮದಗಜ ತುರಗ ಸಾಲಿನಲಿ | ಮದನಮೋಹನ ಕೃಷ್ಣ ಮಧುರೆಗೆ ತೆರಳಿದ  \\ 2\\
ಅತ್ತೆ ಮಾವನ ಬಿಟ್ಟು-ಬಂದೆವು ಹಿತ್ತಲ ಬಾಗಿಲಿಂದ ||
ಭಕ್ತವತ್ಸಲನ ಬಹು ನಂಬಿದ್ದೆವು | ಉತ್ಸಾಹ ಭಂಗವ ಮಾಡಿದನಮ್ಮ \\3\\
ರಂಗನ ನೆರೆನಂಬಿಬಂದೆವು-ಸಂಗ ಸುಖವ ಬಯಸಿ ||
ಭಂಗಿಸಿ ನಮ್ಮನು ಹಾಗೆ ಪೋದನಮ್ಮ  ಮಂಗಳ ಮೂರುತಿ ಮದನ ಗೋಪಾಲನು   \\4\\
ಶೇಷಗಿರಿಯ ಮೇಲೆಹರಿ ತಾವಾಸವಾಗಿಹ ಕಾಣೆ ||
ಸಾಸಿರನಾಮದ ಒಡೆಯನೆಂದೆನಿಸಿದ  ಶ್ರೀ ಪುರಂದರವಿಠಲರಾಯನ \\5\\


ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ taarakka bindige neeroge


ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ  ತಾರೆ ಬಿಂದಿಗೆಯ \\ಪ.\\
ತರಲಾಗದಿದ್ದರೆ ಬಲಿಯಿಟ್ಟು ಬರುವೆನು ತಾರೆ ಬಿಂದಿಗೆಯ.  \\ಅಪ  \\
ಅಚ್ಚುತನೆಂಬುವ ಕಟ್ಟೆಯ ನೀರಿಗೆತಾರೆಬಿಂದಿಗೆಯ ಅಲ್ಲಿ  ಮತ್ಸರ ಕ್ರೋಧವೆಂಬ ಕೊಡವನು ತೊಳೆವೆನು ತಾರೆ  \\1\\
ರಾಮನಾಯವೆಂಬ ಸಾರದ ನೀರಿಗೆ ತಾರೆಬಿಂದಿಗೆಯ  ಹರಿ ರಾಮವೆಂಬುವ ಹರಿದು ಹೋಗುವ ನೀರಿಗೆ ತಾರೆ   \\2\\
ಅe್ಞÁನವೆಂಬ ನೀರ ಚೆಲ್ಲಿಬಂದೆನು ತಾರೆ ಬಿಂದಿಗೆಯ ಸುಙÁ್ಞವೆಂಬುವ ನೀರಿಗೆ ಹೋಗುವೆ ತಾರೆ \\3\\
ಗೋವಿಂದನೆಂಬುವ ಗುಣವುಳ್ಳ ನೀರಿಗೆ ತಾರೆ ಬಿಂದಿಗೆಯ ಚೆಲ್ವ ಬೆಳದಿಂಗಳೊಳು ಚಿಲುಮೆಯ ನೀರಿಗೆ ತಾರೆ   \\4\\
ಬಿಂದು ಮಾಧವನ ಏರಿಯ ನೀರಿಗೆ ತಾರೆಬಿಂದಿಗೆಯ ಪುರಂದರವಿಠಲನ ಅಭಿಷೇಕಕೆ ಬೇಕು ತಾರೆ 5


ತಾಪಡೆದು ಬಂದುದಕುಪಾಯವೇನು taapadedu bandudaku payavenu


ತಾಪಡೆದು ಬಂದುದಕುಪಾಯವೇನು  ಕೋಪದಲಿ ಶ್ರೀಪತಿಯ ಶಾಪಿಸಿದರೇನು   \\ಪ.\\
ಅನ್ನವಸ್ತ್ರವಿಲ್ಲವೆಂದು ಅತಿ ಕ್ಲೇಶಪಟ್ಟರೇನು  ಧಾನ್ಯಧನಗಳ ಬೇಡಿ ಧರೆಗಿಳಿದರೇನು |
ಎಣ್ಣಿಯನು ಪೂಸಿ ಹುಡಿಯೊಳಗೆ ಹೊರಳಿದರೇನು  ತನ್ನ ತಲೆ ಅಡಿಮಾಡಿ ತಪವ ಮಾಡಿದರೇನು   \\1 \\
ಸರಿಯ ಸುಜನರ ಕಂಡು ಕರುಬಿ ಕೊರಗಿದರೇನು  ಬರಿಮಾತುಗಳನಾಡಿ ಭ್ರಷ್ಟನಾದರೆ ಏನು ||
ಇರುಳು ಹಗಲೂ ಹೋಗಿ ಆರ ಮೊರೆಯಿಟ್ಟರೇನು  ಅರಿಯದ - ಮನುಜರಿಗೆ ಆಲ್ಪರಿದರೇನು   \\2 \\
ಹೋಗದೂರಿನ ದಾರಿ ಕೇಳಿ ಮಾಡುವದೇನು  ಮೂಗನ - ಕೂಡ ಏಕಾಂತವೇನು ||
ಯೋಗೀಶ ಪುರಂದರವಿಠಲನ ನೆನೆಯದವ  ತ್ಯಾಗಿಯಾದರೆ ಏನು ಭೋಗಿಯಾದರೆ ಏನು   \\3 \\


ತಾನು ಮಾಡಿದ ಕರ್ಮ ತನಗಲ್ಲದೆ taanu maadida karma


ತಾನು ಮಾಡಿದ ಕರ್ಮ ತನಗಲ್ಲದೆ ಏನ ಮಾಡಿದರು ಹಿಂದಿನ ಕರ್ಮವಲ್ಲದೆ  \\ಪ.\\
ಮರಳಿ ಮರಳಿ ನೀರ ಹೊಕ್ಕು ಹೊರಟರೆ ಇಲ್ಲ  ಹೊರೆ ಹೊತ್ತು ತಲೆಪರಟೆಗಟ್ಟಿದರೂ ಇಲ್ಲ ||
ಬರಿಯೆ ಭೂಮಿಯ ಕೆದರಿ ತೋಡಿ ನೋಡಿದರಿಲ್ಲ  ಪರರಿಗೆ ಬಾಯ್ದೆರೆದರೇನೊ ಇಲ್ಲ   \\1\\
ಬಲಿದ ದೇಹವನಲ್ಪ ಮಾಡಿ ಬೇಡಿದರಿಲ್ಲ  ನೆಲದಿ ಕೊಲೆಗಡುಕ ತಾನಾದರಿಲ್ಲ ||
ತಲೆಯಲಿ ಜಡೆಗಟ್ಟಿ ಅಡವಿ ಸೇರಿದರಿಲ್ಲ  ಕೊಳಲೂದಿ ತುರುಗಳನು ಕಾಯ್ದರಿಲ್ಲ   \\2\\
ಧೀರತನ ಬಿಟ್ಟು ದಿಗಂಬರನಾದರು ಇಲ್ಲ  ಮೀರಿದ್ದ ರಾಹುತ ತಾನಾದರಿಲ್ಲ ||
ವರದ ಶ್ರೀ ಪುರಂದರವಿಠಲನ ಚರಣವ  ಸ್ಮರಿಸುತ ಅನುದಿನ ಸುಖಿಯಾಗಿರಯ್ಯ  \\3\\


