Labels

Tuesday 31 December 2019

ಮುಸುಕು ತೆಗೆದರೆ ಬೆನ್ನಲ ನಾಲಗೆ mushkil tegedare bennala naalage


ಮುಸುಕು ತೆಗೆದರೆ ಬೆನ್ನಲ ನಾಲಗೆ ಇದರ
ಹೆಸರು ಬಲ್ಲವರುಂಟೆ ಪೇಳಿರಿ ಜನರೆ ಪ.
ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳು
ಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳು
ಸುತ್ತೇಳು ಮೈಗೆರಡು ಜೋಡು ಬಂಗಾರ
ಸೃಷ್ಟಿಯೊಳಗೆ ಇದರ ಹೆಸರ ಬಲ್ಲವರುಂಟೆ 1
ಜಡೆ ಮೆರಗುವ ಬಾಲೆ ಒಡಲೊಳಗೆ ಕರುಳಿಲ್ಲ
ಬಿಡದೆ ಪಟ್ಟಾವಳಿಯುಟ್ಟು ಬಲ್ಲವಳು
ಅಡವಿಯೊಳಗೆ ಪುಟ್ಟಿ ಪಡೆದಳು ದೇಹವ
ಪೊಡವಿಯೊಳಗೆ ಇದರ ಹೆಸರು ಬಲ್ಲವರುಂಟೆ 2
ಬೇರಾಗಿ ಬೆರಳೈದು ಮೂರು ತಾನೊಂದಾಗಿ
ಯಾರು ಕಂಡರು ಎಂದು ನಸುನಗುತ
ಸೇರಿದ ಭಕುತರ ಪೊರೆವ ರಂಗಯ್ಯನ
ಸೇರಿ ಮೆಚ್ಚಿಸಿಕೊಳ್ಳೊ ಪುರಂದರವಿಠಲ 3


ಮುರಹರ ನಗಧರ ನೀನೆ ಗತಿ murahara nagadhara neene


ಮುರಹರ ನಗಧರ ನೀನೆ ಗತಿ
ಧರಣಿ ಲಕ್ಷ್ಮೀಕಾಂತ ನೀನೆ ಗತಿ ಪ
ಶಕಟ ಮರ್ದನ ಶರಣಾಗತ ವತ್ಸಲ
ಮಕರ ಕುಂಡಲಧರ ನೀನೆ ಗತಿ ||
ಅಕಳಂಕ ಚರಿತನೆ ಆದಿನಾರಾಯಣ
ರುಕುಮಿಣಿಪತಿ ಕೃಷ್ಣ ನೀನೆ ಗತಿ 1
ಮನೆಮನೆಗಳ ಪೊಕ್ಕು ಕೆನೆ ಹಾಲು ಬೆಣ್ಣೆಯ
ದಿನ ದಿನ ಮೆದ್ದ ಹರಿ ನೀನೆ ಗತಿ ||
ಅನುದಿನ ಭಕುತರ ಬಿಡದೆ ಕಾಯುವ
ಘನ ಮಹಿಮನೆ ಕೃಷ್ಣ ನೀನೆ ಗತಿ 2
ಪನ್ನಗಶಯನ ಸುಪರ್ಣಗಮನನೇ
ಪೂರ್ಣ ಚರಿತ ಹರಿ ನೀನೆ ಗತಿ ||
ಹೊನ್ನ ಹೊಳೆಯಲಿಹ ಪುರಂದರ ವಿಠಲ
ಚೆನ್ನ ಲಕ್ಷ್ಮೀಕಾಂತ ನೀನೆ ಗತಿ 3


ಮುಯ್ಯಕ್ಕೆ ಮುಯ್ಯ ತೀರಿತು muyyakke muyya teeritu


ಮುಯ್ಯಕ್ಕೆ ಮುಯ್ಯ ತೀರಿತು - ಜಗ |
ದಯ್ಯ ವಿಜಯ ಸಹಾಯ ಪಂಢರಿರಾಯ ಪ
ಸಣ್ಣವನೆಂದು ನಾ ನೀರು ತಾಯೆಂದರೆ |
ಬೆಣ್ಣೆಗಳ್ಳ ಕೃಷ್ಣ ಮರೆಯಮಾಡಿ ||
ಚಿನ್ನದ ಪಾತ್ರೆಯ ನೀರ ತಂದಿತ್ತರೆ |
ಕಣ್ಣ ಕಾಣದೆ ನಾನು ಟೊಣೆದೆ ಪಂಢರಿರಾಯ - 1
ಎನ್ನ ಪೆಸರ ಪೇಳಿ ಸೂಳೆಗೆ ಕಂಕಣ |
ವನ್ನು ನೀನು ಕೊಟ್ಟು ನಿಜವಮಾಡೆ ||
ಎನ್ನ ನೋಯಿಸಿ ಅಪರಾಧ ಭಂಡನ ಮಾಡಿ |
ನಿನ್ನ ಮುಯ್ಯಕೆ ಮುಯ್ಯ ತೋರಿದೆ ಪಂಢರಿರಾಯ -2
ಭಕ್ತವತ್ಸಲನೆಂಬ ಬಿರುದು ಬೇಕಾದರೆ |
ಕಿತ್ತು ಈಡಾಡೊ ಇನ್ನೊಂದು ಕಂಕಣವ ||
ಮುಕ್ತಿಗೆ ನೀನಲ್ಲದಾರನು ಕಾಣೆನು |
ಮುಕ್ತೀಶ ಪುರಂದರವಿಠಲ ಪಂಢರಿರಾಯ - 3


ಮುಪ್ಪಿನ ಗಂಡನ ಒಲ್ಲೆನೆ muppina gandana ollene


ಮುಪ್ಪಿನ ಗಂಡನ ಒಲ್ಲೆನೆ |
ತಪ್ಪದೆ ಪಡಿಪಾಟ ಪಡಲಾರೆನವ್ವ............ ಪ.
ಉದಯದಲೇಳಬೇಕು ಉದಕ ಕಾಸಲು ಬೇಕು |
ಹದನಾಗಿ ಬಜೆಯನು ಅರೆದಿಡಬೇಕು ||
ಬದಿಯಲಿ ಎಲೆ ಅಡಿಕೆ ಕುಟ್ಟಿಡಬೇಕು |
ಬಿದಿರಕೋಲು ತಂದು ಮುಂದಿಡಬೇಕು 1
ಪಿತ್ತವೋಕರಿಕೆ ಮುದುಕರಿಗೆ ವಿಶೇಷವು |
ಹೊತ್ತು ಹೊತ್ತಿಗೆ ಜೊಲ್ಲ ಚೆಲ್ಲಬೇಕು ||
ಮೆತ್ತನವೆರಡು ಮುದ್ದಿಯ ಮಾಡಲುಬೇಕು |
ಒತ್ತೊತ್ತಿ ಕೂಗಿ ಕರೆಯಲುಬೇಕು ....... 2
ಜಾಡಿ ಹಾಸಬೇಕು ನೋಡಿ ಬಾಡಬೇಕು |
ಅಡಗಡಿಗೆ ಕಣ್ಣೀರ ಸುರಿಸಬೇಕು ||
ಒಡೆಯ ಶ್ರೀ ಪುರಂದರವಿಠಲನ ನೆನೆಯುತ |
ಮಿಡಿಗೊಂಡು ಮೂಲೆಗೆ ಒರಗಬೇಕು 3


ಮುದ್ದು ತಾರೊ-ಕೃಷ್ಣ-ಎದ್ದು ಬಾರೊ muddu taaro Krishna


ಮುದ್ದು ತಾರೊ-ಕೃಷ್ಣ-ಎದ್ದು ಬಾರೊ |
ಶುದ್ಧವಾದ ಕರ್ಪುರದ ಕರಡಿಗೆಯ ಬಾಯಲೊಮ್ಮೆ ಪ
ಕಡೆಯುವ ಸಮಯಕೆ ಬಂದು ಕಡೆವ
ಸತಿಯ ಕೈಯಪಿಡಿದು |
ಬಿಡದೆ ಹೊಸ ಹೊಸ ಬೆಣ್ಣೆಯನು ಒಡನೆ
ಮೆಲುವ ಬಾಯಲೊಮ್ಮೆ 1
ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದ |
ವಶವಲ್ಲವೊ ಮಗನೆ ನಿನ್ನ ವಿಷವನುಂಡ ಬಾಯಲೊಮ್ಮೆ 2
ಪುರಂದರವಿಠಲನೆ ತೊರವೆಯ ನಾರಸಿಂಹ |
ಹರವಿಯ ಹಾಲ ಕುಡಿದು ಸುರಿವ ಜೊಲ್ಲ ಬಾಯಲೊಮ್ಮೆ 3


ಮುತ್ತೈದೆಯಾಗಿರಬೇಕು ಮುದದಿಂದಲಿ muttaideyaagirabeku mudadindali


ಮುತ್ತೈದೆಯಾಗಿರಬೇಕು ಮುದದಿಂದಲಿ |
ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು ಪ.
ಗುರುಮಧ್ವಶಾಸ್ತ್ರವನು ಓದುವುದೆ ಮಾಂಗಲ್ಯ |
ವರವೈರಾಗ್ಯವೆಂಬ ಒಪ್ಪುವ ಮೂಗುತಿ ||
ತಾರತಮ್ಯದರಿಮೆ ತಾಯಿತಿ ಮುತ್ತುಸರ |
ಕರುಣರಸಗಳೆ ಉಳ್ಳ ಕಟ್ಟಾಣಿ ಕಟ್ಟಿಕೊಂಡು 1
ಹರಿಕಥೆಯ ಕೇಳುವುದೆ ಕಿವಿಗೆ ಮುತ್ತಿನ ಓಲೆ |
ನಿರುತ ಸತ್ಕರ್ಮವೇ ನಿಜಕಾಂತಿಯು ||
ಪರಮ ಭಕ್ತರ ಪಾದರಜ ಹರಳು ಬಂಗಾರ |
ಗುರುಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ 2
ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು |
ಕೊಡುವ ಧರ್ಮವೆಂಬ ಕುಪ್ಪಸವ ತೊಟ್ಟು ||
ಬಿಡದೆ ಎನ್ನೊಡೆಯ ಶ್ರೀ ಪುರಂದರವಿಠಲನ |
ಧೃಡ ಭಕ್ತಿಯೆಂಬಂಥ ಕಡಗ - ಬಳೆ ಇಟ್ಟುಕೊಂಡು 3


