ಸುಮ್ಮನಿರು ಬೇಡಿಕೊಂಬೆ ಕಾಡದಿರು ಕೃಷ್ಣ |
ಉಮಾಪತಿಯೆಂಬ ಗುಮ್ಮ ಬಂದಿದೆಕೊ ಪ
ಐದು ಮುಖ ಐದು ಈರೈದು ಕಣ್ಣುಗಳಿಂದ |
ಐದು ಪಣೆಯೊಳಗಗ್ನಿ ಕಿಡಿಯುದುರುತ ||
ಐದೆರಡು ತೋಳು ಭುಜಗಳ ಒಲೆದಾಡಿಸುತ |
ಐದು ಬಾಣಗೆ ಮುನಿದ ಗುಮ್ಮ ಬಂದಿದೆಕೊ 1
ಬಾಲಚಂದ್ರನ ಪೊತ್ತುಕೊಂಡು ತ್ರಿಶೂಲದಿ |
ಮೇಲೆ ಒರಲುವ ಭೂತಗಣ ಸಹಿತದಿ ||
ಕಾಲಭೈರವನ ಕಾವಲಿಗಿರಿಸಿ ಮರುಳ್ಗಳ |
ಸಾಲುಸಹಿತನಾಗಿ ಬಾಗಿಲಿಗೆ ಬಂದಿದೆಕೊ 2
ಲಂಡದಾನವರ ಶಿರಗಳ ತರೆದು ಬಿರುದಿನ |
ರುಂಡಮಾಲೆಯ ಧರಿಸಿ ಆರ್ಭಟಿಸುತ ||
ಅಂಡಲೆದು ಅಷ್ಟದಿಕ್ಕುಗಳೆಲ್ಲ ಬೆದರಿಸುತ |
ಪುಂಡರೀಕಾಕ್ಷನ ತೋರು ತೋರೆನುತ3
ಕರಿಚರ್ಮವ ಪೊದ್ದು ಕರದಿ ಒಡನೆ ಪಿಡಿದು |
ಕರಿಜಡೆಗಳನೆಲ್ಲ ಕೆದರಿಕೊಳುತ ||
ಹರಿವ ನೀರನು ನೆತ್ತಿಯೊಳು ಹೊತ್ತು ಹಾವುಗಳಾ-|
ಭರಣ ಸಹಿತಾಗಿ ಬಾಗಿಲಿಗೆ ಬಂದಿದೆಕೊ 4
ಮುದಿಯೆತ್ತನೇರಿ ಮೈಯೆಲ್ಲ ಬೂದಿಯ ಪೂಸಿ |
ಮದನಾರಿಯೆಂಬಂಥ ಬಲಭೂತವು ||
ಹೃದಯದಲಿ ನಿನ್ನ ನೋಳ್ಪೆನೆಂಬ ಧ್ಯಾನದಲಿ |
ಒದಗಿ ಬಂದಿಹನಿದೊ ಪುರಂದರವಿಠಲ 5
No comments:
Post a Comment