ತಲ್ಲಣಿಸದಿರು ಕಂಡ್ಯ ತಾಳು ಮನವೆ tallanisadiru kandya taalu


ತಲ್ಲಣಿಸದಿರು ಕಂಡ್ಯ ತಾಳು ಮನವೆ ಸ್ವಾಮಿ ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ \\ಪ\\
ಬೆಟ್ಟದ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ ಕಟ್ಟೆ ಕಟ್ಟುತ ನೀರ ಹೊಯ್ವರಾರು
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ ಕೊಟ್ಟು ರಕ್ಷಿಸುವನು ಇದಕೆ ಸಂದೇಹ ಬೇಡ   \\1\\
ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆ ಅಡಿಗಡಿಗೆ ಆಹಾರವಿತ್ತವರದಾರು
ಪಡೆದ ಜನಿನಿಯಂತೆ ಸಾರಥಿಯಾಗಿ ತಾಬಿಡದೆ ರಕ್ಷಿಸುವನು ಇದಕೆ ಸಂದೇಹಬೇಡ   \\2\\
ಕಲ್ಲೊಳಗೆ ಪುಟ್ಟಿ ಕೂಗುವ ಮಂಡೂಕಂಗಳಿಗೆ ಅಲ್ಲಿ ಹೋಗಿ ಆಹಾರವಿತ್ತವರದಾರು
ಬಲ್ಲಿದನು ಪುರಂದರವಿಠಲರಾಯ ನಿಲ್ಲದೇ ರಕ್ಷಿಪನು ಇದಕೆ ಸಂದೇಹಬೇಡ   \\3\\


ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೊ tappugalanella neenoppikollo


ತಪ್ಪುಗಳನೆಲ್ಲ ನೀನೊಪ್ಪಿಕೊಳ್ಳೊ  ನಮ್ಮಪ್ಪ ಕಾಯಬೇಕು ತಿಮ್ಮಪ್ಪ ನೀನೆ   \\ಪ\\
ಸತಿ-ಸುತ ಸಂಸಾರಗಳಿಗೆ  ಮತಿ ಹೀನನಾದೆನು ವ್ಯರ್ಥ ||
ಮಿತಿಗಾಣೆನಯ್ಯ ಎನ್ನ ಪಾಪಗಳಿಗೆ  ಗತಿಯದಾವುದು ಪೇಳೊ ಮುಂದೆನಗೆ   \\1\\
ಬಿಸಿಲು ಬಿರುಮಳೆ ಗಾಳಿಯೊಳಗೆ ಬಲು ದೆಸೆಗೆಟ್ಟು ದೇವ ತಿರುಗಿದೆ ||
ಹಸಿವು ತೃಷೆಗಳು ಬಹು ಬಾಧಿಸಲು ಹುಸಿಯಾಡಿದೆನಯ್ಯ ಹುಟ್ಟು ಮೊದಲು  \\2\\
ಸ್ನಾನ-ಸಂಧ್ಯಾವಂದನವರಿಯೆ-ನಾನಾದಾನ-ಧರ್ಮದ ಗುರುತುಗಳಿಯೆ ||
ಹೀನಜನರ ಸಂಗವ ಮರೆಯೆಸುಙÁ್ಞನಿಗಳನು ಬಾಯೆಂದು ಕರೆಯೆ \\3\\
ಗಂಗೆ ಅಗ್ರೋದಕಗಳ ತಂದು - ನಾಮಂಗಳ ಮಜ್ಜನ ಮಾಡಲಿಲ್ಲವೆಂದೂ ||
ಹೊಂಗೇದಗೆ ಪುಷ್ಪವನೊಂದು ಶ್ರೀರಂಗಗರ್ಪಿಸಲಿಲ್ಲ ಕಾಯೊ ಬಂದು  \\ 4\\
ಪೀತಾಂಬರದಿ ವಸ್ತ್ರಗಳಿಂದ ದಿವ್ಯನೂತನವಾದ ಆಭರಣದಿಂದ ||
ಪ್ರೀತಿಪಡಿಸಲಿಲ್ಲಾದರದಿಂದಹೇ ಸೀತಾಪತೆ ಕೃಷ್ಣ ಹರಿಮುಕುಂದ \\ 5\\
ಗಂಧಾಕ್ಷತೆ ಪುಷ್ಪಗಳಿಂದ  ಬರಿ ಒಂದು ದಳ ಶ್ರೀ ತುಳಸಿಯಿಂದ ||
ಇಂದಿರೇಶನ ಅರ್ಚಿಸದರಿಂದ -ಬಹು ನೊಂದು ದೂರಾದೆ ಸದ್ಗತಿಯಿಂದ   \\6\\
ಏಕಾರತಿ ದೂಪಾರತಿಯ ಎಂದು ಶ್ರೀಕಾಂತ ನಿನಗೆ ನಾ ಮಾಡಲಿಲ್ಲ ||
ವ್ಯಾಕುಲದಲಿ ಹೋಯಿತು ಹೊತ್ತು ಬಂದು ನೀ ಕರುಣಿಸು ಲಕ್ಷ್ಮೀರಮಣ  \\7\\
ಪಾಯಸ ಪಂಚಭಕ್ಷ್ಯಗಳಿಂದ ಬಲು ಆಯತವಾದ ಶಾಕಗಳಿಂದ ||
ತೋಯೆ ಶಾಲ್ಯನ್ನ ಸದ್ಘøತದಿಂದ ಶ್ರೀ ಮಾಯಾಪತಿಗೆ ಅರ್ಪಿಸಲಿಲ್ಲ \\ 8\\
ಮಂಗಳಾರತಿಯ ನಾ ಮಾಡಲಿಲ್ಲ ಜಯ ಮಂಗಳವೆನ್ನುತ ಪಾಡಲಿಲ್ಲ ||
ಕಂಗಳ ನೋಟದಿ ನೋಡಲಿಲ್ಲ ನರಸಿಂಗ ನೀ ಬಾಯೆಂದು ಕರೆಯಲಿಲ್ಲ\\ 9\\
ಹರಿಯ ಪಾದಕೆ ಬಿದ್ದವನಲ್ಲ ನರ ಹರಿಗೆ ಪ್ರದಕ್ಷಿಣೆ ಮಾಡಲಿಲ್ಲ ||
ಹರಿದಿನದುಪವಾಸ ವ್ರತವು ಇಲ್ಲ ಬಲು ಹರಿಯ ದಾಸರ ಸಂಗ ಎನಗಿಲ್ಲ \\ 10\\
ಹೋಮಾರ್ಚನೆ ಔಪಾಸನವೆಲ್ಲ  ನೇಮದಿಂದಲಿ ನಾ ಮಾಡಲಿಲ್ಲ ||
ಕಾಮಾತುರನಾಗಿ ಕಂಡಕಂಡ ಕಡೆ ಸ್ವಾಮಿಯ ಕಾಣದೆ ತಿರುಗಿದೆನೊ \\11\\
ಅತಿಥಿಗಳ್ ಬಂದರೆ ಮನೆಗೆ ಅಂದ ಗತಿಯಿಲ್ಲವಯ್ಯ ಕೊಡುವುದಕೆ ||
ಯತಿಯ ಕಂಡರೆ ನಿಂದಿಸಿದೆ-ಶ್ರೀ ರತಿಪತಿ ಪಿತ ನೀ ದಯ ಮಾಡೊ \\12\\
ಎಷ್ಟು ಹೇಳಲಿ ಎನ್ನವಗುಣವ ಅವುಅಷ್ಟು ಇಷ್ಟೆಂದು ಎಣಿಕೆಯಿಲ್ಲ ||
ದೃಷ್ಟಿಯಿಂದ ನೋಡಿ ದಯ ಮಾಡೊ ಶ್ರೀಬೆಟ್ಟದ ವೆಂಕಟ ಪುರಂದರವಿಠಲ 13