ಮುತ್ತು ಬಂದಿದೆ ಕೇರಿಗೆ ಜನರು muttu bandide kerige


ಮುತ್ತು ಬಂದಿದೆ ಕೇರಿಗೆ ಜನರು ಕೇಳಿ
ಮುತ್ತು ಬಂದಿದೆ ಪ.
ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ ಅಪ
ಥಳಥಳಿಸುವ ಮುತ್ತು ಕಮಲ ನೇತ್ರದ ಮುತ್ತು
ಕಲುಷ ಪರ್ವತಕ್ಕಿದು ಕಲಶವಾಗಿಪ್ಪ ಮುತ್ತು
ಹಲಧರಾನುಜವೆಂಬ ಪವಿತ್ರ ನಾಮದ ಮುತ್ತು
ಒಲಿದು ಭಜಿಪರ ಭವ ತರಿದು ಕಾಯುವ ಮುತ್ತು 1
ಅಂಜದಿದ್ದವರಿಗೆ ಅಂಜಿಕೆ ತೋರುವ ಮುತ್ತು
ಭಂಜಿಸದ ಇತರ ಭಯವ ತೋರುವ ಮುತ್ತು
ಸಂಜೀವರಾಯ ಹೃದಯದೊಳಗಿಹ ಮುತ್ತು  2
ಜ್ಞಾನವೆಂಬೊ ದಾರದಲ್ಲಿ ಪೋಣಿಸಿ ನೋಡುವ ಮುತ್ತು
ಜ್ಞಾನಿಗಳ ಮನದಲ್ಲಿ ಮೆರೆವ ಮುತ್ತು
ಆನಂದ ತೀರ್ಥರ ಮನದಲ್ಲೊಪ್ಪುವ ಮುತ್ತು
ಶ್ರೀನಿಧಿ ಪುರಂದರವಿಠಲನೆಂಬೋ ಆಣಿಯ ಮುತ್ತು  3


ಮುಖ್ಯಪ್ರಾಣಾ ಎನ್ನ ಗುರುವೇ mukhyaprana enna guruve


ಮುಖ್ಯಪ್ರಾಣಾ ಎನ್ನ ಗುರುವೇ ಪ
ರಕ್ಕಸಾಂತಕ ಶ್ರೀ ರಾಮನ ನಿಜದಾಸ ಅ.ಪ
ತಂದೆ ನೀನೆ ಎನಗೆ ತಾಯಿ ನೀನೆ | ಬಂಧು ನೀನೆ
ಎನಗೆ ಬಳಗ ನೀನೇ |
ಎಂದೆಂದಿಗೂ ನಮ್ಮೆಲ್ಲರ ರಕ್ಷಪನು ನೀನೇ 1
ತಾತ ನೀನೇ ಎನಗೆ ಕರ್ತ ನೀನೇ | ವಿತ್ತ ನೀನೆ
ಎನಗೆ ವಿಭವ ನೀನೆ |
ಸತ್ಯ ನೀನೇ ಸದಾಚಾರವು ನೀನೇ 2
ಸುಖವು ನೀನೇ ಎನಗೆ ಸುಲಭ ನೀನೇ |
ಏಕಾಂತ ಶ್ರೀಪುರಂದರವಿಠಲನ ಭಕುತ ನಿಜವು ನೀನೇ3


ಮಾವನ ಮನೆಯೊಳಗೆ ಕೋವಿದರಿರಬಹುದೆ maavana maneyolage


ಮಾವನ ಮನೆಯೊಳಗೆ ಕೋವಿದರಿರಬಹುದೆ ? ಪ.
ಹಾವ ಹಿಡಿಯಲು ಬಹುದು ಹರಣ ನೀಡಲು ಬಹುದು |
ಬೇವ ಕಿಚ್ಚನು ಹಿಡಿದು ನುಂಗಬಹುದು ||
ಭಾವೆಯ ತಂದ ಮನೆಯಲಿ ಜೀವಿಪುದಕಿಂತ
ಸಾವುದೇ ಲೇಸು ಅಭಿಮಾನಿಗಳಿಗೆ 1
ಪರರ ಸೇರಲುಬಹುದು ಪತಿತರಲ್ಲಿರಬಹುದು |
ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು ||
ತರುಣಿಯ ತಂದೆಯ ಮನೆಯವಾಸಕ್ಕಿಂತ |
ತರುಗಿರಿಗುಹೆಗಳಲಿ ಇದ್ದು ಜೀವಿಸಬಹುದು 2
ಮಾವ - ಅತ್ತೆಯ ನೊಂದು ಅತ್ತಿಗೆಯು ತಾ ಜರೆದು |
ಹೇವವನಿಕ್ಕಿ ಚೂರ್ಣವ ಮಾಡಲು ||
ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದು
ಮಾವ ಹೊರಗಾಡುವನು ಚಿಕ್ಕ ನುಡಿಗಳನು 3
ಒಂದೊಂದು ತೆಂಗಳೂಳು ಬಹುಮಾನ ನಡತೆಗಳು |
ಒಂದೆರಡು ತಿಂಗಳೊಳಗೆ ಹಿತವಾದವು ||
ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು |
ಸಂದೇಹವೇಕೆ ಸಂಸಾರಿಗೂ 4
ಈ ಪರಿಯಲುಂಬಂಥ ಅಳಿಯ ಭೋಜನದಿಂದ |
ಗೋಪಾಳ ಲೇಸು ಅಭಿಮಾನಿಗಳಿಗೆ ||
ಶ್ರೀಪತಿ ನಮ್ಮ ಪುರಂದರವಿಠಲನ
ಈ ಪರಿ ಭಜಿಸಿ ಸುಖಿಯಾಗೊ ಮನವೆ * 5


ಮಾರುತನೆ ಏಳೆಂದು maarutane elendu


ಮಾರುತನೆ ಏಳೆಂದು ಎಬ್ಬಿಸಿದಳಂಜನೆಯು
ಶ್ರೀ ರಾಮ ಸೇವೆಗೆ ತಡವಾಯಿತೇಳು ಪ.
ಸೇತುಗಟ್ಟಲು ಬೇಕು ಶರಧಿ ದಾಟಲು ಬೇಕು
ಮಾತೆಗೆ ಉಂಗುರವ ಕೊಡಲು ಬೇಕು ||
ಪಾತಕಿ ರಾವಣನ ಶಿರವನ್ಹರಿಯಲು ಬೇಕು
ಸೀತೆಪತಿ ರಾಮರಿಗೆ ನಮಿಸಬೇಕು 1
ಇಂತು ಕಳಿಯಲು ಬೇಕು ಅಙÁ್ಞತವಾಸವನು
ಪಂಥದಲಿ ಕೀಚಕರ ಒದೆಯಬೇಕು ||
ತಂತ್ರದಲಿ ಗೆಲಬೇಕು ಶಕುನಿ ದುರ್ಯೋಧನರ
ಕುಂತಿನಂದನನೆಂದು ಹೆಸರಾಗಬೇಕು 2
ಮಧ್ವರಾಯರು ಎಂದು ಪ್ರಸಿದ್ಧರಾಗಲು ಬೇಕು
ತಿದ್ದಿ ಹಾಕಲು ಬೇಕು ಸಕಲಗ್ರಂಥಗಳ ||
ಅದ್ವೈತವಾದಿಗಳ ಗೆದ್ದು ಕೆಡಹಲು ಬೇಕು
ಮುದ್ದು ಪುರಂದರವಿಠಲ ದಾಸನೆನಿಸಲು ಬೇಕು 3


ಮಾಯೆ ಎನ್ನ ಕಾಯವನ್ನುಪಾಯದಿಂದ ಮೋಹಿಸಿ maaye enna kaayavannu


ಮಾಯೆ ಎನ್ನ ಕಾಯವನ್ನುಪಾಯದಿಂದ ಮೋಹಿಸಿ |
ಬಾಯ ಮುಚ್ಚಿ ಕೊಲ್ಲುತಿಹಳು ಕಾಯೊ ಲಕ್ಷ್ಮೀರಮಣನೆ ಪ
ಮಾತೆ-ಪಿತರ ವಿಷಯದಿಂದ ಶ್ವೇತಬಿಂದು ಬೀಳಲಾಗಿ |
ಕೀತ ತತ್ತಿ ಬಲಿದು ಮಾಸಚೀಲದೊಳಗೆ ಬೆಳೆದೆನು ||
ರಕ್ತಗೂಡಿ ಬಸಿರೊಳೊಂಬತ್ತು ತಿಂಗಳಿದ್ದೆ ನಾನು |
ಸತ್ತು ಮತ್ತೆ ಹುಟ್ಟ ಹೋಗಲಾರೆ ಲಕ್ಷ್ಮೀರಮಣನೆ 1
ಎಲವು ಕಂಬಮಾಡಿ ನರದ ಬಳ್ಳಿಯಲ್ಲಿ ಬಿಗಿದು ಬಿಗಿದು |
ಒಳಗೆ ರಕ್ತದಿಂದ ಮೆತ್ತಿ ಹೊಸೆ ಪಾಪದಿಂದ ನಿಂದೆ ||
ನೆಲೆಯ ಮನೆಯ ಮಾಡಿ ಚರ್ಮಹೊಲಿzಯ ಹೊದಿಕೆ ಹೊದಿಸಿದಂಥ |
ಹೊಲೆಯ ಗೂಡಿನಲ್ಲಿ ಜನಿಸಲಾರೆ ಲಕ್ಷ್ಮೀರಮಣನೆ 2

ಎನ್ನ ಸತಿಯು ಎನ್ನ ಸುತರು ಎನ್ನ ಬಂಧು - ಬಳಗವು |
ಎನ್ನ ಸಾಕಿ ಸಲಹು ಎಂದು ಹರಿದು ತಿಂಬರು ||
ಎನ್ನ ತನುವ ಜವನು ಬಂದು ಎಳೆದುಕೊಂಡು ಒಯ್ಯುವಾಗ |
ಬೆನ್ನಬಪ್ಪರಾರ ಕಾಣೆ ಚೆನ್ನ ಲಕ್ಷ್ಮೀರಮಣನೇ 3

ಇರುವೆ ಮೊದಲು ಆನೆ ಕಡೆಯು ಬಸಿರೊಳು ಬಂದೆ ನಾ |
ಹರಿದು ಪಾಪಕರ್ಮದಿಂದೆ ತೊಪಳಲಿ
ಬಳಲಿ ನೊಂದೆ ನಾ ||
ಬಿರುಗಾಳಿಗೆ ಸಿಕ್ಕ ಮರದ ತರಗೆಲೆಯಂತುದುರಿ ನಾ |
ಮರಳಿ ಮರಳಿ ಸತ್ತು ಹುಟ್ಟಲಾರೆ ಲಕ್ಷ್ಮೀರಮಣನೆ 4
ಲಕ್ಷ ಜೀವರಾಶಿಗಳನು ಕುಕ್ಷಿಯೊಳಗೆ ಇರಿಸಿ ನಿನ್ನ |
ಅಕ್ಷಯ - ಅನಂತ ನನ್ನನೇಕೆ ಹೊರಗೆ ಮಾಡಿದೆ ||
ಈಕ್ಷಿಸುತಿರು ಎನ್ನ ನೀನು ಕುಕ್ಷಿಯೊಳಗೆ ಇಂಬನಿತ್ತು |
ರಕ್ಷಿಸಯ್ಯ ಲಕ್ಷೀಪತಿ ಪುರಂದರ ವಿಠಲನೆ 5


