ಸಾಕು ಮಾಡಿರವ್ವ ರಂಗನ | ಏಕೆ ದೂರುವಿರೆ? ಪ
ಬೆಟ್ಟು ಬಾಯೊಳಗಿಟ್ಟರೆ ರಂಗ - ಕಚ್ಚಲರಿಯನೆ |
ಕಟ್ಟಿರುವೆಯನು ಕಂಡರೆ ಬವ್ವೆಂದು - ಚಿಟ್ಟನೆ ಚೀರುವನೆ ||
ರಟ್ಟೆಯ ಹಿಡಿದು ನಡಸಲು ರಂಗ - ದಟ್ಟಡಿ ಇಕ್ಕುವನೆ |
ಭ್ರಷ್ಟ ಮಾತುಗಳನೆಷ್ಟೋ ಕಲ್ಪಿಸಿ |
ಪಟ್ಟ ಪಟ್ಟಿಗೆ ರಟ್ಟು ಮಾಡುವುದು1
ಅರಿಯದಂತೆ ನೊರೆಹಾಲನು ಕುಡಿವನೆ -
ಕರೆಕರೆ ಮಾಡುವನೆ |
ಇರಲು ಮನೆಯೊಳಗೆ ಬರುತ ನಿಮ್ಮ ಮನೆ - ಮೊಸರನು-ಸುರಿಯವನೆ ||
ಸರಸಿಜಾಕ್ಷಿಯರೆ ಪರಿಪರಿಯಿಂದಲಿ |
ಹರಲಿ ಮಾಡುವುದಿದು ತರವೇನಮ್ಮ 2
ಚಿಕ್ಕ ಚಿಕ್ಕ ಗೋವಕ್ಕಳ ಕೂಡ ಚೆಂಡನಾಡುವಾಗ |
ಸಿಕ್ಕಿತೆನುತ ಬಹು ಚಕ್ಕಂದಾಡುತ |
ಗಕ್ಕನೆ ಹೋಗಿ ಕೈಯಿಕ್ಕಿ ತೆಗೆದನೆ 3
ಮಾಲೆಗಂಬದೋಪಾದಿಯಲಿ ನೀವು ಬಹಳ ಬೆಳೆದಿರೀಗ |
ನೀಲಕುಂತಳೆಯೆ ದಧಿಶೋಧಿಸಿ ಓಲಾಡುತ ಕಡೆವಾಗ ||
ಬಾಲಕೃಷ್ಣನಿಗೆ ಜೋಲುವ ಕುಚಗಳು |
ನಿಲುಕುವ ಬಗೆ ಹೇಗೆ? ||
ಖೂಳ ಸೆಟವಿಯರು ಕಾಳವಾಗಿಹರು |
ಕೇಳಿಕೇಳಿ ಬೇಸತ್ತಿಹೆನಮ್ಮ 4
ಫುಲ್ಲನಾಭನಿವ ಒಲ್ಲದನಾದರೆ ಎಲ್ಲ ಒಯ್ದಿಡಬೇಕೆ? |
ಖುಲ್ಲತನದಿ ನೀವ್ ನಿಲ್ಲಗೊಡದಿಹಿರಿ ಗುಲ್ಲುತನವು ಸಾಕೆ ||
ಸಲ್ಲದು ಈ ನುಡಿ ಪುರಂದರವಿಠಲಗೆ |
ಹಲ್ಲೊಳಗಾತನ ಇಟ್ಟಿರಬೇಡಿ 5
No comments:
Post a Comment