ತನುವಿನೊಳಗೆ ಅನುದಿನವಿದ್ದು tanuvinolage anudinaviddu


ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಪೇಳದೆ ಪೋದೆ ಹಂಸಾ \\ಪ.\\
ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆ ರೂವಾರವೆಂಬ ಒಂಬತ್ತು ಬಾಗಿಲ ದಾಟಿ
ಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗ ಕಾಯಕೆ ಹೇಳದೆ ಹೋಯಿತು ಒಂದು ಮಾತ \\1\\
ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿಬಳ್ಳಿ ಕಾಯಿ ಕಾತು ಫಲವಾಯಿತು
ಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗಬಳ್ಳಿಗೆ ಹೇಳದೆ ಹೋಯಿತು ಒಂದು ಮಾತ \\2\\
ಗಟ್ಟಿ - ಬೆಟ್ಟಗಳಲಿ ಶಾಖೆಯ ತುದಿಯಲಿಕಟ್ಟಿತು ಜೇನನು ಸುಖಕಾಗಿ
ಗಟ್ಟಿ ತುಪ್ಪವನುಂಡು ನೊಣ ಹಾರಿ ಪೋಪಾಗ ಹಿಪ್ಪೆಗೆ ಹೇಳದೆ ಹೋಯಿತು ಒಂದು ಮಾತ \\3\\
ರವಿವಿಸ್ತಾರವ ಹಂಸ ಕೇಳಿದನೈ ನಿನ್ನ ಪೆಸರ ಪೇಳಲೆನ್ನಳವಲ್ಲ
ರಸ ವಸ್ತುವನುಂಡು ಜ್ಯೋತಿ ತಾ ಪೋಪಾಗ ಪಣತಿಗೆ ಪೇಳದೆ ಹೋಯಿತು ಒಂದು ಮಾತು \\4\\
ಸಿರಿಪುರಂದರ ವಿಠಲನ ಮಾತು ಪುಸಿಯಲ್ಲ ಹಣೆಯ ಬರೆಹವ ಮೀರಲು ಬಲ್ಲುದೆ ?
ಸರಸವನಾಣೆಯ ಮುತ್ತು ಆಗಲಿ ತಾ ಪೋಪಾಗ ತಿಪ್ಪಿಗೆ ಪೇಳಿದಾಯಿತು ಒಂದು ಮಾತ \\5\\


ತನುವ ನೀರೊಳಗದ್ದಿ ಫಲವೇನು tanuvu neerolagaddi


ತನುವ ನೀರೊಳಗದ್ದಿ ಫಲವೇನು ಮನದಲ್ಲಿ ದೃಢಭಕುತಿ ಇಲ್ಲದ ಮನುಜನು \\ಪ.\\
ಧಾನ ಧರ್ಮಗಳನು ಮಾಡುವುದೇ ಸ್ನಾನ ಜ್ಞಾನ ತತ್ತ್ವಂಗಳ ತಿಳಿಯುವುದೇ ಸ್ನಾನ
ಹೀನಪಾಪಂಗಳ ಬಿಡುವುದೆ ಸ್ನಾನ ಧ್ಯಾನದಿ ಮಾಧವನ ನಂಬುವುದೆ ಸ್ನಾನ   \\1\\
ಗುರುಗಳ ಶ್ರೀಪಾದತೀರ್ಥವೆ ಸ್ನಾನ ಹಿರಿಯರ ದರುಶನ ಮಾಡುವುದೆ ಸ್ನಾನ
ಕರೆದು ಅನ್ನವನು ಇಕ್ಕುವುದೊಂದು ಸ್ನಾನ ಸಿರಿಹರಿತರಣ ನಂಬುವುದೊಂದು ಸ್ನಾನ  \\2\\
ದುಷ್ಟರ ಸಂಗವ ಬಿಡುವುದೊಂದು ಸ್ನಾನ ಕಷ್ಟಪಾಪಂಗಳನು ಹರಿವುದೆ ಸ್ನಾನ
ಸೃಷ್ಟಿಯೊಳಗೆ ಸಿರಿಪುರಂದರವಿಠಲನ ಮುಟ್ಟಿ ಭಜಿಸಿ ಪುಣ್ಯ ಪಡೆವುದೇ ಸ್ನಾನ   \\3\\


ತನುವ ನಂಬಲುಬೇಡ ಜೀವವೆ tanuvu nambalubeda jeevave


ತನುವ ನಂಬಲುಬೇಡ ಜೀವವೆ \\ಪ.\\
ಅನುವಾಗಿ ನಿನ್ನಂಗಕೆ ಕೆಲಕಾಲ ತೋರುವದು  ಅನುವಿಲ್ಲದಾಗ ಈ ತನುವೆ ನಿನಗೆ ವೈರಿ   \\ಅಪ\\
ಜರೆಮರಣಗಳಿಂದ ಭರಿತವಾದುದು ಕಾಯ  ಸ್ಥಿರವೆಂದು ನಂಬಿ ನೀ ಮರುಳಾಗಬೇಡ  \\1\\
ಧನ - ಧಾನ್ಯ ಪಶು - ಪತ್ನಿ ಸ್ಥಿರವೆಂದು ತಿಳಿದು ಮನುಮತನಯ್ಯನ ಮರೆಯದೆ ಮನವೆ \\2\\
ಶರಣೆಂದರೆ ಕಾವ ಗರುಡಕೇತನ ನಮ್ಮ  ಪುರಂದರವಿಠಲನ ಮರೆಯದೆ ಮನವೆ \\3\\


ತನಗಲ್ಲದಾ ವಸ್ತು ಎಲ್ಲಿದ್ದರೇನು tanaganallada vastu

ತನಗಲ್ಲದಾ ವಸ್ತು ಎಲ್ಲಿದ್ದರೇನುಮನಕೆ ಬಾರದ ಹೆಣ್ಣು ಮತ್ತೆ ಬಂದರೆ ಏನು ? \\ಪ.\\
ಆದರಣೆಯಿಲ್ಲದೂಟ ಅಮೃತಾನ್ನವಾದರೇನು ವಾದಿಸುವ ಸತಿ - ಸುತರಿದ್ದು ಫಲವೇನು ?
ಕ್ರೋಧ ಬಳೆಸುವ ಸಹೋದರರು ಇದ್ದರೇನು ಮಾದಿಗರ ಮನೆಯೊಳೆ ಮದುವೆಯಾದರೇನು ? \\1\\
ನಾಲಿಗಿಲ್ಲದ ಪÀದವು ಸಂಚಿತುಂಬ ಇದ್ದರೇನು ದೇವಾಂಕಿತವಿಲ್ಲದ ಕವಿತ್ವವೇನು ?
ಹೇಮವಿಲ್ಲದ ಹೆಣ್ಣು ಹೆಚ್ಚು ಬಾಳಿದರೇನು ಹಾವಿನ ಘಣಿಯೊಳಗೆ ಹಣವಿದ್ದರೇನು ? \\2\\
ಸನ್ಮಾನವಿಲ್ಲದೆ ದೊರೆ ಸಾವಿರಾರು ಕೊಟ್ಟರೆ ಏನು ತನ್ನ ತಾನರಿಯದ e್ಞÁನವೇನು ?
ಎನ್ನುತ ಪುರಂದರವಿಠಲನ ನೆನೆಯದವಸಂನ್ಯಾಸಿಯಾದರೇನು ಪಂಡಿತನಾದರೇನು ? \\3\\


Tuesday 7 April 2020

ಡೊಂಕುಬಾಲದ ನಾಯಕರೆ donku balada naayakare


ಡೊಂಕುಬಾಲದ ನಾಯಕರೆ ನೀವೇನೂಟವ ಮಾಡಿದಿರಿ \\ ಪ\\.
ಕಣಕ ಕುಟ್ಟುವಲ್ಲಿಗೆ ಹೋಗಿ  ಹಣಿಕಿ ಹಣಿಕಿ ನೋಡುವಿರಿ ||
ಕಣಕ ಕುಟ್ಟೋ ಒನಕಿಲಿಬಡಿದರೆ ಕುಂಯ್ ಕುಂಯ್ ರಾಗವ ಮಾಡುವಿರಿ \\1\\
ಹುಗ್ಗಿ ಮಾಡುವಲ್ಲಿಗೆ ಹೋಗಿ ತಗ್ಗಿ ಬಗ್ಗಿ ನೋಡುವಿರಿ ||
ಹುಗ್ಗಿ ಮಾಡುವ ಸವಟಿಲಿ ಬಡಿದರೆ ಕುಂಯ್ ಕುಂಯ್ ರಾಗವ ಮಾಡುವಿರಿ \\2\\
ಹಿರಿಯ ಬೀದಿಯಲಿ ಓಡುವಿರಿ ಕರಿಯ ಬೂದಿಯಲಿ ಹೊರಳುವಿರಿ ||
ಪುರಂದರವಿಠಲರಾಯನ ಈ ಪರಿಮರೆತು ಸದಾ ನೀವು ತಿರುಗುವಿರಿ\\3\\


ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ - ಹಾರಿ | dambaka bhakutige


ಡಂಬಕ ಭಕುತಿಗೆ ಮೆಚ್ಚಿಕೊಳ್ಳನೊ ಕೃಷ್ಣ  ಹಾರಿ ಡೊಂಬಲಾಗ ಹಾಕಿ ಹೊರಳಿದರಿಲ್ಲ \\ಪ.\\
ವಟವಟನೆ ಕಪಿಯಂತೆ ಒದರಿಕೊಂಡರೆ ಇಲ್ಲ ಬೆಟ್ಟದಿಂದಲಿ ಕೆಳಗೆ ಬಿದ್ದರಿಲ್ಲ ||
ಬಿಚ್ಚಿಟ್ಟರೆ ಇಲ್ಲ ನಿರ್ಭಾಗ್ಯರ್ಗೆಂದೆಂದು ಅಚ್ಯುತಾನಂತನ ದಯವಿಲ್ಲದೆ \\1\\
ಕೆಟ್ಟೆನೆಂದರೂ ಇಲ್ಲ ಕ್ಲೇಶಪಟ್ಟರೂ ಇಲ್ಲ ಸುಟ್ಟ ಸಂಸಾರದೊಳು ಸುಖವು ಇಲ್ಲ ||
ಕೋಟಲೆಗಂಜಿದರಿಲ್ಲ ಕೊಸರಿಕೊಂಡರು ಇಲ್ಲ ವಿಠಲನ ದೂರಿದರಿಲ್ಲ ವಿಧಿಯ ಬೈದರಿಲ್ಲ \\2\\
ಕನ್ನಹೊಕ್ಕರು ಇಲ್ಲ ಕಡಿದಾಡಿದರು ಇಲ್ಲ ಕುನ್ನಿಯಂತೆ ಮನೆಮನೆಯ ಕೂಗಿದರಿಲ್ಲ ||
ಹೊನ್ನಿನಾಸೆಗೆ ಹೋಗಿ ಹೊಡೆದುಕೊಂಡರು ಇಲ್ಲ ಪನ್ನಗಾದ್ರಿ ಪುರಂದರವಿಠಲನ ದಯವಿರದೆ \\3\\


ಡಂಗುರವ ಸಾರಿ ಹರಿಯ dangurava saari hariya


ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ ರಂಗದೊಳಗೆಲ್ಲ ಪಾಂಡುರಂಗ ಪರದೈವವೆಂದು \\ಪ.\\
ಹರಿಯು ಮುಡಿದ ಹೂವ ಹರಿವಾಣದೊಳಗಿಟ್ಟುಕೊಂಡು ಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಳಿಕ್ಕುತ \\1\\
ಒಡಲ ಜಾಗಟೆಯ ಮಾಡಿ ಮಿಡಿವ ಗುಣಿ ನಾಲಗೆಯ ಮಾಡಿ ಒಡನೆ ಢಣ ಢಣ ಢಣ ಢಣ ಎಂದು
ಕುಣಿದು ಚಪ್ಪಳಿಕ್ಕುತ \\2\\
ಇಂತು ಸಕಲ ಜಗಕೆ ಲಕ್ಷ್ಮೀಕಾಂತನೆ ಪರದೈವವೆಂದು ಕಂತುಪಿತ ಪುರಂದರವಿಠಲ ಪರದೈವವೆಂದು \\3\\


ಜ್ಞಾನವೊಂದೇ ಸಾಕು ಮುಕ್ತಿಗೆ jnanvonde saaku muktige


ಜ್ಞಾನವೊಂದೇ ಸಾಕು ಮುಕ್ತಿಗೆ  ಇನ್ನೇನು ಬೇಕು ಹುಚ್ಚುಮರುಳು ಮಾನವನೆ \\ ಪ.\\
ಪಿತ ಮಾತೆ ಸತಿ ಸುತರನಗಲಿರಬೇಡ ಯತಿಯಾಗಿ ಆರಣ್ಯ ಚರಿಸಲು ಬೇಡ ||
ವ್ರತ - ನೇಮವ ಮಾಡಿ ದಣಿಯಲು ಬೇಡ ಸತಿಯಿಲ್ಲದವಗೆ ಸದ್ಗತಿಯಿಲ್ಲೋ ಮೂಢ \\1\\
ಜಪತಪವನೆ ಮಾಡಿ ಸೊರಗಲುಬೇಡ ಕಪಿಯಂತೆ ಅಡಿಗಡಿಗೆ ಹಾರಲುಬೇಡ ||
(ಉಪವಾಸಪಾಶಕ್ಕೆ) ಸಿಕ್ಕಲುಬೇಡ ಚಪಲತನದಲೇನು ಫಲವಿಲ್ಲೋ ಮೂಢ \\2\\
ಜಾಗರದಲಿ ನಿದ್ರೆ ಕೆಡಿಸಲು ಬೇಡ ಓಗರವನು ಬಿಟ್ಟು ಒಣಗಲು ಬೇಡ ||
ಸೋಗುಮಾಡಿ ಹೊತ್ತು ಕಳಿಯಲು ಬೇಡ ಗೊಗೆ ಹಾಗೆ ಕಣ್ಣು ತಿರುಗಿಸಬೇಡ \\3\\
ಹೊನ್ನು  ಹೆಣ್ಣು - ಮಣ್ಣು ಜರೆದಿರಬೇಡ ಅನ್ನ ವಸ್ತ್ರಗಳನ್ನು ತೊರೆದಿರಬೇಡ ||
ಬಣ್ಣದ ದೇಹವ ನೆಚ್ಚಲುಬೇಡ ತಣ್ಣೀರೊಳಗೆ ಮುಳುಗಿ ನಡುಗಲು ಬೇಡ \\4\\
ಮಹಾವಿಷ್ಣುಮೂರ್ತಿಯ ಮರೆತಿರಬೇಡ ಸಾಹಸದಿಂದಲಿ ಶ್ರಮ ಪಡಬೇಡ ||
ಕುಹಕ ಬುದ್ಧಿಯಲಿ ಕುಣಿದಾಡಬೇಡ ಮಹಿಮ ಪುರಂದರವಿಠಲನ ಮರೆಯದಿರೊ ಮೂಢ \\5\\


ಜ್ಞಾನವಂತರಿಗೆ ವಿಧಿ ಕಾಡುವುದು jnanavantarige vidhi


ಜ್ಞಾನವಂತರಿಗೆ ವಿಧಿ ಕಾಡುವುದು ಸತ್ಯ ಅಜ್ಞಾನಿ ಮೂಢರಿಗೆ ಹರಿ ನಿನ್ನ ಬಲವಯ್ಯ \\ಪ\\
ಹಿಂದೆ ಹರಿಶ್ಚಂದ್ರನ ಅರಣ್ಯವನೆ ಸೇರಿಸಿತು ಮುಂದಾಗಿ ಕುಳಿತಿತ್ತು ಕರಿರಾಜಗೆ ||
ಚೆಂದದಲಿ ಪಾಂಡವರ ಅರಣ್ಯ ಸೇರಿಸಿತು ಸುಂದರಿಯ ಸೀತೆಯನು ಲಂಕೆಯೊಳಗಿಟ್ಟಿತು \\1\\
ಚಂದ್ರಂಗೆ ವಿಧಿ ಕಾಡಿ ಸರ್ಪ ತಾ ನುಂಗಿತು ಇಂದ್ರಂಗೆ ವಿಧಿ ಕಾಡಿ ಅಂಗ ಭಂಗವಾಯಿತು ||
ಚಂದ್ರಶೇಖರನನ್ನು ಸುಡಗಾಡ ಸೇರಿಸಿತು ಇಂದಿದನು ತಿಳಿದರೆ ನರರ ಪಾಡೇನು \\2\\
ವಿಧಿ ಕಾಡುವಾ ಕಾಲಕಿಲ್ಲದ್ದೆಲ್ಲವು ಬಂತು ವಿಧಿ ಕಳವು ಸುಳ್ಳು ಹಾದರ ಕಲಿಸಿತು ||
ವಿಧಿ ಬೇನೆ ಚಳಿಯುರಿಯ ರೋಗಂಗಳನೆ ತಂತು ವಿಧಿಯ ಗೆದ್ದವ ನಮ್ಮ ಪುರಂದರ ವಿಠಲ \\3\\