ಮಾಮಝ ಭಾಪುರೆ ಭಳಿರೆ ಹನುಮಂತ mamaza baapure bhalire


ಮಾಮಝ ಭಾಪುರೆ ಭಳಿರೆ ಹನುಮಂತ
ರಾಮಪದ ಸೇವಿಪ ವೀರ ಹನುಮಂತ ಪ
ಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿ
ನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||
ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನ
ಪಟ್ಟಕನುವಾದ ಸಿರಿವಂತ ಹನುಮಂತ 1
ಅಂಬರಕೆ ಪುಟನೆಗೆದು ಅಂಬುಧಿಯ ನೆರೆ ದಾಟಿ
ಕುಂಭಿನಿಯ ಮಗಳಿಗುಂಗುರವನಿತ್ತು |
ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ
ಗಂಭೀರ ವೀರಾಧಿವೀರ ಹನುಮಂತ 2
ಅತಿದುರಳ ರಕ್ಕಸನು ರಥದ ಮೇಲಿರಲು ರಘು-
ಪತಿಯು ಪದಚರಿಯಾಗಿ ನಿಂತಿರಲು ನೋಡಿ ||
ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆ
ಅತಿ ಭಯಂಕರ ಸತ್ತ್ವವಂತ ಹನುಮಂತ 3
ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದು
ದೃಢಭಕ್ತಿಯಿಂದ ಮೌನದಿ ಕುಳಿತು ||
ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆ
ಕೊಡುತ ಸವಿದುಂಡ ಗುಣವಂತ ಹನುಮಂತ4
ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮ
ತೃತೀಯದಲಿ ಗುರು ಮಧ್ವಮುನಿಯೆನಿಸೀ ||
ಪ್ರತಿಯಿಲ್ಲದಲೆ ಮೆರೆದೆ ಪುರಂದರ ವಿಠಲನ
ಸುತ್ತ ನಿನಗಾರು ಸರಿ - ವಿಜಯ ಹನುಮಂತ 5


ಮಾನಹೀನರಿಗೆ ಅಭಿಮಾನವೇಕೆ maanaheenarige abhimaanveke


ಮಾನಹೀನರಿಗೆ ಅಭಿಮಾನವೇಕೆ - ಪ್ರ
ಧಾನಿಯಿಲ್ಲದ ಅರಸುತನವೇಕೆ ಕೃಷ್ಣಾ ? ಪ.
ಕಾಡಿನೊಳು ತಿರುಗುವಗೆ ಕನಕ ಭೂಷಣವೇಕೆ ?
ಓಡಿನಲಿ ಉಂಬುವಗೆ ಹರಿವಾಣವೇಕೆ ?
ಬೇಡಿದರೆ ಕೊಡದ ಲೋಭಿಗೆ ಬಿಂಕವೇಕೆ ?
ಪಾಡಲರಿಯದೆ ಪ್ರೌಡತನವೇಕೆ ಕೃಷ್ಣಾ ? 1
ಪತಿ ಮೀರಿ ನಡೆವಳ ವ್ರತ ನೇಮತನವೇಕೆ ?
ಸತಿಗಳುಕಿ ನಡೆವವಗೆ ಸ್ವಾತಂತ್ತ್ಯವೇಕೆ ?
ಮತಿಗೆಟ್ಟು ತಿರುಗುವಗೆ ಮಂತ್ರ - ತಂತ್ರಗಳೇಕೆ ?
ಅತಿಯಾಸೆ ಬಿಡದ ಸಂನ್ಯಾಸಿ ತಾನೇಕೆ 2
ಕಾಮವಿಲ್ಲದವರಿಗೆ ಕಾಂತಿಯರ ಗೊಡವೇಕೆ ?
ಪ್ರೇಮವಿಲ್ಲದ ಬಂಧು - ಬಳಗವೇಕೆ ?
ಸ್ವಾಮಿ - ಶ್ರೀ ಪುರಂದರವಿಠಲ ನೆನೆಯದ
ತಾಮಸದ ಜನರಿಂಗೆ ಕೈವಲ್ಯವೇಕೆ ? 3


ಮಾನವಜನ್ಮ ದೊಡ್ಡದು maanava janma doddadu


ಮಾನವಜನ್ಮ ದೊಡ್ಡದು - ಇದ |
ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.
ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |
ಮಣ್ಣುಮುಕ್ಕಿ ಮರುಳಾಗುವರೆ ||
ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |
ಉಣ್ಣದೆ ಉಪವಾಸವಿರುವರೇನೋ 1
ಕಾಲನವರು ಬಂದು ಕರಪಿಡಿದೆಳೆವಾಗ |
ತಾಳು ತಾಳೆಂದರೆ ಕೇಳುವರೆ ? ||
ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |
ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ 2
ಏನು ಕಾರಣ ಯದುಪತಿಯನು ಮರೆತಿರಿ |
ಧ್ಯಾನ್ಯ - ಧನ - ಸತಿ - ಸುತರಿವು ನಿತ್ಯವೆ? ||
ಇನ್ನಾದರು ಶ್ರೀ ಪುರಂದರವಿಠಲನ |
ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ 3


ಮಾನಭಂಗವ ಮಾರಿ ಮೇಲುಪಚಾರವ maanabhangava maari


ಮಾನಭಂಗವ ಮಾರಿ ಮೇಲುಪಚಾರವ
ಏನ ಮಾಡಿದರಿಲ್ಲಿ ಇರಬಾರದಯ್ಯ ಪ.
ಕುಂದುಗಳನಾಡಿ ಕುಚೋದ್ಯಗಳನೆ ಮಾಡಿ
ಕಂದ ಬಾಯೆಂದು ಬಣ್ಣಿಸಿ ಕರೆಯಲು
ಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದು
ಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ 1
ನಗಗೇಡಿ ಮಾಡಿ ನಾಲುವರೊಳಗೆ ಕೈಯ
ಮುಗಿವೆ ಬಾಯೆಂದು ಬಣ್ಣಿಸಿ ಕರೆಯಲು
ಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲು
ತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ 2
ಆರ್ಥ ಹೋದರು ಪ್ರಾಣ ಹೋದರೂ ಮಾನ
ವ್ಯರ್ಥವಾಗದ ಹಾಗೆ ಕಾಯಬೇಕು
ಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನ
ಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ 3


ಮಾಧವ ಮಧುಸೂದನ- ಯಾದವಕುಲರನ್ನ ಯ-| maadhava madhusudhana


ಮಾಧವ ಮಧುಸೂದನ- ಯಾದವಕುಲರನ್ನ ಯ-|
ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪ
ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |
ಮುಂಗೈಯವಾಕು ಬೆರಳ ಹೊನ್ನುಂಗರ ||
ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |
ಅಂಗನೆಯರು ನಿನ್ನನೊಯ್ವರೊ ||
ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |
ಡಿಂಗರಿಗರು ಕಂಡರೆ ಬಿಡರೊ ನಿ- ||
ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |
ಕಂಗಳ ಸಿರಿಯೆ ಬಾರೋ- ರಂಗಯ್ಯ 1
ಬಾಲಕರೊಡನಾಟ ಸಾಕು ಬಾ ಬಾರೈಯ |
ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||
ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |
ಸೋಲ್ವರೊ ನಿನಗೇಸೋ ಸೋಗೆಯರು ||
ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|
ಡ್ಡೋಲಗದೊಳು ರಕ್ಕಸರು ಪಂಥವನಾಡೆ ||
ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |
ಕಾಲಿಗೆ ಎರಗುವೆ ಬಾರೊ-ರಂಗಯ್ಯ 2
ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|
ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||
ಎಮ್ಮ ಮನಕೆ ಅಹಲ್ಲಾದನು ನೀನೆ |
ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||
ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|
ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3


ಮಾಡು ದಾನಧರ್ಮ ಪರ ಉಪಕಾರವ maadu daana dharma


ಮಾಡು ದಾನಧರ್ಮ ಪರ ಉಪಕಾರವ ಮರೆಯದಿರೆಚ್ಚರಿಕೆ ಪ.
ಕೇಡ ನೆನೆಯಬೇಡ ನಂಬಿದವರ ಮೇಲೆ ಕೆಡುವೆ ನೀನೆಚ್ಚರಿಕೆ ||ಅ||
ಬಾಳು ಬದುಕು ಸಿರಿ ಇರುವಾಗ ಬಂಧು ಬಳಗಗಳೆಚ್ಚರಿಕೆ |
ಹಾಲು ಸಂಸಾರಕ್ಕೆ ಹಲವರ ಬಾಯ್ಗಳ ಬಡಿಯದಿರೆಚ್ಚರಿಕೆ 1
ಮೂಢರ ಒಡನಾಡಿ ಮುಂದೆ ಕೆಡಲು ಬೇಡ
ಮೋಸ ನೋಡೆಚ್ಚರಿಕೆ
ನಾಡೊಳು ಸುಜನರ ನೋಡಿ ನಡೆ
ಕಂಡ್ಯ ನಟನೆ ಬೇಡೆಚ್ಚರಿಕೆ 2
ಚೆನ್ನಾಗಿ ಬದುಕಿದೆ ಗಳಿಸಿದೆ ನಾನೆಂಬ ಹೆಮ್ಮೆ ಬೇಡೆಚ್ಚರಿಕೆ |
ನಿನ್ನಾಯು ಮುಗಿದಿರಲು ಯಮದೂತರು
ಬಂದು ಎಳೆಯುವರೆಚ್ಚರಿಕೆ 3

ಒಬ್ಬರಂತೆಲ್ಲರ ನೋಡಿ ಸತ್ಕರ್ಮದಿ ಉಬ್ಬಬೇಡೆಚ್ಚರಿಕೆ |
ಕಬ್ಬು ಬಿಲ್ಲನ ಪಿತನ ಏಕಾಂತ ಭಾವದಿಂ
ನೆರೆನಂಬು ಎಚ್ಚರಿಕೆ 4
ಹೆಣ್ಣು ಹೊನ್ನು ಮಣ್ಣು ನಿನ್ನನಗಲಿಸಿ ಹೋಗುವರೆಚ್ಚರಿಕೆ |
ಮುನ್ನಮಾಡಿದ ಪುಣ್ಯ ಬೆನ್ಹತ್ತಿ ಬರುವುದು
ಮುಂದೆ ನೋಡೆಚ್ಚರಿಕೆ 5
ತಿಂದೋಡಿ ಬಂಧುಬಳಗ ತಪ್ಪಿಸಿ ಕೊಂಬರೆಂದು ನೋಡೆಚ್ಚರಿಕೆ |
ಎಂದೆಂದು ಅಗಲದ ಬಂಧು ಶ್ರೀ ಹರಿ
ನಮಗೆಂದು ನೋಡೆಚ್ಚರಿಕೆ 6
ಕಾಲನ ದೂತರು ಯಾವಾಗ ಎಳೆವರೋ ಕಾಣದು ಎಚ್ಚರಿಕೆ |
ಬೇಲೂರು ಪುರವಾಸ ಪುರಂದರವಿಠಲನ ಆಳಾಗು ಎಚ್ಚರಿಕೆ* 7


