ಹಂಚಿನ ಇದಿರಲಿ ಹಲ್ಲನು ತೆಗೆಯಲು
ಮಿಂಚುವ ಕನ್ನಡಿಯಾದೀತೆ ? ಪ.
ಮಿಂಚಿನ ಬೆಳಕಲಿ ದಾರಿಯ ನಡೆದರೆ
ಮುಂಚುವ ಊರಿಗೆ ಮುಟ್ಟೀತೆ ? ಅಪ
ಬಾಲರ ಭಾಷೆಯ ನಂಬಿ ನಡೆದರೆ
ಶೀಲದ ಕೆಲಸಗಳಾದೀತೆ ?
ಜೋಲುವ ಹೋತಿನ ಮೊಲೆಗಳ ಹಿಂಡಲು
ಹಾಲಿನ ಹನಿಯದು ಹೊರಟೀತೆ ?
ಕಾಲುವೆ ಬಚ್ಚಲಕುಣಿ ನೀರಿಗೆ - ಘನ
ಬಾಳೆಯ ತೋಟವು ಆದೀತೆ ?
ಮೇಲುಬಣ್ಣಾದಾ ಆಲದ ಹಣ್ಣು
ನಾಲಿಗೆಸವಿಯನು ಕೊಟ್ಟೀತೆ ? 1
ಭಾಷೆಯ ನುಡಿಗಳಿಗಾಸೆ ಮಾಡೆ ಮನ
ದಾಸೆಯ ಕಾರ್ಯಗಳಾದೀತೆ ?
ದೋಸೆಯ ಛಿದ್ರದಿ ಆರಿಸೆ ಕಾಳಿನ
ರಾಶಿಯು ಹಸನವು ಆದೀತೆ ?
ಕಾಸಿ ಕಬ್ಬಿಣವ ಗಟ್ಟಿ ಕೂಡಿಟ್ಟರೆ
ಮಾಸದ ಮನೆ ಬದುಕಾದೀತೆ ?
ಕಾಸಾರದೆದುರಿಗೆ ಹರಿಕಥೆ ಹೇಳ್ದರೆ
ಸೋಸಿ ಕೇಳ್ದು ತಲೆದೂಗೀತೆ ? 2
ಮಿಥ್ಯಾವಚನಿಯ ಮಾತನು ನಂಬಲು
ಹೊತ್ತಿಗೆ ಅದು ಬಂದೊದಗೀತೆ ?
ಸತ್ತವನೆದುರಿಗೆ ಸುತ್ತಲು ಕುಳಿತು
ಅತ್ತರೆ ಆ ಹೆಣ ಕೇಳೀತೆ ?
ನಿತ್ಯನಪುಂಸಕನೈದಲು ತರುಣಿಗೆ
ಚಿತ್ತ ಸುಖವು ಸೂರಾದೀತೆ ?
ಕುತ್ತಿಗೆಗೊಯ್ಕನ ಕಾಲು ಹಿಡಿದರೆ
ಹತ್ಯದೊಳ್ ಹೇಸಿಕೆ ಹುಟ್ಟೀತೆ ?3
ಬೋರಗಲ್ಲಿನ ಮುಂದೆ ಬಡತನ ಹೇಳಲು
ಸಾರಸುಖಕ್ಕನುವಾದೀತೆ ?
ಚೋರನು ಚಂದ್ರಗೆ ಕೈಮರೆ ಮಾಡಲು
ಚೌರ್ಯಕೆ ಕತ್ತಲು ಒದಗೀತೆ ?
ನೀರಿಲ್ಲದ ಕೆರೆಯೊಳಗೆ ಮತ್ಸ್ಯದಾ
ಹಾರಿಗೆ ಮೀನವು ದೊರಕೀತೆ
ಕಾರಣವಿಲ್ಲದ ಲೌಕಿಕ ಕಥೆಯಿಂ
ಘೋರ ನರಕ ಭಯ ತಪ್ಪೀತೆ ?4
ಬೆಟ್ಟಕೆ ಕಲ್ಲನು ಹೊತ್ತೊಯ್ದೊಗೆಯಲು
ಹೊಟ್ಟೆಗೆ ಓದನ ಸಿಕ್ಕಿತೆ ?
ಹುಟ್ಟು ಬಂಜೆಗೆ ಹಡೆಯುವ ವ್ಯಥೆ ಹೇಳಲು
ಹೊಟ್ಟೆಯಲಿ ಕಳವಳ ಹುಟ್ಟೀತೆ ?
ಕೆಟ್ಟ ಬಯಸುವರಿಗೆ ಮೃಷ್ಟಾನ್ನವುಣಿಸಲು
ಕೆಟ್ಟ ಮಾತು ಅದು ಬಿಟ್ಟೀತೆ?
ದಿಟ್ಟ ಪುರಂದರವಿಠಲರಾಯನ
ಬಿಟ್ಟರೆ ಸದ್ಗತಿಯಾದೀತೆ? 5
No comments:
Post a Comment