ಜೋ ಜೋ ಶ್ರೀ ಕೃಷ್ಣ ಪರಮಾನಂದ jo jo shree krishna paramaanda


ಜೋ ಜೋ ಶ್ರೀ ಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ ಮುಕುಂದ \\ಪ.\\
ಪಾಲುಗಡಲೊಳು ಪವಡಿಸಿದವನೆ ಒಂದಾಲದೆಲೆಯ ಮೇಲೆ ಮಲಗಿದ ಶಿಶುವೇ ||
ಶ್ರೀ ಲತಾಂಗಿಯರ ಚಿತ್ತವಲ್ಲಭನೇ ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ\\ 1\\
ಹೊಳೆಯುವ ರನ್ನದ ತೊಟ್ಟಿಲ ಮೇಲೆ ಢಳಿ ಢಳಿಸುವ ಗುಲಗುಂಜಿಯ ಮಾಲೆ ||
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋ ಜೋ \\2\\
ಆರ ಕಂದ ನೀನಾರ ನಿಧಾನಿ ಆರ ರತ್ನವೊ ನೀನಾರ ಮಾಣಿಕವೋ ||
ಸೇರಿತು ಎನಗೊಂದು ಚಿಂತಾಮಣಿಯು ಎಂದು ಪೋರ ನಿನ್ನನು ಪಾಡಿ ತೂಗುವೆನಯ್ಯ - ಜೋ ಜೋ \\3\\
ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ ಮನೆಯ ಕೆಲಸವಾರು ಮಾಡುವರಯ್ಯ ||
ಮನಸಿಗೆ ಸುಖನಿದ್ರೆ ತಂದುಕೊ ಬೇಗ ಫಣಿಶಯನನೆ ನಿನ್ನ ಪಾಡಿ ತೂಗುವೆನು - ಜೋ ಜೋ \\4\\
ಅಂಡಜವಾಹನ ಅನಂತ ಮಹಿಮ ಪುಂಡರೀಕಾಕ್ಷ - ಪರಮ ಪಾವನ ||
ಹಿಂಡು ದೈವದ ಗಂಡ ಉದ್ಧಂಢ ದೇವನ ಪಾಂಡುರಂಗ ಶ್ರೀ ಪುರಂದರವಿಠಲ ಜೋ ಜೋ \\5\\


ಜೋ ಜೋ ಯಶೋದೆಯ ನಂದ ಮುಕುಂದನೆ jo jo yashodeya nanda


ಜೋ ಜೋ ಯಶೋದೆಯ ನಂದ ಮುಕುಂದನೆಜೋ ಜೋ ಕಂಸಕುಠಾರಿ \\ಪ.\\
ಜೋ ಜೋ ಮುನಿಗಳ ಹೃದಯಾನಂದನೆಜೋ ಜೋ ಲಕುಮಿಯ ರಮಣ \\ಅಪ\\
ಹೊಕ್ಕುಳ ಹೂವಿನ ತಾವರೆಗಣ್ಣಿನಇಕ್ಕಿದ ಮಕರ ಕುಂಡಲದ
ಜಕ್ಕುಳಿಸುವ ಕದಪಿನ ಸುಳಿಗುರುಳಿನಚಿಕ್ಕ ಬಾಯ ಮುದ್ದು ಮೊಗದ ||
ಸೊಕ್ಕಿದ ಮದಕರಿಯಂದದಿ ನೊಸಲೊಳಗಿಕ್ಕಿದ ಕಸ್ತೂರಿ ತಿಲಕ |
ರಕ್ಕಸರೆದೆದಲ್ಲಣ ಮುರವೈರಿಯೆಮಕ್ಕಳ ಮಾಣಿಕ್ಯ ಜೋ ಜೋ \\1\\
ಕಣ್ಣ ಬೆಳಗು ಪಸರಿಸುತಿರೆ ಗೋಪಿ ಅರೆಗಣ್ಣ ಮುಚ್ಚಿ ನೋಡಿ ನಗುತ |
ಸಣ್ಣ ಬೆರಳುಗಳ ಬಾಯೊಳಗಳವಡಿಸಿಪನ್ನಗಶಯನ ತೊಟ್ಟಿಲಲಿ ||
ನಿನ್ನ ಮಗನ ಮುದ್ದ ನೋಡು ಎಂದೆನುತಲಿತನ್ನ ಪತಿಗೆ ತೋರಿದಳು |
ಹೊನ್ನ ಬಣ್ಣದ ಸೊಬಗಿನ ಖಣಿಯೆ ಹೊಸರನ್ನದ ಬೊಂಬೆಯೆ ಜೋ ಜೋ \\2\\
ನಿಡು ತೋಳ್ಗಳ ಪಸರಿಸುತಿರೆ ಗೋಪಿಯತೊಡೆಯ ಮೇಲ್ಮಲಗಿ ಬಾಯ್ದೆರೆಯೆ |
ಒಡಲೊಳಗೀರೇಳು ಭುವನವಿರಲು ಕಂಡುನಡುಗಿ ಕಂಗಳನು ಮುಚ್ಚಿದಳು ||
ಸಡಗರಿಸುತ ತಾನರಿಯದಂತೆಯೆಹೊಡೆ ಮರುಳಿ ಮೊಗವ ನೋಡುತಲಿ
ಕಡಲಶಯನ ಮೊಗವ ನೋಡುತಲಿಕಡಲಶಯನ ಶ್ರೀ ಪುರಂದರವಿಠಲನುಬಿಡದೆ ನಮ್ಮೆಲ್ಲರ ರಕ್ಷಿಸುವ 3


ಜಾಲಿಯ ಮರದಂತೆ ದುರ್ಜನರೆಲ್ಲ kaaliya maradante durjanerella


ಜಾಲಿಯ ಮರದಂತೆ  ದುರ್ಜನರೆಲ್ಲಜಾಲಿಯ ಮರದಂತೆ \\ಪ.\\
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲಹಸಿದು ಬಂದವರಿಗೆ ಹಣ್ಣಿಲ್ಲವೊ
ಕುಸುಮವಾಸನೆಯಿಲ್ಲ ಕುಳ್ಳಿರಲು ಸ್ಥಳವಿಲ್ಲವಿಷಮರ ದುಸ್ಸಂಗ ಪಡೆದರೇನುಂಟು\\1\\
ಊರ ಹಂದಿಗೆ ಅಲಂಕಾರವ ಮಾಡಲುನಾರುವ ದುರ್ಗಂಧ ಬಿಡಬಲ್ಲುದೆ
ಸಾರ ತತ್ತ್ವಜ್ಞಾನ ಪಾಪಿಗೆ ಹೇಳಲುಕ್ರೂರಬುದ್ಧಿಯ ಬಿಟ್ಟು ಸಜ್ಜನವಪ್ಪಗೆ ?\\2\\
ತನ್ನಿಂದ ಉಪಕಾರ ತೊಟಕಾದರೂ ಇಲ್ಲಬಿನ್ನಣ ಮಾತುಗಳು ಮೊದಲೆ ಇಲ್ಲ
ಪನ್ನಗಶಯನ ಪುರಂದರವಿಠಲನಲ್ಲದೆಅನ್ಯದೈವಂಗಳ ಭಜಿಸದೆ ನರರು \\3\\