ಮಹಾದಾದಿದೇವ ನಮೋ ಮಹಾಮಹಿಮನೆ ನಮೋ mahadadideva namo


ಮಹಾದಾದಿದೇವ ನಮೋ ಮಹಾಮಹಿಮನೆ ನಮೋ
ಪ್ರಹಲ್ಲಾದವರದ ಅಹೋಬಲ ನರಸಿಂಹ ಪ.
ತರಣಿಗುಬ್ಬಸವಾಗೆ ತಾರಾಪತಿಯು ನಡುಗೆ
ಸುರರು ಕಂಗೆಟ್ಟೋಡೆ ನಭವ ಬಿಟ್ಟು ||
ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆ
ಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ 1
ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿ
ಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||
ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿ
ಬಿಡದೊಡಲ ಬಗೆದ ಕಡುಗಲಿ ನಾರಸಿಂಹ 2
ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ
ಸುರರು ಅಂಬರದಿ ಪೂಮಳೆಗರೆಯಲು
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನು
ಕರುಣಿಸುವ ಪುರಂದರವಿಠಲ ನಾರಸಿಂಹ 3


ಮಲವು ತೊಳೆಯಬಲ್ಲುದೆ Malava toleyaballade

ಮಲವು ತೊಳೆಯಬಲ್ಲುದೆ
ಮನವ ತೊಳೆಯದನಕ ಪ
ಹಲುವು ನೀರಿನೊಳಗೆ ಪೊಕ್ಕು
ಹಲುಬಿದರಿನ್ನೇನು ಫಲ? ಅಪ
ಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿ
ಭೋಗಬೇಡಿ ಜನರು ಜೀವಕಾಗಿ ಮುನಿವರು
ಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿ
ಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1
ಪರರ ಕೇಡಬಯಸಿ ಗುರು - ಹಿರಿಯರನ್ನು ನಿಂದಿಸುತ
ಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತ
ಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿ
ಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2
ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲ
ಮಂದಗಮನೆಯರೊಡನೆ ಆನಂದದಿಂದ ನಲಿಯುತ
ತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದ
ತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3
ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿ
ದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲು
ಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪ
ವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4
ಏನು ಮಾಡಲೇನು ಫಲ - ಏನು ನೋಡಲೇನು ಫಲ
e್ಞÁನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆ
ಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡು ದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5

ಮಲಗಿ ಎದ್ದನು ರಂಗ malayi eddanu ranga

ಮಲಗಿ ಎದ್ದನು ರಂಗ, ಮಕ್ಕಳ ಮಾಣಿಕ ಕೃಷ್ಣ |
ಛಲ ಹಿಡಿದನು ನೋಡೆ ಮೊಲೆಕೊಡೆ ಕೃಷ್ಣಗೆ ಪ
ಜಲದೊಳು ತಮನ ಮರ್ದಿಸಿ ಅಂದು ಮತ್ಸ್ಯನಾಗಿ |
ಬಲುಗಿರಿಯ ನೆಗಹಿ ಮರೆಮಾಡಿ ಕೂರ್ಮನಾಗಿ ||
ನೆಲನ ಒಯ್ದವನ ಕೊಲುವೆನೆಂದು ವರಹನಾಗಿ |
ಬಲುಭಕ್ತಿಗಾಗಿ ಕಂಬದಿ ನಾರಸಿಂಹನಾಗಿ 1
ಚಿಕ್ಕ ರೂಪದಿಂದ ಬಲಿಯ ದಾನವ ಬೇಡಿ |
ಉಕ್ಕಿನ ಕೊಡಲಿಯ ಪಿಡಿದ ಪರಶುರಾಮ ||
ಮಿಕ್ಕಿದ ತಲೆಯ ಚೆಂಡಾಡಿದ ಶ್ರೀರಾಮ |
ಸೊಕ್ಕಿದ ಕಂಸನ ಕೊಲುವೆನೆಂದ ಕೃಷ್ಣ 2
ಬಲು ಪತಿವ್ರತೆಯರ ವ್ರತವನಳಿದ ಬುದ್ಧ |
ಕಲಿಯಾಗಿ ಖಡಗುವ ಪಿಡಿದು ಕುದುರೆ ಏರಿ ||
ಒಲಿದು ಭಕ್ತರನೆಲ್ಲ ಸಲಹುವೆನೆಂತೆಂದು |
ಚೆಲುವ ಪುರಂದರವಿಠಲ ತೊಟ್ಟಿಲೊಳು 3

ಮಲಗಯ್ಯ ಜಲಜನಾಭ malagayya jalajanabha

ಮಲಗಯ್ಯ ಜಲಜನಾಭ ಪ
ಆದಿಶೇಷ್ಟನು ಬಂದು ಹಾಸಿಗೆಯಾಗಿಹ
ವೇದವಿನುತ ಜಗದಾದಿ ಪುರುಷ ಕೇಳೊ 1
ಸಿರಿ ಭೂ ದುರ್ಗೆಯರು ತರುಣಿಯರು ಮೂವರು
ಚರಣವೊತ್ತಲಿಕೆ ಕೈಕಟ್ಟಿ ನಿಂತಿಹರು2
ಸರುವಜ್ಞ ಮುನಿವಂದ್ಯ ಸರುವ ಸ್ವತಂತ್ರನೇ
ಪರಮ ಸುಂದರ ಪುರಂದರವಿಠಲರಾಯಾ 3

ಮರೆಯಬೇಡ ಮನವೆ ನೀನು mareyabedave manave neenu



ಮರೆಯಬೇಡ ಮನವೆ ನೀನು |
ಹರಿಯ ಚರಣವ ಪ.
ಯಾಗ - ಯಜ್ಞ ಮಾಡಲೇಕೆ
ಯೋಗಿ - ಯತಿಯು ಆಗಲೇಕೆ |
ನಾಗಶಯನ ನಾರದವಂದ್ಯನ
ಕೂಗಿ ಭಜನೆ ಮಾಡು ಮನುಜ 1
ಸತಿಯು ಸುತರು ಹಿತರು ಎಂದು
ಮತಿಯು ಕೆಟ್ಟು ತಿರುಗಲೇಕೆ |
ಗತಿಯು ತಪ್ಪಿ ಹೋಗುವಾಗ
ಸತಿಸುತರು ಬಾಹೊರೇನೊ ? 2
ಹರಿಯ ಸ್ಮರಣೆ ಮಾತ್ರದಿಂದ
ದುರಿತ ಘೋರವೆಲ್ಲ ನಾಶ
ಪರಮಪುರುಷ ಪುರಂದರವಿಠಲ
ಪರದ ಪದವಿ ಕೊಡುವನೊ 3


ಮರೆಯದೆ ಮನದಲಿ ಸಿರಿವರನ ಚರಣವನು mareyade manadalli


ಮರೆಯದೆ ಮನದಲಿ ಸಿರಿವರನ ಚರಣವನು
ಸ್ಮರಿಸಿದಂಥವರನ್ನು ನರರೆನ್ನಬಹುದೆ ? ಪ.
ಮುರಹರನಿಗೆರಗುವ ಶಿರವು ದ್ವಾರಕಾಪುರವು
ಹರಿಕಥೆ ಕೇಳುವ ಕರ್ಣ ಗೋಕರ್ಣವು
ಬಿರುದು ಪೊಗಳುವ ಜಿಹ್ವೆ ಸ್ಥಿರದಿ ಕ್ಷೀರಾರ್ಣವ
ವರದನ ಪೂಜಿಪ ಕರವು ರಾಮೇಶ್ವರವು 1
ಸೃಷ್ಟೀಶ ನಿರ್ಮಾಲ್ಯ ಗೃಹಣ ನಾಸಿಕ ಕಾಶಿ
ಕೃಷ್ಣನ ನೋಡುವ ದೃಷ್ಟಿ ಶ್ರೀ ಮುಷ್ಣವು
ಅಷ್ಟಮದಗಳ ಜರೆದ ಮುಖ ಮಥುರಾಪುರ
ವಿಷ್ಣುವನು ಪಾಡುವ ಕಂಠ ಭೂ ವೈಕುಂಠ 2
ಪರಕೆ ನಡೆಸುವ ಜಂಘೆ ಹರಿವ ಗಂಗೆಯು ಈ
ಪರಿಯಲೊಪ್ಪುವ ಅಂಗ ಶ್ರೀರಂಗವು
ಧರೆಯೊಳು ಪುರಂದರ ವಿಠಲರಾಯನ
ಪರಮ ಭಾಗವತರ ಉದರವೆ ಬದರಿ 3


Monday 30 December 2019

ಜೋ ಜೋ ಜೋ ಶ್ರೀ ರಾಘವೇಂದ್ರರ ಜೋಗುಳ jo jo shri raghavendra

ಜೋ ಜೋ ಜೋ ಶ್ರೀ ರಾಘವೇಂದ್ರರ ಜೋಗುಳ ಪದ ಜೋ ಜೋಜೋ ಜೋ ಜೋ ಜೋ ಗುರು ರಾಘವೇಂದ್ರಾಜೋ ಜೋ ಶುಭಗುಣಸಾಂದ್ರ ಯತೀಂದ್ರಾ ಪ
ನರಹರಿಯೊಲಿಸಿದ ಬಾಲ ಪ್ರಲ್ಹಾದಸಿರಿಕೃಷ್ಣನರ್ಚಕ ವ್ಯಾಸ ಯತೀಂದ್ರ ಜೋ ಜೋ 1
ಗುರು ಮಧ್ವಮತವನುದ್ಧರಿಸಿದ ಮಹಿಮಾಸಿರಿ ರಾಮ ಸೇವಕ ಗುರು ಸಾರ್ವಭೌಮ ಜೋ ಜೋ 2
ತಂದೆ ಸಿರಿವಿಠಲನ ಆಜ್ಞೆಯಿಂ ಬಂದೂನಿಂದೆ ವೃಂದಾವನದಿ ನಿಜ ಭಕ್ತ ಬಂಧು ಜೋ ಜೋ 3


