Labels

Thursday, 19 December 2019

ಸಾಕು ಸಾಕಿನ್ನು ಸಂಸಾರಸುಖವು saaku sakinnu sansara sukhavu

ಸಾಕು ಸಾಕಿನ್ನು ಸಂಸಾರಸುಖವು |
ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆ ಪ
ಉದಿಸಿದುವು ಪಂಚಭೂತಗಳಿಂದ ಔಷಧಿಗ-|
ಳುದಿಸಿದುವು ಔಷಧಿಗಳಿಂದನ್ನವು ||
ಉದಿಸಿದುವು ಅನ್ನದಿಂ ಶುಕ್ಲ-ಶೋಣಿತವೆರಡು |
ಉದಿಸಿದುವು ಸ್ತ್ರೀ-ಪುರುಷರಲ್ಲಿ ಹರಿಯೆ 1
ಸತಿಪುರುಷರೊಂದಾಗಿ ರತಿಕ್ರೀಡೆಗಳ ಮಾಡೆ |
ಪತನವಾದಿಂದ್ರಿಯವು ಹೊಲೆ-ರುಧಿರವು ||
ಸುದತಿಯುದರದೊಳೆರಡು ಏಕದಲಿ ಸಂಧಿಸಲು |
ಬುದಬುದನೆ ಮಾಸಪರ್ಯಂತರದಿ ಹರಿಯೆ 2
ಮಾಸವೆರಡರಲಿ ಶಿರ ಮಾಸ ಮೂರರಲಂಗ |
ಮಾಸ ನಾಲ್ಕರಲಿ ಚರ್ಮದ ಹೊದಿಕೆಯು ||
ಮಾಸವೈದರೊಳು ನಖ ರೋಮ ನವ ರಂಧ್ರಗಳು |
ಮಾಸವೇಳಲಿ ಧಾತು ಹಸಿವು ತೃಷೆಯು 3
ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳ |
ಭಂಗವನು ಪಡಲಾರೆ ಭವಭವದೊಳು ||
ಅಂಗನೆಯ ಉದರಕಿನ್ನೆಂದಿಗೂ ಬರೆನೆಂದು |
ಹಿಂಗದಲೆ ಧ್ಯಾನಿಸುತ ಕಳೆದೆನೈ ದಿನವ 4
ಇನಿತು ಗರ್ಭದೊಳು ನವಮಾಸ ಪರಿಯಂತರದಿ |
ತನು ಸಿಲುಕಿ ನರಕದಲಿ ಆಯಾಸಗೊಂಡು ||
ಘನಮರುತವೇಗದಿಂ ಅರುಹನಲ್ಲಿಯೆ ಮರೆತು
ಜನಿಸುವಲಿ ಮೃತಭಾವದೊಳು ನೊಂದೆ ಹರಿಯೆ 5
ಧರೆಯಮೇಲುದಿಸಿ ಬಹು ವಿಷ್ಣುಮಾಯೆಗೆ ಸಿಲುಕಿ |
ಪರವಶದೊಳಿರಲು ನೀರಡಿಸಲಾಗ ||
ಹೊರಳಿ ಗೋಳಿಡುತ ಕಣ್ದೆರೆಯ ಹರಿಯನು ಮರೆವ |
ದುರಿತರೂಪದ ತನುವ ಧರಿಸಿದೆನೊ ಹರಿಯೆ 6
ಶಿಶುತನದೊಳಿರಲು ನೊಣ ಮುಸುಕಲಂದದಕಳಲು |
ಹಸಿದನಿವನೆಂದು ಹಾಲನೆ ಎರೆವರು ||
ಹಸು-ತೃಕ್ಷೆಗಳಿಂದಳಲು ಹಾಡಿ ತೂಗುವರಾಗ |
ಪಶುವಂತೆ ಶಿಶುತನದೊಳಿರಲಾರೆ ಹರಿಯೆ7
ನಡೆಯಲರಿಯದ ದುಃಖ ಮನಸಿನೊಳು ಬಯಸಿದುದ |