ಜಲದ ನೀಲ ಗಾತ್ರ ಏತರ ಚೆಲುವ jalada neela gaatra


ಜಲದ ನೀಲ ಗಾತ್ರ ಏತರ ಚೆಲುವ ರುಕ್ಮಿಣಿ ಬಿಳಿಯ ಜಡೆಯ ಮೈಯ ಜೋಗಿಗೊಲೆದ ಪಾರ್ವತಿ \\ಪ.\\
ಉದಕದೊಳಗೆ ವಾಸವೇಕೆ ಸದನವಿಲ್ಲವೆಸುದತಿ ಸುಡುವ ಕಾಡಿಗಿಂತ ಲೇಸು ಅಲ್ಲವೆ \\1\\
ಶೃಂಗಿಯ ಬೆನ್ನಿಲೆತ್ತಿದವನ ಸೊಗಸು ನೋಡಿದೆಗಂಗೆಯ ಶಿರದಿ ಪೊತ್ತವನ ಗುರುವ ಕೇಳಿದೆ \\2\\
ವಸುಧೆ ನೆಗಹಿ ಬೇರೆ ಮೆಲುವ ಅಶನವಿಲ್ಲವೆಹಸಿದು ವಿಷವ ಕುಡಿದ ಎಂತು ಸ್ವಾದವಲ್ಲವೆ \\3\\
ಕರುಳ ಕೊರಳ ಸರವು ಏಕೆ ಸರವು ದೊರಕದೆಕೊರಳ ರುಂಡಮಾಲೆ ಏಕೆ ಕಾಂಚನವಿಲ್ಲದೆ \\4\\
ಧರಣಿ ಮೂರಡಿ ಬೇಡಲಿಕ್ಕೆ ದೊರೆಯು ಅಲ್ಲವೆನರಕಪಾಲ ಪಿಡಿವ ಜಗದ ಕರ್ತೃವಲ್ಲವೆ \\5\\
ಮಾತೆಶಿರವ ಅಳಿದವನ ಮಾಲೆ ಕೇಳಿದೆಯಾತಾತನಾಚಿ ಸುತನ ಕೊಂದು ನೀತಿ ನೋಡಿದೆಯಾ \\6\\
ಕೋತಿಗಳನು ಕೂಡಲಿಕ್ಕೆ ಜಾತಿ ತನ್ನದೆಭೂತಗಣಗಳಾಳುವುದಕೆ ಭೀತಿ ಇಲ್ಲವೆ \\7\\
ಹತ್ತಿರಿದ್ದ ವಾಜಿಬಿಟ್ಟು ಹದ್ದನೇರ್ವರೆಎತ್ತಿನ ಬೆನ್ನ ನೇರಿದವರು ಉತ್ತಮರಾಹರೆ \\8\\
ಸುತ್ತಲಿದ್ದಬಾಲೆಯರೊಳು ಬತ್ತಲಿರುವರೆ ಶಾಪ ಹತ್ತಲಿಲ್ಲವೆ \\9\\
ಹರಿಹರರೊಳು ಭೇದವೇನು ಹೇಳೆ ರುಕ್ಮಿಣಿ ಪುರಂದರವಿಠಲ ತಾನೆ ಬಲ್ಲ ಕೇಳೆ ಪಾರ್ವತಿ \\10\\


ಜಯಮಂಗಳಂ ಲಕ್ಷ್ಮೀಪತಿ jayamanagalam laxmipati


ಜಯಮಂಗಳಂ ನಿತ್ಯ ಶುಭಮಂಗಳಂಜಯ ತುಂಗ ಲಕ್ಷ್ಮೀಪತಿ ನರಸಿಂಹಗೆ \\ಪ.\\
ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆಮಂದರೋದ್ಧಾರ ಮಧುಸೂದನನಿಗೆ ||
ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀಇಂದಿರಾ ರಮಣ ಸರ್ವೋತ್ತಮನಿಗೆ \\1\\
ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆಸರಸಿಜೋದ್ಭವ - ಭವವಂದ್ಯ ಹರಿಗೆ ||
ಗಿರಿಯರಸು ಕಾವೇರಿಪುರದ ರಂಗಯ್ಯಗೆಗಿರಿರಾಜಪತಿವಂದ್ಯ ಸುರರ ನಿಧಿಗೆ \\2\\
ಅಂಬರೀಷನ ಶಾಪ ಅಪಹರಿಸಿದವನಿಗೆತುಂಬುರ ನಾರದ ಮುನಿವಂದ್ಯಗೆ ||
ಕಂಬುಕಂಧರ ಪುರಂದರ ವಿಠಲರಾಯಗೆಅಂಬುಜನಾಭಗೆ ಅಜನಪಿತಗೆ \\3\\


ಜಯಜಯ ಶ್ರೀ ರಾಮ ನಮೋ


ಜಯಜಯ ಶ್ರೀ ರಾಮ ನಮೋಜಯ ಜಯ ಶ್ರೀ ಕೃಷ್ಣ ನಮೋ \\ಪ.\\
ಸಿರಿಯರಸನು ಶೃಂಗಾರವ ಮಾಡಿಸಿರಿಗಂಧವನೆ ಹಣೆಗಿಟ್ಟು ||
ತರುಣ ತುಳಸಿ ವನಮಾಲೆಯ ಧರಿಸಿಹರಿ ತುರುಕಾಯಲು ಹೊರಗೆ ಹೊರಟನು \\1\\
ಹೊತ್ತು ಹೋಯಿತು ತುರು ಬಿಡಿಯೆನ್ನುತ ಸಾತ್ತ್ವತ ನುಡಿದನು ಗೋಪಿಯೊಡನೆ ||
ತುತ್ತುರು ತುತ್ತುರು ತುರುತುರುಯೆನ್ನುತ ಒತ್ತಿ ಸ್ವರಗಳನು ಪೊಂಗೊಳಲೂದುತ \\2\\
ವನಿತೆ ಸಟ್ಟುಗದೊಳು ಅಕ್ಕಿಯ ತೊಳಸಿಒನಕೆಯಿಂದ ಓಗರ ಹದನೋಡಿ ||
ಮಿನುಗುವ ಸೀರೆಯ ತಲೆಗೆ ಸುತ್ತಿಕೊಂಡುವನಕೆ ಹೋಗಲೆಂದು ಹೊರಗೆ ಹೊರಟಳು \\3\\
ಹರಿಸ್ವರವೆನ್ನುತ ಒಬ್ಬಳು ಕೇಳಿನೆರೆಮನೆಗೆ ಹೋಗಿ ಕಡ ಕೇಳಿದಳು ||
ಒರಳು ಕೊಡುವಿರಾ ಅರಸಿನ ಅರೆದುಮರಳಿ ಬೇಗ ತಂದೀವೆನೆನುತಲಿ \\4\\
ಹಸುವಿಗೆ ಇಟ್ಟಲು ಹಾಲು ಓಗರಬಿಸಿಮಡ್ಡಿಯ ಗಂಡಗೆ ಚಾಚಿ ||
ಸೊಸೆಯನು ಅಟ್ಟಿಸಿ ತೊತ್ತನು ಪಾಲಿಸಿಮೊಸರ ಕಾಸಿ ಹೆಪ್ಪ ಹಾಕಿದೊಳೊಬ್ಬಳು \\5\\
ಗಿಳಿಗೆ ಹಾಸಿದಳು ಹಾಸು ಮಂಚವನುಅಳಿಯನ ಪಂಜರದೊಳಗಿರಿಸಿ ||
ತಳಿಗೆಯಲ್ಲಿ ತಮ್ಮನ ಮಲಗಿಸಿ ತೊಟ್ಟಿಲೊಳಗೆ ಎಡೆಯನು ಮಾಡಿದಳೊಬ್ಬಳು \\6\\
ಅಟ್ಟವೆಂದು ಹತ್ತಿ ಅಗಳಿಯ ಮೇಲೇಇಟ್ಟಳು ಸಾದೆಂದು ಸಗಣಿಯನು ||
ಕಟ್ಟಬಾಯಿಗೆ ಕಾಡಿಗೆ ಹಚ್ಚಿಕೃಷ್ಣನ ಸ್ಮರಿಸುತ ಹೊರಗೆ ಹೊರಟಳು \\7\\
ಅಂಗನೆ ಚೌರಿಯು ಕಾಲಿಗೆ ತಗುಲಿಸಿಮುಂಗೈಯಲಿ ತಾಳಿಯ ಬಿಗಿದು ||
ಸಿಂಗರ ಸರವನು ನಡುವಿಗೆ ಕಟ್ಟಿರಂಗನ ಸ್ಮರಿಸುತ ಹೊರಟಳೊಬ್ಬಳು \\8\\
ಕಟ್ಟಿ ಮುತ್ತಿನೋಲೆ ಮೊಣಕಾಲ್ಗಳಿಗೆಗಟ್ಟಿ ಕಂಕಣವ ಕಿವಿಗಿಟ್ಟು ||
ತೊಟ್ಟಿಲೊಳಗೆ ಶಿಶು ಅಳುವುದ ಕಂಡುಕಟ್ಟಿದ ನೆಲುವನು ತೂಗಿದಳೊಬ್ಬಳು \\9\\
ತರುಣಿಯೊಬ್ಬ ಸಂನ್ಯಾಸಿಯ ಕಂಡುನೆರೆಮನೆ ಕೂಸೆಂದೆತ್ತ ಬರಲು ||
ಅರಿದಾವ ಗಾಳಿ ಸೋಕಿತೆನುತಲಿ ಪುರಂದರವಿಠಲನು ನಗುತಿದ್ದನು ಸಖಿ \\10\\


