ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪ
ಕಂಜಹರನ ಪಿತನ ಪಾದ |ಕಂಜ ನಿರತ ಭಜಿಸುತಿರಲು ||ಅ.ಪ||
ಎರಡು ಒಂದು ಕೋಟಿ ರೂಪ |ಧರಿಸಿ ರಕ್ಕಸರೊಳು ಕಾದಿ ||ಹರಿಯ ಕರುಣ ಗಳಿಸಿದವನ |ಚರಿತೆಗಳನು ಸ್ಮರಿಸುತಿರಲು 1
ತಾಸಿಗೆಂಟು ಒಂದು ನೂರು |ಶ್ವಾಸ ಜಪವ ಮಾಡಿ ಜಂತು ||ರಾಶಿಗಳಿಗೆ ಸತತ ಬೇಡಿ |ದಾಸೆ ಪೂರ್ತಿಸುವವನಿರಲು2
ಜಂಗಮರಿಗೆ ಪಾಣಿ ಚರಣ |ಕಂಗಳು ಕಿವಿಯಾಡಿಸುತಲಿ ||ಪಿಂಗಳನಿಭ ಭಾರತೀಶ |ಹಿಂಗದನವರತ ಪೊರೆಯಲು 3
ಪರಿಹರಿಸುತಲಗ್ನಿ ಭಯವ |ತ್ವರದಿ ಹಿಡಿಂಬ ಕೀಚಕ ಪ್ರಮು |ಖರನು ಕುರುಪತಿಯ ಕುಲವ ತರಿದ ಕುಂತೀ ಕುವರನಿರಲು 4
ಭುಜಕೆ ಗೋಪೀಚಂದನವನು |ವಿಜಯ ಚಕ್ರಗಳನು ಧರಿಸಿ ||ಕುಜನ ರಿಪು ಪ್ರಾಣೇಶ ವಿಠಲ |ಭಜಕನ ದಯ ಪೂರ್ಣವಿರಲು 5
No comments:
Post a Comment