ವರುಷ ಕಾರಣವಿಲ್ಲ ಹರಿಭಜನೆಗೆ |
ಅರಿತ ಸಜ್ಜನರೆಲ್ಲ ಕೇಳಿ ಸಮ್ಮುದದಿ ಪ.
ತರಳತನದಲಿ ಕಂಡ ಹರಿಯ ಧ್ರುವರಾಯನು |
ಹಿರಿಯ ತಾನವನಯ್ಯ ಕಂಡನೇನೂ ? ||
ತರಳ ಪ್ರಹ್ಲಾದ ನರಹರಿಯನು ತಾ ಕಂಡ |
ಹಿರಿಯನವನಪ್ಪ ತಾ ಮರೆಯಲಿಲ್ಲವೇನೊ ? 1
ಹಿರಿದಾಗಿ ಬಹುಕಾಲ ಮರದ ಮೇಲ್ಬಾಳುವ |
ಇರುಳು ಗಣ್ಣಿನ ಗೂಗೆ ತಾ ದೊಡ್ಡದೆ ? ||
ಮರೆಯಾದ ಅರಗಿಣಿ ಹರಿಕೃಷ್ಣ ಎಂದೊದರೆ |
ಮರಿ ದೊಡ್ಡದೆಂತೆಂದು ಪೇಳುವರು ಬುಧರು 2
ಸುರುವದಾ ಒದರುವರು ಅರಣ್ಯವಾಸಿಗಳು |
ಮರದಡಿಗೆ ಬಿದ್ದ ಎಲೆಗಳ ತಿನ್ನುತ ||
ಪರಮಪಾತಕಿ ಅಜಾಮಿಳನು ನಾರಗ ಎನಲು |
ಭರದಿಂದ ಸಲುಹಿದನು ಪುರಂದರವಿಠಲ 3
No comments:
Post a Comment