Labels

Monday 30 December 2019

ಮಡಿ ಮಡಿ ಮಡಿಯೆಂದು madi madi madiyendu

ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |
ಮಡಿ ಮಾಡುವ ಬಗೆ ಬೇರುಂಟು ಪ.
ಪೊಡವಿ ಪಾಲಕನ ಧ್ಯಾನ ಮಾಡುವುದು |
ಬಿಡದೆ ಭಜಿಸುಮದು ಅದು ಮಡಿಯಾ ಅಪ
ಬಟ್ಟೆಯ ನೀರೊಳಗಿಟ್ಟು ಒಣಗಿಸಿ |
ಉಟ್ಟರೆ ಅದು ತಾ ಮಡಿಯಲ್ಲ ||
ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |
ಬಿಟ್ಟರೆ ಅದು ತಾ ಮಡಿಯೊ 1
ಪರಧನ ಪರಸತಿ ಪರನಿಂದೆಗಳನು |
ಜರೆದಹಂಕಾರಗಳನೆ ತೊರೆದು ||
ಹರಿಹರಿಯೆಂದು ದೃಢದಿ ಮನದಲಿ
ಇರುಳು ಹಗಲು ಸ್ಮರಿಸಲು ಮಡಿಯೋ 2
ಎಚ್ಚರವಿಲ್ಲದೆ ಮಲ ಮೂತ್ರ ದೇಹವ |
ನೆಚ್ಚಿ ಕೆಡಲು ಬೇಡಲೊ ಮನವೆ ||
ಅಚ್ಚುತಾನಂತನ ನಾಮವ ಮನಗೊಂಡು |
ಸಚ್ಚಿಂತೆಯಲಿರುವುದೆ ಮಡಿಯೊ 3
ಭೂಸುರರು ಮಧ್ಯಾಹ್ನಕಾಲದಲಿ |
ಹಸಿದು ಬಳಲಿ ಬಂದರೆ ಮನೆಗೆ ||
ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |
ಹಸನಾಗಿ ಉಂಬುವುದು ಅದು ಮಡಿಯೊ ? 4
ದಶಮಿ - ದ್ವಾದಶಿಯ ಪುಣ್ಯಕಾಲದಲಿ |
ವಸುದೇವ ಸುತನ ಪೂಜಿಸದೆ ||
ದೋಷಕಂಜದೆ ಪರರನ್ನು ಭುಜಿಸಿ ಯಮ - |
ಪಾಶಕೆ ಬೀಳ್ವುದು ಹುಸಿಮಡಿಯೊ ? 5
ಸ್ನಾನ - ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |
ಜ್ಞಾನ - ಮಾನ - ಸುಮ್ಮಾನದಿಂದ ||
ದೀನವಂದ್ಯನ ಸುಜನ ಸಂತರ್ಪಣ |
ಅನುದಿನ ಮಾಡುವುದು ಘನಮಡಿಯೊ 6
ಗುರು ಹಿರಿಯರ ಹರಿದಾಸರ ನೆನೆದು |
ಚರಣಕೆರಗಿ ಭಯ ಭಕ್ತಿಯಿಂದ ||
ಪರಿಪರಿ ವಿಧದಲಿ ಪುರಂದರವಿಠಲನ |
ನೆರನೆಂಬುವುದು ಉತ್ತಮ ಮಡಿಯೊ 7

No comments:

Post a Comment