ಶ್ರೀ ರಘುರಾಮ ಪದಾಂಬುಜ ಭೃಂಗನೆ ಶ್ರೀ ರಾಘವೇಂದ್ರ ಸದ್ಗುರುವರನೆಸಾರಿದೆ ನಿನ್ನ ಪಾದಾರವಿಂದಯುಗಳಾರಾಧನೆಯಿತ್ತು ಸಲಹೆಮ್ಮನೂ ಪ.
ಶ್ರೀ ಮಧ್ವಶಾಸ್ತ್ರ ಸುಧಾಂಬುಧಿಯೊಳು ಪುಟ್ಟಿ ಕಾಮಾರಿ ಶಿರಮುಟ್ಟಿ ಪೂರ್ವೋತ್ತರಆ ಮಹಾ ಅಲೆಯೊಳು ಚಲಿಸಿ ದೇವಾಳಿಯಿಂ ಪ್ರೇಮದಿ ಸೇವ್ಯವಾಗಿರುತಿರುವ 1
ಹರಿಪದಾಂಬುಜಗಳಲ್ಲಿ ಬೆರೆದು ಪಂಚಭೇದ ವರತಾರತಮ್ಯದಿ ದುರ್ವಾದವತರಿದ ಶ್ರೀ ಗುರು ವಾಗ್ದೇವತಾನದಿಯನ್ನು ನಿರುತನಿರ್ಮಲಗೈಸಿ ಕರುಣಿಸಲಿ 2
ಗುರು ರಾಘವೇಂದ್ರನೆ ಸಕಲ ಪ್ರದಾತನೆ ನಿರುತ ನಿನ್ನಡಿಯಲಿ ಭಕ್ತಿಯೊಳುಇರುವರ ಪಾಪ ಪರ್ವತವನ್ನು ಭೇದಿಪೆವರದೃಷ್ಟಿಯೆಂಬ ವಜ್ರಾಯುಧದಿ 3
ಭೂವಿಭುದೇಂದ್ರನೆ ಸೇವಿಸಿ ಹರಿಯ ಮಹಾವಿಭವವನ್ನೆಲ್ಲ ಪಡೆದವನೆದೇವ ಸ್ವಭಾವನೆ ಯಾವಾಗಲೆಮ್ಮಿಷ್ಟ ದೇವತರುವಿನಂತೆ ನೀಡುವುದು 4
ಶೀಲಸ್ವರೂಪನೆ ಸಂಸಾರ ದುಃಖದ ತೂಲರಾಶಿಗೆ ಕಾಲಾನಲನೆಸುವಿಮಲರೂಪನೆ ತವಕದಿ ಪರವಾದಿ ನಿವಹಕೆ ವಾಗ್ಬಂಧನಗೈಸುವನೆ 5
ವರ ವಿದ್ವಜ್ಜನರುಗಳರಿಯಲತ್ಯಧಿಕವಾಗಿರುವ e್ಞÁನವು ವಾಗ್ವೈಖರಿಯಿಂದಲಿಪರವಾದಿಗಳ ಗೆದ್ದ ಶ್ರೀ ರಾಘವೇಂದ್ರ ಸದ್ಗುರುವೆ ನಮ್ಮಿಷ್ಟವ ಸಲಿಸುವುದು 6
ಸಂತಾನ ಸಂಪತ್ತು ಭಕ್ತಿವಿe್ಞÁನವು ಮುಂತಾದವಾಗ್ದೇಹ ಪಾಟವವಸಂತೋಷದಿಂದಿತ್ತು ನಮ್ಮ ಶರೀರದ ಸಂತಾಪರುಜೆಯ ನಿಗ್ರಹಿಸುವವನೆ 7
ಮೇದಿನಿಯೊಳು ಗಂಗಾದಿ ತೀರ್ಥಾಧಿಕವಾದನಿನ್ನಯ ಪಾದೋದಕವುಮೋದದಿ ಬ್ರಹ್ಮಹತ್ಯಾದಿ ತ್ರೈಪಾಪವ ಛೇದಿಸಿ ಸುಕೃತವ ಕೊಡುತಿಹುದು 8
ಭೂಮಿಯೊಳು ಬಂಜೆಗೆ ಮಕ್ಕಳ ಕೊಡುವದು ಅವಯವದಬಿಳ ಕೈವಲ್ಯವನುತವಕದಿ ಸಕಲಗ್ರಹವ ನಿಗ್ರಹಿಸುತ ವಿವಿಧ ಪಾತಕ ಪರಿಹರಿಸುವುದು 9
ನಿನ್ನ ಪದಾಬ್ಜದರಜ ಧರಿಸಿರುವರ ನಿನ್ನ ಪದಾಂಬುಜ ಕೀರ್ತಿಪರಉನ್ನತ ಪರಿಪಕ್ವವಾದ ವಾಗ್ಮಿಗಳನಿನ್ನು ಸಂದರ್ಶಿಸೆ ದುರಿತಹರ 10
ಭವಶರಧಿಗೆ ಸೇತುವೆಯೆನಿಸಿರುವನೆ ಭುವಿಯೊಳು ದ್ವೇಷಿಗಳಿಲ್ಲದಿಹಸುವಿಮಲರೂಪನೆ ತವಕದಿ ಪರವಾದಿ ನಿವಹಕೆ ವಾಗ್ಬಂಧಗೈಸುವನೆ 11
ಜಯಸರ್ವತಂತ್ರಸ್ವತಂತ್ರನೆ ಜಯಜಯ ಜಯಜಯ ಶ್ರೀ ಮಧ್ವಮತವರ್ಧನಜಯ ವಿಜಯೀಂದ್ರರ ಕರಕಮಲ ಸಂಜಾತಜಯತು ಸುಧೀಂದ್ರರ ವರಪುತ್ರನೆ 12
ಪರಮಹಂಸೋತ್ತಮ ಪೂರ್ಣಾಯುe್ಞÁನವು ನಿರುತ ಯಶವು ಪುಣ್ಯಭಕ್ತಿಯನುಸಿರಿಯ ಸುಪುತ್ರರ ವೃದ್ಧಿಯಗೊಳಿಸೆನ್ನ ಪರಿಪರಿ ಭಯವೆಲ್ಲ ಪರಿಹರಿಸೋ 13
ದುರುಳ ದುರ್ವಾದಿಗಳನು ನಿಗ್ರಹಿಸುವ ದುರುಳರ ಹೃದಯ ಪ್ರಭೇದಿಸುವಎರಡು ಚಿಹ್ನೆಗಳನ್ನು ಧರಿಸಿದ ವಿದ್ಯಾ ಪರಿಪೂರ್ಣ ಗುರುವನ್ಯರಿಲ್ಲವೊ 14
ಹರಿಯ ಪ್ರಸನ್ನತೆ ಪಡೆದು ಪ್ರಸಿದ್ಧನಾಗಿರುತ ಸ್ಮರನಗೆಲಿದಿಷ್ಟಗಳತ್ವರಿತದಿ ಕೊಡುವ ಶ್ರೀ ಗುರುರಾಘವೇಂದ್ರರ ಹೊರತನ್ಯ ಗುರುವಿಲ್ಲ ಧರೆಯೊಳಗೆ 15
ಮರೆವು ಮೂರ್ಛಾಕ್ಷಯವe್ಞÁನ ಭ್ರಾಂತಿಯು ಉರುತರ ಮೂಕತ್ವ ಸಂದೇಹವುಕರಚರಣದಕಂಪ ಮೊದಲಾದ ಇಂದ್ರಿಯ ಪರದುಷ್ಟದೋಷವ ಪರಿಹರಿಸೋ 16
ಶ್ರೀ ರಾಘವೇಂದ್ರಾಯ ನಮಃ ಎಂಬುವ ದಿವ್ಯ ಸಾರಾಷ್ಟಾಕ್ಷರ ಜಪಿಸುತಲಿಆರಾಧಿಸುವರ ಇಷ್ಟಾರ್ಥ ಕೊಡುವೆಯೊ ಆದರದಿಂದಲಿ ಅನವರತ 17
ತನ್ನ ದೇಹದಿಂದ ಉತ್ಪನ್ನವಾಗುವ ತನ್ನಿಂದ ತನ್ನ ಬಂಧುಗಳಿಂದಾದಉನ್ನತ ದೋಷಗಳನ್ನು ನಿವರ್ತಿಸಿ ಮುನ್ನ ಕೊಡುವೆ ಸಕಲೇಷ್ಟಗಳ 18
ಸ್ವಾರ್ಥಸಿದ್ಧಿಗೆ ಈ ಸ್ತೋತ್ರ ತ್ರಿಕಾಲದಿ ಪ್ರಾರ್ಥಿಸಲಿಹಪರದಿಷ್ಟಗಳಅರ್ಥಿಯಿಂ ಪಡೆದು ಕೃತಾರ್ಥನಾಗುವ ಯಥಾರ್ಥವು ಇದಕೆ ಸಂದೇಹವಿಲ್ಲ 19
ಈ ಮಹಿಯೊಳಗೆ ಅಗಮ್ಯ ಮಹಿಮೆ ಉದ್ಧಾಮ ಸುಕೀರ್ತಿ ವಿಶಾರದನೇಶ್ರೀ ಮಧ್ವಮತ ದುಗ್ಧಾಬ್ಧಿಗೆ ಚಂದ್ರನೆ ಸ್ವಾಮಿ ನಿರ್ದೋಷ ನೀ ಎನ್ನ ಕಾಯೋ 20
ವೃಂದಾವನ ಪ್ರದಕ್ಷಿಣೆ ಮಾಡಲು ಪೊಂದುವ ಸಕಲ ಯಾತ್ರಾಫಲವವೃಂದಾವನದ ಉದಯಯಿಂದು ಧರಿಸಲು ಸಕಲ ತೀರ್ಥದ ಫಲ ದೊರಕುವುದು 21
ನಮಿಸುವೆ ಸರ್ವಾಭೀಷ್ಟ ಸಿದ್ಧಿಗೆ ನಾನು ವಿಮಲಶಾಸ್ತ್ರಾರ್ಥ e್ಞÁನಗಳುಕ್ರಮದಿ ಲಭಿಸೆ ನಿನ್ನ ನಾಮೋಚ್ಚಾರಣೆ ಅಮಿತ ಹರುಷದಿಂದ ಮಾಡುವೆನು 22
ಪರಿಪರಿ ದುಃಖದಿ ಪರಿಪೂರ್ಣವಾಗಿಹ ಉರುತರ ಗಂಭೀರವಾಗಿರುವ ಅರಿಯಲಸದಳ ಪಾತಾಳವು ಉತ್ತರಿಸಲು ಸಾಧ್ಯವು ಸಮಸಮವಿಲ್ಲದ 23
ನಿರುತ ದೋಷಗಳೆಂಬ ಜಲಪಿಶಾಚಿಗಳಿಂದ ಬೆರೆದರಿಷಡ್ವರ್ಗ ತರಂಗದಿಪರಿಮಿತಿಯಿಲ್ಲದೆ ಭಯಸಮೂಹವೆ ಬಿಳಿ ನೊರೆಯು ವ್ಯಸಲವಗಾಧವಾದ 24
ಎಂದಿಗು ಹಿಂಗದ ವಿಷಜಲವಿರುತಿಹ ಬಂಧಕವಾದ ಸಂಸಾರವೆಂಬಸಿಂಧುವಿನೊಳು ಬಿದ್ದು ಮಗ್ನನಾದೆ ರಾಘವೇಂದ್ರ ಗುರುವೆ ಎನ್ನನುದ್ಧರಿಸೋ 25
ನಿಷ್ಠೆಯಿಂದಲಿ ಸ್ತೋತ್ರ ಮಾಡಲಷ್ಟಾದಶ ಕಷ್ಠಾಂಧ ಮೂಕ ಬಧಿರತ್ವ ಹರಸೃಷ್ಟಿಯೊಳಗೆ ಪೂರ್ಣಾಯು ಸಂಪತ್ತುಯುತ್ಕೃಷ್ಟ ಸುಖಗಳನಿತ್ತು ಸಲಹುವೆಯೋ 26
ಮುದದಿ ಈ ಸ್ತೋತ್ರದಿಂದಭಿಮಂತ್ರಿತವಾದ ಉದಕ ಪ್ರಾಶನದಿಂದ ಉದರದೊಳುಉದುಭಿಸಿದ ಮಹಾರೋಗಗಳೆಲ್ಲವು ಅಧಿಕ ಶೀಘ್ರದಿ ನಾಶವಾಗುವುದು 27
ವೃಂದಾವನದ ಬಳಿ ಸ್ತೋತ್ರ ಪ್ರದಕ್ಷಿಣೆಯಿಂದ ವಂದಿಸಿ ಕುಂಟನಾದವನುಚಂದದಿ ನಡೆಯುವ ಶಕ್ತಿಯ ಕಾಲೊಳು ಪೊಂದುವ ಗುರುವಿನನುಗ್ರಹದಿ 28
ರವಿಶಶಿಗ್ರಹಣ ಪುಷ್ಯಾರ್ಕಾದಿ ದಿನದಲ್ಲಿ ಸ್ತವನವ ನೂರೆಂಟು ಸಲ ಮಾಡಲುತವಕದಿಂದಲಿ ಭೂತ ಪ್ರೇತ ಪಿಶಾಚಿಯು ವಿಧವಿಧ ಬಾಧೆಗಳೆಲ್ಲ ಪರಿಹರವು 29
ವಿಮಲ ಬೃಂದಾವನದೆಡೆಯೊಳು ಸ್ತೋತ್ರದಿ ನಮಿಸುತ್ತ ದೀಪವನಿಡುವವರುಶ್ರಮವಿಲ್ಲದ ಸುe್ಞÁನ ಸತ್ಪುತ್ರರ ಮಮತೆಯಿಂದಲಿ ಹೊಂದಿ ಸುಖಿಸುವರು 30
ಪರವಾದಿಗಳ ದಿಗ್ವಿಜಯ ದಿವ್ಯe್ಞÁನ ಪರಿಪೂರ್ಣ ಭಕ್ತಿಯ ವರ್ಧಿಸುತನಿರುತದಿ ಸಕಲೇಷ್ಟ ದೊರಕಿದ ವಿಷಯದಿ ಬರಿದಾದ ಯೋಚನೆ ಫಲವಿಲ್ಲವು 31
ಚೋರ ಮಹೋರಗ ನೃಪ ನಕ್ರ ವ್ಯಾಘ್ರಾದಿ ಘೋರಭಯವ ಪರಿಹರಿಸುವುದುಧಾರುಣಿಯೊಳಗೀ ಸ್ತೋತ್ರ ಪ್ರಭಾವವೆ ಸಾರುತಲಹುದು ಸಂದೇಹವಿಲ್ಲ 32
ಪರಿಶುದ್ಧ ಭಕ್ತಿಯಿಂ ಗುರುರಾಘವೇಂದ್ರರ ಚರಣ ಸ್ಮರಿಸಿ ಸಂಸ್ತುತಿಸುವರುಅರಿಯರು ಲವಲೇಶ ದುಃಖವ ಸ್ವಪ್ನದಿ ಹರಿಯ ಅನುಗ್ರಹ ಬಲದಿಂದಲಿ 33
ವಸುಧೆಯೊಳಗೆ ಸಕಲೇಷ್ಟ ಸಮೃದ್ಧಿಯು ದಿಶೆ ದಿಶೆಯೊಳು ಕೀರ್ತಿಸಮವಿಲ್ಲದಎಸೆವ ಐಶ್ವರ್ಯವು ದೊರಕಿಪುದಕೆ ಹಯಾಸ್ಯನೆ ಸಾಕ್ಷಿಯಾಗಿರುತಿಹನು 34
ಧರೆಯೊಳಗತಿ ಪೂಜ್ಯ ಗುರುರಾಘವೇಂದ್ರನೆ ನಿರುತವು ಸತ್ಯಧರ್ಮದಿ ರತನೆಸ್ಮರಿಸುವವರಿಗೆ ಸುರತರುವೆ ನಮಿಪರಿಗೆ ಸುರಭಿಯೆನಿಸಿ ನಿತ್ಯ ಪೊರೆಯುವನೆ 35
ಮಂಗಳ ಮಂತ್ರಾಲಯ ಪುರದಧಿಪನೆ ಮಂಗಳ ತುಂಗಾತೀರದೊಳುಹಿಂಗದೆ ವಿವರಿಸಿ ಶ್ರೀರಾಮಚಂದ್ರನೆ ಮಂಗಳ ಮೂರ್ತಿಯ ಪಾಡುವನೇ 36
ಇಂತು ಶ್ರೀ ಗುರುಸ್ತೋತ್ರರಾಯನುಗ್ರಹ ಸಂತತ ಪಡೆದ ಅಪ್ಪಣ್ಣಾಚಾರ್ಯರುಸಂತಸರ ಸುಖಕ್ಕಾಗಿ ರಚಿಸಿದವರ ಮಹಂತೋಪಕ್ಕಾರಕ್ಕನಂತ ನಮೋ 37
ಹರಿವಾಯುಗಳು ಸದಾ ಸ್ಥಿರವಾಗಿದ್ದಿರು-ವಲ್ಲೀಪರಿ ವೈಭವದಿಂದ ಮೆರೆಸುವರೈಶರಣುಪೊಕ್ಕವರನ್ನು ಪೊರೆವ ಸಮರ್ಥರು ಧರೆಯೊಳನ್ಯರು ಯಾರು ಇರುತಿಹರೈ 38
ಕೃತದಲ್ಲಿ ನರಹರಿ ತ್ರೇತೇಲಿ ಶ್ರೀರಾಮ ತೃತೀಯ ಯುಗದಿ ಶ್ರೀಯಾದವಪತಿಯಾನುತಿಸಿ ವ್ಯಾಸರ ಮನೋಗತಪೂರ್ಣ ಬೋಧರ ಮತಸುವರ್ಧನರಾಗಿ ಕಲಿಯುಗದೀ 39
ಹರಿಹರಿಯೆನ್ನಲು ಹರಿವುದು ಭವಬಂಧ ಮರುತನ ಧ್ಯಾನದಿಂದಲಿ ನಾಶನಾವರಗುರುಚರಣ ಸಂಸ್ಮರಣ ಸಂತತ ಇಹಪರಕೆ ಸಕಲ ಸಾಧನವು ಪೂರಣ 40
ಸಾಧಾರಣವಲ್ಲವೀ ಗುರುಗಳ ಸೇವಾ ಸಾಧುಜೀವರಿಗಷ್ಟೆ ಲಭಿಸುವುದುಪಾದಸ್ಮರಣೆಗೈಯದವ ಕಡುಪಾಪಿ ವಿವಾದವೇತಕೆ ಇದು ಹಯವದನ ಸಾಕ್ಷಿ 41
ಸರುವದಾ ಈ ಸ್ತೋತ್ರ ಪಠಿಸಲಾಗದ ಸುಜೀವರು ಓಂ ಶ್ರೀ ರಾಘವೇಂದ್ರಾಯ ನಮಃಗುರುಮಂತ್ರವೆಂದಷ್ಟೇ ಸ್ಥಿರವಾಗಿ ಜಪಿಸಲು ಬರದು ಯಾವ ದೋಷ ಭವದೊಳಗೆ 42
ಆವದಾದರೂ ಏನು ಈ ಮಂತ್ರ ಜಪಿಸುವ ಭಾವ ಬುದ್ಧಿಯು ಮಾತ್ರವುಳ್ಳತನಕಕಾವುದು ಕರುಣದಿ ಸತ್ಯ ಶ್ರೀಹರಿವಾಯು ಈ ವಿವರಣೆಗೆಂದೂ ಚ್ಯುತಿಯಿಲ್ಲವೊ 43
ಮಂಗಳಂ ಶ್ರೀ ತುಂಗಾತೀರದೊಳ್ಮೆರೆಯುವ ಮಂಗಳಂ ವರಮಂತ್ರಾಲಯ ನಿಲಯಾಮಂಗಳಂ ಕಾರ್ಯಗಳ್ಹಿಂಗದೆ ನಡೆಸುವ ಶೃಂಗಾರ ಮಂಗಳ ಮೂರ್ತಿ ಸಿರಿವಿಠ್ಠಲರಾಯಾ 44