ಜಯ ಪಾಂಡುರಂಗ - ನಾ ನಿನ್ನ ಮನಕೆ ಬಾರೆನೆ jaya panduranga


ಜಯ ಪಾಂಡುರಂಗ  ನಾ ನಿನ್ನ ಮನಕೆ ಬಾರೆನೆ \\ಪ\\
ನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದಬಲೆಯೊಳು ಸಿಲುಕುವೆನೆ - ಜಯ ಪಾಂಡುರಂಗ \\ಅ.ಪ\\
ಕೆಟ್ಟ ಕಿರಾತನ ಬೆಟ್ಟದಂಥ ಪಾಪವಸುಟ್ಟು ವಾಲ್ಮೀಕಿ ಮುನಿಯೆನಿಸಿದೆ \\1\\
ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆ\\ಅಂತಕನ ಬಾಧೆಯ ಬಿಡಿಸಿದೆಯೊ \\2\\
ತಂದೆ ತಾಯ್ಗಳನು ತೊರೆದ ಧ್ರುವನಿಗೆಚೆಂದದಿಂದ ಮಾರ್ಗವ ತೋರಿದೆಯೊ \\3\\
ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿಶಂಕೆಯಿಲ್ಲದೆ ಅವಳ ಕೂಡಿದೆಯೊ \\4\\
ತೊತ್ತಿನ ಮಗನ ಮನೆಯಕೂಡತೆಪಾಲನು ಸವಿದುಮತ್ತವಗೆ ಮುಕ್ತಿಯ ತೋರಿದೆಯೊ \\5\\
ಐದು ಮಂದಿಯ ಕೂಡ ಸರಸವು ದ್ರೌಪದಿಗೆಐದೆ ಲಜ್ಜೆಯ ಕಾಯ್ದೆಯೊ \\6\\
ದೀನರನುದ್ಧರಿಪ ಪುರಂದರ ವಿಠಲಏನು ಕಾರಣ ನನ್ನ ಮರೆತೆಯೊ \\7\\


ಜಗದುದ್ಧಾರಕ ತನ್ನ ಮಗನೆಂದು jagaduddara tanna


ಜಗದುದ್ಧಾರಕ ತನ್ನ ಮಗನೆಂದು ಬಗೆದು |
ನಿಗಮಗೋಚರನ ಆಡಿಸಿದಳು ಯಶೋದೆ ಪ
ವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-
ಗುಟವ ಪೀರುವನ-ಆಡಿಸಿದಳು1
ವಿಶ್ವತಶ್ಚಕ್ಷುವ ವಿಶ್ವತೋಮುಖನ |
ವಿಶ್ವವ್ಯಾಪಕನ-ಆಡಿಸಿದಳು 2
ಅಣೋರಣಿಯನ ಮಹತೋಮಹೀಯನ |
ಗಣನೆಯಿಲ್ಲದವನ-ಆಡಿಸಿದಳು3
ನಿಗಮಕೆ ಸಿಲುಕದ ಅಗಣಿತ ಮಹಿಮನ |
ಮಗುಗಳ ಮಾಣಿಕ್ಯನ-ಆಡಿಸಿದಳು 4
ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |
ವಲ್ಲಭ ಪುರಂದರವಿಠಲನ-ಆಡಿಸಿದಳು 5


ಛೀ ಛೀ ಛೀ ಛೀ ಕಂಡೆಯ ಮನವೇ ಇಂಥ chi chi chi kandeya


ಛೀ ಛೀ ಛೀ ಛೀ ಕಂಡೆಯ ಮನವೇ ಇಂಥ
ನೀಚ ವೃತ್ತಿಗಳನು ಬಿಡು ಕಂಡೆಯ ಮನವೆ ಪ.
ಕಿವಿಗೊಟ್ಟು ಮಧುರನಾದಕೆ ಹುಲ್ಲೆಯು
ರವದ ಬಲೆಗೆ ಸಿಕ್ಕಿಬಿದ್ದುದನರಿಯ
ನವಮೋಹನಾಂಗಿಯರ ಕೋಕಿಲಾಪದ
ಸವಿ ಕೇಳದಾತನ ಕಥೆ ಕೇಳು ಮನವೇ 1
ನಲಿದೆದ್ದು ಕರಿ ಎಳೆಯ ತೃಣ ಸ್ಪರುಷನಕಾಗಿ
ಕುಳಿಗೆ ಬಿದ್ದಿರುವುದ ಕಂಡು ಕಂಡರಿಯ
ನಳಿನಾಕ್ಷಿಯರಂಗಸಂಗವ ಮೆಟ್ಟಿ ಕೆಡದೆ ಶ್ರೀ
ಲಲನೇಶನಂಘ್ರಿಯಾನಪಿವೇಕೋ ಮನವೇ 2
ಗಾಣದ ತುದಿಯ ಮಾಂಸವ ಮೆಲುವ ಮತ್ಸ್ಯವು
ಪ್ರಾಣವ ಬಿಡುವುದ ಕಂಡು ಕಂಡರಿಯ ?
ಮಾನಿನಿಯ ಬಯಸದೆ ಶ್ರೀ ನಾರಾಯಣನ
ಧ್ಯಾನಾಮೃತವನು ಸವಿದುಣ್ಣೋ ಮನವೆ3
ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದು
ಕಣ್ಣುಗೆಡುವುದನು ಕಂಡು ಕಂಡರಿಯ ?
ಬಣ್ಣರ ಬಾಲೆಯರ ರೂಪಕೆ ಮರುಳಾಗಿ
ಮಣ್ಣು ತಿನ್ನದೆ ಮಾರನಯ್ಯನ ನೆನೆ ಮನವೆ 4
ಅಳಿ ಪರಿಮಳನಾಗಿ ಕಮಲದೊಳಗೆ ಸಿಲುಕಿ
ಅಳಿದು ಹೋಹುದನು ಕಂಡ ಕಂಡರಿಯ ?
ಬಳಲದೆ ವರಪುರಂದರ ವಿಠಲನಂಘ್ರಿಯ
ತುಳಸಿ ನಿರ್ಮಾಲ್ಯವಾಫ್ರಾಣಿಸು ಮನವೆ5


ಚೆಂದವ ನೋಡಿರೆ-ಗೋಕುಲಾ chendava nodire


ಚೆಂದವ ನೋಡಿರೆ-ಗೋಕುಲಾ-|
ನಂದನ ಮೂರುತಿಯ ಪ
ಅಂದುಗೆ ಪಾಡಗ ಗೆಜ್ಜೆಯ ಧರಿಸಿ |
ಧಿಂ ಧಿಂ ಧಿಮಿಕೆಂದು ಕುಣಿವ ಕೃಷ್ಣನ ಅ.ಪ
ಕೊರಳ ಪದಕಹಾರ ಬಿಗಿದು |
ತರಳರೆಲ್ಲರ ಕೂಡಿಕೊಂಡು ||
ಕುರುಳುಗೂದಲ ಅರಳೆಲೆತಿಯು |
ಮಿರು-ಮಿರುಗುತ ಮೆರೆವ ಕೃಷ್ಣನ 1
ಉಡೆಯ ಗಂಟೆ ಘಣಘಣೆನುತ |
ನುಡಿಯೆ ಮೆಲ್ಲನೆ ಪಿಡಿದುಕೊಂಡು ||
ನಡೆದಾಡುತ ಸಡಗರದಲಿ |
ಬೆಡಗ ಮಾಡಿ ಆಡುವ ರಂಗನ 2
ಬಲುಬಲು ಆಶ್ಚರ್ಯದಿಂದ |
ನಲಿವ ಪುರಂದರವಿಠಲರಾಯ ||
ಹಲವು ಸುಖವ ನಮಗೆ ಇತ್ತ |ಜಲಜಲೋಚನ ಬಾಲಕೃಷ್ಣನ 3


