ಸದ್ದು ಮಾಡಲು ಬೇಡವೊ _ ನಿನ್ನ ಕಾಲಿಗೆ |
ಬಿದ್ದು ನಾ ಬೇಡಿಕೊಂಬೆ ಪ
ನಿದ್ದೆಗೆಯ್ಯವರೆಲ್ಲ ಎದ್ದರೆ ನೀನು ಬಂ-|
ದಿದ್ದದ್ದು ಕಂಡರೇನೆಂಬುವರೊ ರಂಗ ಅ.ಪ
ಬಳೆ ಘಲ್ಲುಕೆನ್ನದೇನೊ-ಕೈಯ ಪಿಡಿದು |
ಎಳೆಯದಿರೊ ಸುಮ್ಮನೆ ||
ಮೊಲೆಗಳ ಮೇಲಿನ ಸೆರಗನೆಳೆಯಲು ಕೊ-|
ರಳ ಪದಕಂಗಳು ಧ್ವನಿಗೆಯ್ಯವುವೊ ರಂಗ 1
ನಿರುಗೆಯ ಪಿಡಿಯದಿರೊ - ಕಾಂಚಿಯ ದಾಮ |
ಕಿರುಗಂಟೆ ಧ್ವನಿಗೆಯ್ಯದೆ? ||
ಕಿರುದುಟಿಗಳ ನೀನು ಸವಿದು ಚಪ್ಪರಿಸಲು |
ತರವಲ್ಲ ಗಂಡ ಮತ್ಸರವ ತಾಳುವನಲ್ಲ 2
ನಾಡ ಮಾತುಗಳೇತಕೊ - ಸಂಗೀತವ |
ಪಾಡುವ ಸಮಯವೇನೊ ||
ಗಾಡಿಕಾರ ಶ್ರೀ ಪುರಂದರವಿಠಲನೆ |
ಪಾಡು ಪಂಥಗಳೆ ಒಡಗೂಡುವ ಸಮಯದಿ 3
No comments:
Post a Comment