ಸಕಲವೆಲ್ಲವು ಹರಿಸೇವೆಯೆನ್ನಿ
ರುಕುಮಿಣಿಯ ರಮನ ವಿಠಲನಲ್ಲದಿಲ್ಲವೆನ್ನಿ ಪ.
ನುಡಿಗಳೆಲ್ಲವು ನಾರಾಯಣನ ಕೀರ್ತನೆಯೆನ್ನಿ
ನಡೆವುದೆಲ್ಲವು ಹರಿಯಾತ್ರೆಯೆನ್ನಿ ||
ಕೊಡುವುದೆಲ್ಲವು ಕಾಮಜನಕಗರ್ಪಿತವೆನ್ನಿ
ಎಡೆಯ ಅನ್ನವು ಶ್ರೀ ಹರಿಯ ಪ್ರಸಾದವೆನ್ನಿ 1
ಹೊಸವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ
ಕುಸುಮ ಪರಿಮಳವು ಕಂಜನಾಭಗೆನ್ನಿ ||
ಎಸೆವಾಭರಣವು ಯಶೋಧೆನಂದನಗೆನ್ನಿ
ಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ 2
ಆಟಪಾಟಗಳೆಲ್ಲ ಅಂತರ್ಯಾಮಿಗೆಯೆನ್ನಿ
ನೋಟ ಬೇಟಗಳೆಲ್ಲ ನಾಟಕಧಾರಿಗೆನ್ನಿ ||
ನೀಟಾದ ವಸ್ತುಗಳೆಲ್ಲ ಕೈಟಭ ಮರ್ದನಗೆನ್ನಿ
ಕೋಟಲೆ ಸಂಸಾರ ಕಪಟನಾಟಕಗೆನ್ನಿ 3
ನಿದ್ರೆ ಜಾಗರವು ಸಮುದ್ರಶಯನಗೆನ್ನಿ
ಭದ್ರಗಜನಿಧಿ ವರದಗೆನ್ನಿ
ರೌದ್ರದಾರಿದ್ರವು ರಾಘವನ ಮಾಯೆಯೆನ್ನಿ ಶ್ರೀ
ಮುದ್ರೆ ಧರಿಸಿದವ ಹರಿದಾಸನೆನ್ನಿ 4
ಅಣು ರೇಣು ತೃಣ ಕಾಷ್ಠ ಪರಿಪೂರ್ಣನಹುದೆನ್ನಿ
ಎಣಿಸಬಾರದನಂತ ಮಹಿಮನೆನ್ನಿ
ಸೆಣಸುವ ರಕ್ಕಸರ ಶಿರವ ಚಂಡಾಡುವ
ಪ್ರಣವಗೋಚರ ಪುರಂದರವಿಠಲರಾಯನೆನ್ನಿ 5
No comments:
Post a Comment