ಸುಮ್ಮನೆ ಕಾಲವ ಕಳೆವರೆ - ಯಮ - |
ಧರ್ಮರಾಯನ ದೂತರೆಳೆಯರೆ ಪ.
ನರಿ - ನಾಯಿ ಜನುಮವು ಬಾರದೆ - ಹಾಗೆ - |
ನರಜನ್ಮದಲಿ ಬಂದು ಸೇರದೆ ||
ಹರಿಯ ಸ್ಮರಣೆ ಮಾಡಲಾರದೆ - ಸುಮ್ಮ |
ನಿರಲು ಪಾಪದ ವಿಷವೇರದೆ 1
ಬಾಲನಾಗಿದ್ದಾಗ ಬಹುಲೀಲೆ - ಮುಂದೆ |
ಲೋಲನಾಗಿ ಬಾಳಿದ ಮೇಲೆ ||
ಮೂಳ ವೃದ್ಧಾಪ್ಯ ಬಂತಾಮೇಲೆ - ಇನ್ನು - |
ಬಾಳುವುದೆಲ್ಲ ನೂಲಮಾಲೆ 2
ಮಡದಿ - ಮಕ್ಕಳ ಕೂಡಣ ಬಾಳು - ತನ್ನ |
ಒಡಲಿಗಾಗೆ ತಾನು ಕರವಾಳು ||
ಬಿಡದೆ ಸಂಕೀರ್ತನೆ ಮಾಡೇಳು - ಮಿಕ್ಕ - |
ನುಡಿದ ನುಡಿಗಳೆಲ್ಲವು ಬೀಳು 3
ಮನೆಮನೆ ವಾರ್ತೆಯು ಸ್ಥಿರವಲ್ಲ - ಈ |
ಮನುಜರ ಮಾತೇನು ಘನವಲ್ಲ ||
ವನಜಸಂಭವಗೂ ನಿಶ್ಚಯವಿಲ್ಲ - ಮುಂದೆ |
ಹನುಮಂತ ಪಟ್ಟಕೆ ಬಹನಲ್ಲ 4
ಇಂದಿನ ಹಮ್ಮು ನಾಳೆಗೆ ಇಲ್ಲ - ಭವ |
ಬಂಧನದೊಳು ಸಿಕ್ಕಿ ನರಳಿದೆನಲ್ಲ ||
ಮುಂದನರಿತು ನಡೆದುದಿಲ್ಲ - ಮೃತ್ಯು |
ಬಂದಾಗ ಬಿಡಿಸಿಕೊಳ್ಳುವರಿಲ್ಲ 5
ಮರಣವು ಆವಾಗ ಬರುವುದೋ - ತನ್ನ |
ಶರೀರವು ಆವಾಗ ಮುರಿವುದೊ ||
ಕರಣಂಗಳೆಲ್ಲವು ಜರಿವುದೊ - ತನ್ನ |
ಗರುವದುಬ್ಬಸವೆಲ್ಲ ಮುರಿವುದೊ 6
ಮರಣಕಾಲಕೆ ಅಜಮಿಳನಾಗ - ತನ್ನ |
ತರಳನನಾರಗನೆಂದು ಕರೆದಾಗ ||
ಕರುಣದಿ ವೈಕುಂಠ ಪದವೀಗ - ನಿತ್ಯ - |
ಪುರಂದರವಿಠಲನ ನೆನೆ ಬೇಗ 7
No comments:
Post a Comment