ಹಂಚು ಬಲ್ಲುದೆ ಹಲ್ಲ ತೆಗೆದರಪಕಾರವನು
ಮಿಂಚುಳ್ಳ ಕಂಚು - ಕನ್ನಡಿಯಲ್ಲದೆ ಪ.
ಕಳ್ಳ ಬಲ್ಲನೆ ತನ್ನ ಕರುಣದುಪಕಾರವನು ?
ಕೊಳ್ಳಿ ಬಲ್ಲುದೆ ತನ್ನ ಮನೆಯೆಂಬುದ ?
ಸುಳ್ಳಿ ಬಲ್ಲನೆ ಗ್ರಾಮದೊಳಗಣಾ ಸುದ್ದಿಯನು ?
ಬಳ್ಳಿಬಲೆ ಬಲ್ಲುದೇ ತನ್ನ ವನವೆಂಬುದನು ? 1
ಬಾಳಬಲ್ಲುದೆ ತಾನು ಮೇಲೊಗೆವ ಫಲಗಳನು ?
ಸೂಳೆ ಬಲ್ಲುಳೆ ಮನೆಯ ಬಡತನಗಳ ?
ಖೂಳ ಬಲ್ಲನೆ ಜಾಣರೊಳಗೊಂದು ಸವಿನುಡಿಯ ?
ಕೇಳಬಲ್ಲನೆ ಕಿವುಡ ಏಕಾಂತವ ? 2
ಯೋಗಿ ಬಲ್ಲನೆ ಭೋಗದೊಳಗಣಾ ಸುದ್ದಿಯನು ?
ಭೋಗಿ ಬಲ್ಲನೆ ಕೆಲಸ - ಉದ್ಯೋಗವ ?
ಕಾಗೆಬಲ್ಲುದೆ ಕೋಗಿಲಂತೆ ಸ್ವರಗೈವುದನು ?
ಗೂಗೆ ಬಲ್ಲುದೆ ಹಗಲ ಹರಿದಾಟವ ? 3
ಕೋಣ ಬಲ್ಲುದೆ ಕುದುರೆಯಂತೆ ವೈಹಾಳಿಯನು ?
ಕಾಣಬಲ್ಲನೆ ಕುರುಡ ಕನ್ನಡಿಯನು ?
ದೀನವತ್ಸಲ ನಮ್ಮ ಪುರಂದರವಿಠಲನನು
ಕಾಣಬಲ್ಲನೆ ಜ್ಞಾನವಿಲ್ಲದವನು ? 4
No comments:
Post a Comment