ಚೆಂಡನಾಡುತ ಬಂದ ಪುಂಡ ಕೃಷ್ಣನು chendanaaduta banda


ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |
ಹಿಂಡು ಗೋಪಾಲಕರ ಕೊಂಡು ಯಮುನೆಯ ತಡಿಗೆ ಪ
ಓರೆ ತುರುಬನೆ ಕಟ್ಟಿ ಗೀರುನಾಮವನಿಟ್ಟು |
ಹಾರ ಕಂಕಣ ತೋಳಬಂದಿ ಘುಂಗುರ ಘನ-|
ಸಾರ ಕುಂಕುಮ ಕೇಸರಿಗಂಧ ಕೂಡಿಸಿ |
ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |
ಹಾರಾಡುತಲಿ ಬಂದ-ತೊಡರಗಾಲ |
ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |
ಧಾರಿಣಿಗೆ ಪುಟಿಸಿ ನಿಂದ-ವಜ್ರದ ಖಣಿ |
ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1
ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |
ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |
ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆ ಅವರ |
ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |
ಕಿಂಡಿಯಿಂದಲಿ ಬಂದನು-ನಾರಿಯರ |
ಮಂಡೆಗೆ ಚೆಂಡಿಟ್ಟನು-ತೋರಿಸುವರ |
ಕಂಡು ತಾ ನಗುತಿದ್ದನು-ಕೌತುಕವೆಂದು |
ದಿಂಡೆಯರು ಮಡುವಿನೊಳಗೆ ಹಾಕಿ ನಡೆದರು 2
ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |
ಗುಳುಗುಳಿಸುವ ವಿಷದ ಯಮುನಾ ತಡಿಯಲಿ ನಿಂದು |
ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |
ಕಳಕಳಿಸುವ ಗೋಪಾಲರಳುತಿರೆ |
ಇಳಿದ ನೀರೊಳಗಾಗಲು-ನಾಗರ ಫಣಿ |
ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |
ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |
ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3
ಮಗನ ಸುದ್ದಿಯ ಕೇಳಿ ಹರಿದು ಬಂದಳು ಗೋಪಿ |
ನಗರದ ಹೊರಗಾಗಿ ಬಾಯ ನಾದದಿಂದ |
ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |
ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|
ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |
ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |
ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |
ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4
ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |
ಮಾನಿನಿಯರು ಬೆರಗಾಗಿ ಬೀಳುತ ಕರುವ |
ಕಾಣದಿರೆತ್ತಿಗೆ ಕರುವನು ಬಿಡುವರು |
ಆ ನಾಸಿಕದ ಮೂಗುತಿ ಕಿವಿಗಿಡುವರು |
ಧೇನು ಮೇವನೆ ತೊರೆದುವು-ಗೋವುಗಳನ್ಯ-|
ರಾಮನೆಗೋಡಿದುವು-ವತ್ಯಗಳೆಲ್ಲ |
ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |
ವೇಣುನಾದದ ಧ್ವನಿ ಕೇಳದೆ ಮೆಚ್ಚವು 5
ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |
ತೋರುವ ಸಮಪಾದ ವಿಠಲನೆಂಬೆನೊ |
ಶ್ರೀರಮಣ ವೆಂಕಟನೆಂದು ಒದರುವೆನೊ |
ಶ್ರೀರಂಗಶಯನನೆಂದೆನಲ್ಲದೆ ನಿನ್ನ |
ಚೋರ-ಜಾರನೆಂದೆನೆ-ಹದ್ದಿನ ಮೇಲೆ |
ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |
ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |
ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6
ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |
ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |
ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |
ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |
ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |
ಮನ್ನಿಸಿ ವನಕೆ ಪೋಪರೆ-ಬಲಭದ್ರ |
ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |
ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7
ಎಂದ ಮಾತನು ಕೇಳುವಾ ಸಮಯ ನಾಗಿಣಿ-|
ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |
ಅಂದದ ಮೇಲುದ ಸುತ್ತಿಕೊಂಡಿರೆ ಅರ-|
ವಿಂದನಾಭಾಚ್ಯತ ಕೇಶವ ಮುರಹರ |
ಮಂದರಧರ ಹರಿಯೆ-ನಿನಗೆ ನಾವು |
ಮಂದಾಕಿನಿಯ ಸರಿಯೆ-ಮಾಂಗಲ್ಯದ |
ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|
ಯಿಂದ ಕರೆದು ನಮ್ಮ ಕಾಯಬೇಕೆಂದರು 8
ಇಂತಿಂತು ಸ್ತವನವ ಮಾಡೆ ಕಾಳಿಂಗನ |
ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |
ಕಂತುಕ ಸಹಿತ ಪಂಕಜನಾಳವನೆ ಕೊಂಡು |
ಸಂತಸದಲಿ ಇಕ್ಕುತ-ಶೋಕದಿ ನೀವು |
ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |
ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |
ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9
ಸುರರಿಗೆ ಸುಧೆ ಮುಂಚೆ ಉಣಿಸಿದ ಪರಬ್ರಹ್ಮ |
ಪರಿಪರಿ ಭೋಜನ ಮಾಳ್ಪ ಕಂಡುವರಾರು? |
ಸುರದುಂದುಭಿ ಪೊಡೆದು ಪಾರಿಜಾತದ ಮಳೆ |
ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |
ತೆರಳಿದನಾಶ್ರಮಕೆ-ಪುರಂದರವಿಠಲ |
ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |
ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10


ಚಿಹಿ ಹಳಿ - ಥೂ ಖೋಡಿ ಪಾಪಿ ಮನವೇ ಇಂಥ-| chihi hali thoo


ಚಿಹಿ ಹಳಿ - ಥೂ ಖೋಡಿ ಪಾಪಿ ಮನವೇ ಇಂಥ-|
ಕುಹಕ ಬುದ್ಧಿಯ ನೀ ಬಿಡು ಕಾಣೋ ಮನವೇಪ
ಬಣ್ಣದ ಬೀಸಣಿಕೆಯಂತೆ ಹೆಣ್ಣು ತಿರುಗುವುದು ಕಂಡು |
ಕಣ್ಣ ಸನ್ನೆಮಾಡಿ ಕೈಯ ಹೊನ್ನ ತೋರಿಸಿ ||
ತಣ್ಣೀರು ಹೊಯ್ದ ಹೊಸ ಸುಣ್ಣದಂದದಿ ಕುದಿದು ಕುದಿದು |
ಕಣ್ಣಿನೊಳು ಮಣ್ಣ ಚೆಲ್ಲಿ ಕೊಂಬರೇ ಮನವೆ1
ಪಗಡೆ ಚದುರಂಗ ಲೆತ್ತವನಾಡೆ ಕರೆದರೆ |
ನಿಗುರಿದುವು ಕರ್ಣಗಳು ಮೊಚ್ಚೆಯಂತೆ ||
ಜಗದೀಶ್ವರನ ದಿನದಿ ಜಾಗರಕೆ ಕರೆದರೆ |
ಮುಗಿಲ ಹರಿದು ಧರೆಗಿಳಿದಂತೆ ಮನವೇ 2
ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ |
ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ||
ಆ ಸಮಯದಲೊಬ್ಬ ಕಾಸು ಕೊಡಲು ಅವನ |
ದಾಸಿಯ ಮಗನಂತೆ ಬೆಂಬಿಡದೆ ಮನವೇ 3
ನೆರೆಮನೆ ಹೊರಮನೆ ಪ್ರಸ್ತವಾದರೆ ಅವರು |
ಕರೆಯದ ಮುನ್ನವೆ ಹೊರೆಹೊರಟೆ ||
ಬರಿಗಂಟು ಬರಿಮಾತು ಸುಳ್ಳುಸುದ್ದಿಯ ಹೇಳಿ |
ಹಿರಿಯ ಮಗನಂತೊಡಲ ಹೊರಕೊಂಬೆ ಮನವೆ 4
ಬಿಂದು ಮಾತ್ರವೆ ಸುಖ-ದುಃಖ ಪರ್ವತದಷ್ಟು |
ಸಂದೇಹ ವಿಲ್ಲವಿದು ಶಾಸ್ತ್ರಸಿದ್ಧ ||
ಎಂದೆಂದಿಗೂ ನಮ್ಮ ಪುರಂದರವಿಠಲನ |
ಹೊಂದಿಹೊಂದಿ ನೀ ಸುಖಬಾಳೊ ಮನವೆ 5