ಸುಣ್ಣವಿಲ್ಲ ಭಾಗವತರೆ |
ನುಣ್ಣನೆಯ ಗೋಡೆಗೆ ನಿನ್ನ ತೊಡೆದು ಬಿಟ್ಟೆ......... ಪ.
ವೀಳೆಯ ಹಾಕುವನಲ್ಲ ವ್ಯಾದಿಷ್ಠ ನನಗಂಡ ||
ಬಾಳುಗೇಡಿ ಎನ್ನ ಬಾಯನೋಡಿ ||
ಹಾಳಾದ ಮನೆ ಹೊಕ್ಕು ಗೋಳುಗರಿಯತ್ತೇನೆ |
ಕೇಳಿದ ಬಳಿಕಿನ್ನು ಹೇಳದೆ ಫಲವೇನು.........1
ಮದ್ದು ಮದ್ದು ತಿಂದು ಮನೆಯೆಲ್ಲ ಬರಿದಾಯ್ತು |
ಹೊದ್ದಿತು ಮೂದೇವಿ ಮೈದುನಗೆ ||
ಬದ್ಧತನದಿ ಸಂಜೆಭಂಗಿ ಮುಕ್ಕುವ ಭಾವ |
ಒದ್ದು ಕೊಳ್ಳುತಾನೆ ಒಳಗೆ ಕದವನಿಕ್ಕಿ 2
ಅನ್ನೆಕಾರಿ ಅತ್ತೆ ತೊನ್ನು ಬಡಕ ಮಾವ |
ಗನ್ನ ಘಾತಕಿರಂಡೆ ಅತ್ತಿಗೆ ಮುಂಡೆ ||
ಎನ್ನ ಗೋಳು ತಾಗಿ ಎಂದಿಗೆ ಹೋದಾರು |
ಪನ್ನಗಶಯನ ಶ್ರೀ ಪುರಂದರವಿಠಲ 3
No comments:
Post a Comment