ನುಡಿಯಲರಿಯದ ದುಃಖ ವಿಷಮದಿಂದ ||
ಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲು-|
ನುಡಿಯೊಳಿಹ ಬಾಲ್ಯದೊಳಗಿಲಾರೆ ಹರಿಯೆ8
ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತು |
ಗೋಳಿಡುತ ವಿದ್ಯೆ ಕರ್ಮಗಳ ಕಲಿತು ||
ಮೇಲೆ ಯೌವನದುಬ್ಬಿನೊಳು ಮದುವೆಯಾಗಿ ನಾ
ಬಾಲೆಯರ ಬಯಸಿ ಬಹು ಮರಳಾದೆ ಹರಿಯೆ |9
ಜ್ವರದ ಮೇಲತಿಸಾರ ಬಂದಂತೆ ಯೌವನದಿ |
ತರುಣಿಯೊಡನಾಡಿ ಕೂಡಿದ ವಿಷಯದಿ ||
ತರುಣಿ-ಸುತರ್ಗನ್ನ ವಸ್ತ್ರಾಭರಣವೆಂದೆನುತ |
ಪರರ ಸೇವೆಯಲಿ ನಾ ಕಡುನೊಂದೆ ಹರಿಯೆ 10
ನೆತ್ತರವು ತೊಗಲು ಮಾಂಸದ ಹುತ್ತು ಜೊತ್ತುಗಳ |
ಹತ್ತು ಇಂದ್ರಿಯದ ಬಹುರೋಗದಿಂದ ||
ಮತ್ತೆ ಕಾಲನ ಬಾಯತುತ್ತು ಬಹುವಿಧ ಕರ್ಮ-||
ಕತ್ತಲೆಯೊಳೀ ದೇಹ ಕರಕಾಯ್ತು ಹರಿಯೆ 11
ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರು |
ಕಟ್ಟಿ ಕಾದಿಹರು ಮುಪ್ಪಡಸಲಾಗ ||
ತಟ್ಟನೇ ಕೆಟ್ಟನುಡಿಗಳ ಬಯ್ಯುತಳಲುವರು |
ಮುಟ್ಟಿನೋಡರು ಸರಕುಮಾಡರೈ ಹರಿಯೆ 12
ಎಷ್ಟವಜ್ಞೆಯ ಮಾಡೆ ಮತ್ತವನಿಗಳಲುತಿರೆ |
ಕಟ್ಟಳೆಯ ದಿನ ತುಂಬಿ ಮೃತನಾಗಲು ||
ಕುಟ್ಟಿಕೊಂಡಳುತ ಹೋಯೆನುತ ಬಂಧುಗಳೆಲ್ಲ |
ಮುಟ್ಟದಲೆ ಹೆಣನೆಂದು ದೂರದೊಳಗಿಹರು 13
ಸತ್ತ ಹೆಣಕಳಲೇತಕೆಂದು ಬಂಧುಗಳೆಲ್ಲ |
ಸುತ್ತಿರ್ದು ಹೊತ್ತು ಹೋಯಿತು ಎನ್ನುತ ||
ಹೊತ್ತು ಕೊಂಡಗ್ನಿಯಲಿ ತನುವ ಬೀಸಾಡುವರು |
ಮತ್ತೆ ಧರಣಿಯಲಿ ನಾ ಜನಿಸಬೇಡವೊ ಹರಿಯೆ 14
ಇನ್ನು ಈ ಪರಿಪರಿಯ ಯೋನಿಮುಖದಲಿ ಬಂದು |
ಬನ್ನವನು ಪಡಲರೆ ಭವಭವದೊಳು ||
ಜನ್ಮ-ಮರಣಾದಿ ಕ್ಲೇಶಗಳನ್ನು ಪರಿಹರಿಸಿ |
ಸನ್ಮತಿಯೊಳಿರಿಸೆನ್ನ ಪುರಂದರವಿಠಲ 15

No comments:

Post a Comment