ಮರೆಯದಿರೆಲೆ ಮನವಿಲ್ಲಿ mareyadirale manaville

ಮರೆಯದಿರೆಲೆ ಮನವಿಲ್ಲಿ - ಯಮ
ಪುರಿಗೆ ಒಯ್ದು ಬಾಧಿಸುತಿಹರಲ್ಲಿ ಪ.
ಪರನಾರಿಯರ ಸಂಗವಿಲ್ಲಿ - ಉಕ್ಕು
ಎರೆದ ಸತಿಯರ ತಕ್ಕೈಸುವರಿಲ್ಲಿ
ಗುರು - ಹಿರಿಯರ ನಿಂದೆಯಿಲ್ಲಿ - ಬಾಯೊ
ಳೆರದು ಸೀಸವ ಕಾಸಿ ಹೊಯಿಸುವರಿಲ್ಲಿ 1
ಉಂಡ ಮನೆಯ ಕೊಂಬುದಿಲ್ಲಿ - ಎದೆ
ಗುಂಡಿಗೆಯನು ಸೀಳಿ ಕೊಲುತಿಹರಲ್ಲಿ
ಗಂಡನ ದಣಿಸುವುದಿಲ್ಲಿ - ಯಮ
ಕುಂಡದೊಳಗೆ ಹಾಕಿ ಕುದಿಸುವರಲ್ಲಿ 2
ಚಾಡಿಯ ಹೇಳುಸುದಿಲ್ಲಿ - ನುಡಿ
ದಾಡುವ ನಾಲಿಗೆ ಕೇಳುವರಲ್ಲಿ
ಬೇಡಿದರಿಗೆ ಧರ್ಮವಿಲ್ಲಿ - ಇದ
ನೀಡದಿರಲು ಒದ್ದು ನೂಕುವರಲ್ಲಿ 3
ಪುಸಿ - ಠಕ್ಕು - ಠವುಳಿಗಳಲ್ಲಿ - ಕಟ್ಟಿ
ಎಸೆದು ಕೊಲ್ಲುವರೊ ನಿನ್ನವರು ಕೇಳಿಲ್ಲಿ
ಅಶನಪ್ರಭದಿಗಳಲ್ಲಿ - ಮಾಡೆ
ಬಿಸಿಯ ಕೆಂಡವ ತಂದು ತಿನಿಸುವರಲ್ಲಿ 4
ಸಿರಿಮದದೊಳಗಿಹುದಿಲ್ಲಿ - ಸೊಕ್ಕ
ಮುರಿದು ಹಲ್ಲುಗಳ ಕಳಚುವರಲ್ಲಿ
ಪುರಂದರವಿಠಲನ ಇಲ್ಲಿ - ನೆನೆಯ
ಸ್ಥಿರವಾದ ಮುಕುತಿ ಪಡಕೊಂಬುವರಲ್ಲಿ 5

ಮರೆಯದಿರು ಶ್ರೀ ಹರಿಯನು mareyadiru shree hariyanu

ಮರೆಯದಿರು ಶ್ರೀ ಹರಿಯನು ಪ.
ಮರೆಯದಿರು ಶ್ರೀ ಹರಿಯ ಮರಣಾತುರದಿ ಮಗನ
ಕರೆದವಗೆ ಸಾಯುಜ್ಯವಿತ್ತ ನಾರಾಯಣನ
ಸ್ಮರಣೆಯನು ಮಾಡುವರ ಚರಣ ಸೇವಕರಿಂಗೆ
ಪರಮ ಪದವೀವ ಹರಿಯ ಅಪ
ದೇವಕಿಯ ಬಂಧುವನು ಪರಿದವನ ಪೂತನಿಯ
ಜೀವರಸವೀಂಟಿದನ ಮಾವನನು ಮಡುಹಿದನ
ಪಾವನ ತರಂಗಿಣಿಯ ಪದನಖದಿ ಪಡೆದವನ
ಗೋವರ್ಧನೋದ್ಧಾರನ ||
ದಾವಾನಲನ ಪಿಡಿದು ನುಂಗಿದನ ಲೀಲೆಯಲಿ
ಗೋವತ್ಸ ಗೋಪಾಲ ರೂಪವನು ತಾಳ್ದವನ
ದೇವಮುನಿ ಮುಖ್ಯ ಸುರರಾರಾಧಿಸುವನ ಶ್ರೀ ಪಾದವನು
ಭಜಿಸು ಮನವೆ 1
ಕಂಜಸಂಭವಪಿತನ ಕರುಣಾಪಯೋನಿಧಿಯ
ಕುಂಜರನ ನುಡಿ ಕೇಳಿ ಒದಗಿದನ ರಣದೊಳು ಧ-
ನಂಜಯನ ಜೀವವಂ ಕೃಪೆಯಿಂದ ಕಾಯ್ದವನ
ಆಂಜನೇಯನ ನಾಳ್ದನ ||
ರಂಜಿಸುವ ಕೌಸ್ತುಭವಿಭೂಷಣನ ಜಲಧಿಯಲಿ
ನಂಜಿನೊಡೆಯನ ಮೇಲೆ ಮಲಗಿದನ ತಮದೊಳಗೆ ಪ -
ರಂಜ್ಯೋತಿಮಯನಾಗಿ ಬೆಳಗುವನ
ಶ್ರೀ ಚರಣಕಂಜವಂ ಭಜಿಸು ಮನವೆ2
ವಾರಿಧಿಯೊಳಾಡಿದನ ವರಗಿರಿಯ ತಾಳಿದನ
ಧಾರಿಣಿಯ ತಂದವನ ದೈತ್ಯನನು ಕೊಂದವನ
ಮೂರಡಿಯಲಳೆದವನ ಮೊನೆಗೊಡಲಿ ಪಿಡಿದವನ ನೀರಧಿಯ
ಬಂಧಿಸಿದನ||
ದ್ವಾರಕೆಯನಾಳ್ದವನ ತ್ರಿಪುರಗಳ ಜಗುಳ್ದವನ
ಚಾರುಹಯವೇರಿದನ ಸಕಲ ಸುಜನರ ಪೊರೆವ
ಧೀರ ಪುರಂದರವಿಠಲನ ಚರಣಕಮಲವನು
ನಂಬಿ ನೀ ಭಜಿಸು ಮನವೇ 3

ಮರೆತೆಯೇನೋ ರಂಗ marateyeno ranga

ಮರೆತೆಯೇನೋ ರಂಗ-ಮಂಗಳಾಂಗ ಪ
ಕೋಲು ಕೈಯಲಿ ಕೊಳಲು, ಜೋಲುಗಂಬಳಿ ಹೆಗಲ |
ಮೇಲೆ ಕಲ್ಲಿಯ ಚೀಲ ಕಂಕುಳಲಿ ||
ಕಾಲಿಗೆ ಕಡಗವು ಕಾಯುತ ಹಸು ಹಿಂಡ |
ಬಾಲಕರ ಮೇಳದಿ ಇದ್ದೆಯೊ ರಂಗ 1
ಕಲ್ಲುಮಣಿ ಕವಡಿ ಚೆನ್ನೆ ಗುಳ್ಳೆಗುಂಜಿ ಒಡವೆ |
ಎಲ್ಲವು ನಿನ್ನ ಸರ್ವಾಂಗದಲಿ ||
ಅಲ್ಲಲ್ಲಿಗಳವಟ್ಟು ನವಿಲುಗರಿಯ ದಂಡೆ |
ಗೊಲ್ಲ ಮಕ್ಕಳ ಕೂಡೆ ಸಲ್ಲಾಪವಾಡುತೆ 2
ಸಿರಿದೇವಿ ಬಂದು ಸೇರಿದ ಬಳಿಕ ಲೋಕದೊಳಗೆ |
ಸಿರಿಯರಸನೆಂಬುವರು ||
ವರಮುಖ್ಯ ಪ್ರಾಣವಂದಿತ ಉಡುಪಿಯ |
ಸಿರಿ ಪುರಂದರವಿಠಲ ಶ್ರೀ ಕೃಷ್ಣ * 3

ಮರುಳು ಮಾಡಿಕೊಂಡೆಯಲ್ಲೇ maralu madi kondeyallo

ಮರುಳು ಮಾಡಿಕೊಂಡೆಯಲ್ಲೇ - ಮಾಯಾದೇವಿಯೆ ಪ
ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಪ್ಪಂತೆ ಅ.ಪ
ಜ್ಞಾನಿಗಳು ನಿತ್ಯ ಅನ್ನ-ಪಾನದಿಗಳನ್ನು ಬಿಟ್ಟು |
ನಾನಾವಿಧ ತಪವಿದ್ದರು-ಧ್ಯಾನಕೆ ಸಿಲುಕದವನ 1
ಸರ್ವಸಂಗವ ಬಿಟ್ಟು ಸಂ-ನ್ಯಾಸಿಯಾದ ಕಾಲಕು |
ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ 2
ಪ್ರಳಯಕಾಲದಲ್ಲಿ ಆಲ-ದೆಲೆಯ ಮೆಲೆ ಮಲಗಿದ್ದಾಗ |
ಹಲವು ಆಭರಣಂಗಳು-ಜಲವು ಆಗಿ ಜಾಣತನದಿ 3
ರಂಗನು ಭುಲೋಕದಿ-ಭುಜಂಗ ಗಿರಿಯೊಳಾಲ ಮೇಲು |
ಮಂಗಪತಿಯಾಗಿ ನಿನ್ನ-ಅಂಗೀಕರಿಸುವಂತೆ 4
ಮಕ್ಕಳ ಪಡೆದರೆ ನಿನ್ನ-ಚೊಕ್ಕತನವು ಪೋಪುದೆಂದು |
ಪೊಕ್ಕುಳೊಳು ಮಕ್ಕಳ ಪಡೆದು-ಕಕ್ಕುಲಾತಿ ಪಡುವಂತೆ 5
ಎಡಕೆ ಭೂಮಿ ಬಲಕೆ ಶ್ರೀಯು-ಎದುರಿನಲ್ಲಿ ದುರ್ಗಾದೇವಿ |
ತೊಡೆಯ ಮೇಲೆ ಲಕುಮಿಯಾಗಿ- ಬಿಡದೆ ಮುದ್ದಾಡುವಂತೆ 6
ಎಂದೆಂದಿಗೂ ಮರೆಯೆ ನಿನ್ನಾ-ನಂದದಿ ಜನರಿಗೆಲ್ಲ |
ತಂದು ತೋರೇ ಸ್ವಾಧೀನ ಪು-ರಂದರವಿಠಲ ಹರಿಯ 7

ಮರುಳಾಟವೇಕೊ marulaatveki manuja

ಮರುಳಾಟವೇಕೊ - ಮನುಜಾ |
ಮರುಳಾಟವೇಕೊ? ಪ.
ಊಧ್ರ್ವ ಪುಂಢ್ರವಿಲ್ಲದ ಮುಖವ ತಿದ್ದಿ ನೋಡಲೇಕೊ |
ಶುದ್ದ ಸಾತ್ತ್ವಿಕವಿಲ್ಲದನ ಬುಧ್ಧಿ ಏತಕೊ ||
ಕದ್ದು ಹೊಟ್ಟೆಹೊರಕೊಂಬುವಗೆ ಶುದ್ಧ ಶೀಲವೇಕೊ |
ಮಧ್ವಶಾಸ್ತ್ರ ಓದದವನ ವಿದ್ಯೆ ಏತಕೊ - ಮನುಜಾ 1
ಮೃತ್ತಿಕೆ ಶೌಚವಿಲ್ಲದವಗೆ ಮತ್ತೆ ಸ್ನಾನ - ಜಪವೇಕೊ |
ಹಸ್ತಕಟ್ಟಲರಿಯದವಗೆ ಅಗ್ನಿಹೋತ್ರವೇತಕೊ ||
ತೊತ್ತು ಹೋಗುವವಗೆ ಪರತತ್ತ್ವವಿಚಾರವೇಕೋ |
ಕರ್ತೃ ಕೃಷ್ಣನ ನೆನೆಯದವನ ಉತ್ತಮತನವೇಕೊ 2
ಹಸಿವೆ ತೃಷೆಯ ತಾಳದವನ ಹುಸಿಯ ವೈರಾಗ್ಯವೇಕೊ |
ವಿಷಯ ಮೆಚ್ಚಿದವಗೆ ಪರದ ಕುಶಲವೇತಕೊ ||
ಹುಸಿಜಪಗಳ ಮಾಡುವವಗೆ ಮುಸುಕಿನ ಡಂಬಕವೇಕೊ |
ಕುಸುಮನಾಭಗರ್ಪಿಸದ ಅಶನವೇತಕೊ - ಮನುಜಾ 3
ಸೂಳೆಗಾರನಿಗೆ ತುಳಸಿ ಮಾಲೆಯ ಶೃಂಗಾರವೇಕೊ ||
ಶ್ರೀಲೋಲನ ನೆನೆಯದವನ ಬಾಳುವೆಯೇತಕೊ |
ಮೂಲಮಂತ್ರವರಿಯದವಗೆ ಮೇಲೆ ದೇವತಾರ್ಚನೆ ಏಕೊ |
ಸಾಲಗ್ರಾಮದಭಿಷೇಕವಿಲ್ಲದ ತೀರ್ಥವೇತಕೊ ಮನುಜಾ 4
ಕಂಡ ನಾರಿಯೀಕ್ಷಿಸುವ ಲಂಡಗೆ ಪುರಾಣವೇತಕೋ |
ಭಂಡ ಮಾತನಾಡುವನ ಪಾಂಡಿತ್ಯವೇತಕೊ |
ಪುಂಡರೀಕವರದ ಶ್ರೀ ಪುರಂದರವಿಠಲನ |
ಕಂಡು ಭಜಿಸಲರಿಯದವನ ವಿತಂಡ ಬುಧ್ಧಿಯೇತಕೋ 5

ಮರವನು ನುಂಗುವ ಪಕ್ಷಿ maravanu nunguva pakshi

ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಪ.
ಒಂಟಿ ಕೊಂಬಿನ ಪಕ್ಷಿ ಒಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗು ಇಲ್ಲ
ಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ ಭಕ್ಷಿಸುವುದು 1
ನಡುವೆ ತಲಿಯೆಂಬುವದು ನಡು ನೆತ್ತಿಯಲಿ ಬಾಯಿ
ಕಡು ಸ್ವರಗಳಿಂದ ಗಾನ ಮಾಡ್ವದು
ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು
ಬಡತನ ಬಂದರೆ ಬಹಳ ರಕ್ಷಿಪುದು 2
ಕಂಜ ವದನೆಯರ ಕರದಲ್ಲಿ ನಲಿದಾಡುವುದು
ಎಂಜಲನುಣಿಸುವುದು ಮೂರ್ಜಗಕೆ
ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿಪ್ಪ
ಸಂಜೀವ ಪಿತ ಪುರಂದರವಿಠಲನೇ ಬಲ್ಲ * 3

ಮನೆಯೊಳಗಾಡೊ ಗೋವಿಂದ maneyolagado govinda

ಮನೆಯೊಳಗಾಡೊ ಗೋವಿಂದ-ನೆರೆ-|
ಮನೆಗಳಿಗೇಕೆ ಪೋಗುವೆಯೊ ಮುಕುಂದ ಪ
ನೊಸಲಿಗೆ ತಿಲಕವನಿಡುವೆ-ಅಚ್ಚ-|
ಹೊಸಬೆಣೆಯಿಕ್ಕಿ ಕಜ್ಜಾಯವ ಕೊಡುವೆ ||
ಹಸನಾಧಾಭರಣಗಳಿಡುವೆ-ಚಿಕ್ಕ-|
ಹಸುಳೆ ನಿನ್ನನು ನೋಡಿ ಸಂತೋಷಪಡುವೆ 1
ಅಣ್ಣಯ್ಯ ಬಲರಾಮಸಹಿತ-ನೀ-|
ನಿನ್ನೆಲ್ಲಿಯಾದರೂ ಆಡುವುದು ವಿಹಿತ ||
ಹೆಣ್ಣುಗಳೇಕೋ ಸಂಗಾತ-ರಂಗ |
ಬಿನ್ನಪ ಪರಿಪಾಲಿಸೊ ಜಗನ್ನಾಥ 2
ಜಾರನೆನಿಸಿಕೊಳಲೇಕೆ-ರಂಗ-|
ಚೋರನೆನಿಸಿಕೊಂಬ ದೂರು ನಿನಗೇಕೆ ||
ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|
ಪುರಂದರವಿಠಲರಾಯ ಎಚ್ಚರಿಕೆ 3

ಮನುಜ ಶರೀರವಿದೇನು manuja shareervedenu

ಮನುಜ ಶರೀರವಿದೇನು ಸುಖ - ಇದ
ನೆನೆದರೆ ಘೋರವಿದೇನು ಸುಖ ? ಪ.
ಜನನ - ಮರಣ ಮಲಕೂಪದಲ್ಲಿದ್ದು
ಅನುಭವಿಸುವುದು ಇದೇನು ಸುಖ ?
ತನುವಿದ್ದಾಗಲೇ ಹೃದಯದ ಶೌಚದ
ಸ್ತನಗಳನುಂಬುವುದೇನು ಸುಖ ? 1
ದಿನವು ಹಸಿವು ತೃಷೆ ಘನ ರೋಗಂಗಳ
ಅನುಭವಿಸುವುದು ಇದೇನು ಸುಖ
ನೆನೆಯಲು ನಿತ್ಯ ನೀರ್ಗುಳ್ಳೆಯಂತಿಪ್ಪ
ತನುಮಲಭಾಂಡವಿದೇನು ಸುಖ ? 2
ಪರಿಪರಿ ವಿಧದಲಿ ಪಾಪವ ಗಳಿಸುತ
ನರಕಕೆ ಬೀಳುವುದೇನು ಸುಖ ?
ಪುರಂದರವಿಠಲನ ಮನದಿ ನೆನೆದು ಸ ದ್ಧರುಮದೊಳ್ ನಡೆದರೆ ಆಗ ಸುಖ 3

ಮನಸು ನಿನ್ನ ಮೇಲೆ manasu ninna mele

ಮನಸು ನಿನ್ನ ಮೇಲೆ ಬಹಳ-ಕಾಲ |
ಅನುಕೂಲಿಸದೊ ಗೋಪಾಲ ಪ
ನಿನ ಕೂಡೆ ಈಗ ಕೂಡುವೆನೆಂದರೆ ಮನೆ-|
ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪ
ಗಂಡನೆಂಬವನು ಉದ್ದಂಡ-ಎನ್ನ |
ಕಂಡರೆ ಸೇರನು ಭಾವ ಪ್ರಚಂಡ ||
ಭಂಡೆ ಅತ್ತೆಯು ಲಂಡೆ ಅತ್ತಿಗೆ ಕೇಳೊ |
ಕಂಡರಿಬ್ಬರನು ದಂಡಿಸುವರೊ ರಂಗ 1
ನೆರೆಹೊರೆಯವರೆನ್ನನೆಲ್ಲ-ಮೈಯ |
ನೆರಳ ಕಂಡರೆ ಸೇರರಲ್ಲ ||
ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |
ಮರೆಮಾತನಾಡಲು ವೇಳೆ ಕೂಡದೊ ರಂಗ 2
ಮದುವೆ ಮಾಡುವರೊ ಮನೆಯೊಳು-ನಾಳೆ |
ಅದರ ಸಂದಣಿಯ ಹೊಂಚಿನೊಳು ||
ಮುದದಿಂದ ಕೂಡುವೆನಾವ ಪರಿಯೊಳು |
ಮದನ ತಂತ್ರದಿಂದ ಪುರಂದರವಿಠಲ 3

ಮನಸಿಟ್ಟು ಭ್ರಮಿಸುವರೇನೆ manasittu bhramisuvarenu

ಮನಸಿಟ್ಟು ಭ್ರಮಿಸುವರೇನೆ - ಘನ - |
ಗುಣವಂತನೇನವ ಜಾಣೆ ? ಪ
ಅನುದಿನ ಗೊಲ್ಲಪಳ್ಳಿಗೆ ಕಳ್ಳನೆನಿಸಿದ |
ದನಗಾಹಿ ನಿನಗೇನ ಮರುಳು ಮಾಡಿದನೆ ? ಅ.ಪ
ಜಲವಾಸಿ ಮುಖವೊಳಸೆಳೆವ - ಇವ |
ನೆಲವ ಕೆದರಿ ಕಂಬದಿ ಬಾಯ್ ತೆಗೆವ ||
ಇಳೆಯನಳೆದ ಕೊರಳಗೊಯ್ಕ ವನವಾಸಿಯ |
ಕೊಳಲಪಿಡಿದ ಕುರುಬಲವನಳಿದಾತಗೆ 1
ಅಂದು ಮಧುರೆಯಲಿ ಪುಟ್ಟಿದನ - ಆ |
ನಂದಗೋಪ - ಯಶೋದೆ ಕೋಮಲನ ||
ಕಂದನಾಗಿ ಮೊಲೆಯುಂಡು ಪೂತನಿಯನು |
ಕೊಂದು ಕಂಸರ ಪುರ ತಂದೆಗಿತ್ತವಗೆ 2
ಬತ್ತಲಿರುವ ಶ್ರೀನಿರ್ವಾಣಿ - ತೇಜಿ - |
ಹತ್ತಿ ಪಿಡಿದ ಖಡ್ಗ ಪಾಣಿ ||
ಮತ್ತರನೆಲ್ಲರ ಮರ್ದಿಸಿ ಬಲವಂತ |
ಪಾರ್ಥಗೊಲಿದ ಶ್ರೀ ಪುರಂದರವಿಠಲಗೆ 3

ಮನವೆನ್ನ ಮಾತ ಕೇಳದು manavenna maatu keladu

ಮನವೆನ್ನ ಮಾತ ಕೇಳದು - ಮಂದe್ಞÁನದಿ |
ತನುವಿನಾಸೆಯ ಬಿಡಲೊಲ್ಲದು ಪ
ವನಜನಾಭನೆ ನಿನ್ನ ನಾಮ ಸಾಸಿರವ |
ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪ
ದೇಹ ಸಂಬಂಧಿಗಳಾದವರೈವರು |
ಮೋಹಪಾಶದಿ ಕಟ್ಟಿ ಬಿಗಿದಿಹರೈ ||
ಕಾಯ ಅನಿತ್ಯವೆಂಬುದನರಿಯದೆ |
ಮಾಯಾ ಪ್ರಪಂಚದಿಂದಲಿ ಬದ್ಧನಾಗಿಹೆ 1
ಸಾಧುಸಜ್ಜನರ ಸಂಗವ ಮಾಡಿ ಪರಗತಿ-|
ಗಾಧಾರವನು ಮಾಡಲೊಲ್ಲದಯ್ಯ ||
ಕ್ರೋಧ ಕುಹಕ ದುಷ್ಟರೊಡನಾಡಿ ಕಾಲನ |
ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2
ಮದಗಜ ಮೈಯ ಮರೆತು ಮುಂದುಗಾಣದೆ |
ಕದುವಿನೊಳಗೆ ಬಿದ್ದಂತಾದೆನಯ್ಯ ||
ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |
ಪದುಮಾಕ್ಷ ವರದ ಶ್ರೀ ಪುರಂದರ ವಿಠಲ 3

ಮನವೆ ಚಂಚಲ ಮತಿಯ ಬಿಡು manava chanchala matiya

ಮನವೆ ಚಂಚಲ ಮತಿಯ ಬಿಡು - ನಮ್ಮ |
ವನಜನಾಭನ ಪಾದಭಜನೆಯ ಮಾಡು ಪ.
ಬಡಮನುಜಗೆ ಬಾಯಬಿಡುವ ದೈನ್ಯದಲವನ |
ಅಡಿಗಳಿಗೆರಗಲು ಕೊಡುವನೇನೊ ||
ಕಡಲಶಯನ ಜಗದೊಡೆಯನ ನೆನೆಯಕ್ಕೆ - |
ಪಿಡಿದು ತಾ ಸಲಹುವ ಬಿಡದಲೆ ಅನುಗಾಲ 1
ಬಲ್ಲಿದ ಭಕುತರ ಬಲ್ಲವ ಬಹುಸಿರಿ |
ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||
ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗು
ನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2
ಮುಗಿಲು ಮೇಲದೆಗಡೆ ಅಗಣಿತವಾದಾಪ - |
ತ್ತುಗಳು ಬಂದಡರಲು ನಗುತಲಿರು ||
ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |
ಪೊಗಳುತ ಬಾಳು ನೀ ಅಘಗಳ ಗಣಿಸದೆ 3
ಆವಾವ ಕಾಲಕೆ ದೇವನಿಚ್ಛೆಯಿಂದ |
ಆವಾವುದು ಬರೆ ನಿಜಸುಖವೆನ್ನು ||
ಶ್ರೀವರ ಅನಾದಿಜೀವರ ಕ್ಲಪ್ತದಂತೆ |
ಈವನು ನಿಜಸ್ವಭಾವ ಬಿಡದೆ ನಿತ್ಯ 4
ಕೇಶವಾಚ್ಯುತ ಶ್ರೀನಿವಾಸ ಮುರಾರೇ |
ದೋಷರಹಿತ ದೀನ ಪೋಷಕನೆನ್ನು ||
ಮೋಸಗೊಳಿಪ ಭವಪಾಶವ ಖಂಡಿಪ |
ಶ್ರೀಶ ಪುರಂದರವಿಠಲನು ಜಗಕಿರೆ 5