Labels

Tuesday, 29 October 2019

ಈ ಪರಿಯ ಅಧಿಕಾರ ಒಲ್ಲೆ ನಾನು | ee pariya adhikar olle naanu

ಈ ಪರಿಯ ಅಧಿಕಾರ ಒಲ್ಲೆ ನಾನು |
ಶ್ರೀಪತಿಯೆ ನೀನೊಲಿದು ಏನ ಕೊಟ್ಟುದೆ ಸಾಕು ಪ
ಚಿರಕಾಲ ನಿನ್ನ ಕಾಯ್ದು ತಿರುಗಿದುದಕೆ ನಾನು |
ಕರುಣದಲಿ ರಚಿಸಿ ನೀ ಈ ದುರ್ಗದಿ ||
ಇರ ಹೇಳಿದುದಕೆ ನಾ ಹೊಕ್ಕು ನೋಡಿದೆ ಒಳಗೆ |
ಹುರುಳ ಲೇಶವು ಕಾಣೆ ಕರಕರೆಯು ಬಲುನೋಡು 1
ದಾರಿಯಲಿ ಹೋಗಿ ಬರುವವರ ಉಪಟಳ ಘನ |
ಚೋರರಟ್ಟುಳಿಗಂತೂ ನೆಲೆಯೆ ಇಲ್ಲ ||
ವೈರಿವರ್ಗದ ಜನರು ಒಳಗೆ ಬಲು ತುಂಬಿಹರು |
ಮಿರಿ ನಿನ್ನಲಿ ಮನವನೂರಿ ನಿಲಗೊಡರು 2
ಸರಿಬಂದ ವ್ಯಾಪಾರ ಮಾಡಿ ತಾವೆನ್ನನ್ನು |
ಬರಿಯ ಲೆಕ್ಕಕೆ ಮಾತ್ರ ಗುರಿಯ ಮಾಡಿ ||
ಕರಕರೆಯ ಬಡಿಸಬೇಕೆಂದು ಯೋಚಿಸುತಿಹರು |
ಕರೆದು ವಿಚಾರಿಸಿ ನ್ಯಾಯ ಮಾಡಿಸು ದೊರೆಯೇ 3
ನಾಮಾಂಕಿತಕೆ ಮಾತ್ರ ಅಧಿಕಾರವೆನಗಿತ್ತೆ |
ಸ್ವಾಮಿತ್ವವೋ ನೋಡು ಮನೆಮನೆಯಲಿ ||
ಭೀಮ ವಿಕ್ರಮರವರು ದುರ್ಬಲಾಗ್ರಣಿ ನಾನು |
ಗ್ರಾಮ ಒಪ್ಪಿಸೆ ನಮಿಪೆ ಸಂಬಂದ ತೆರಮಾಡು 4
ಕಾಲಕ್ಕೆ ಕರೆಯ ಬಂದವರಿಗೆ ಒಳಗಾಗಿ |
ಪಾಳೆಯವನೊಪ್ಪಿಸಿ ಕೊಡುವೆವೆಂದು ||
ಆಲೋಚಿಸಿಹರಯ್ಯ ಈಗಲೆನಗೆ ನಿನ್ನ |
ಆಳುಗಳ ಬಲಮಾಡಿ ಎನ್ನ ರಕ್ಷಿಸು ದೊರೆಯೆ 5
ಕ್ಷಣಕೆ ನೂರುಪಟಳ ಈ ಕೋಟೆಗೆಲೊ ರಾಯ |
ಅನುವಾದ ದಿವಸವೊಂದಾದರಿಲ್ಲ ||
ಮೊನೆಗಾರ ಜನವಿಲ್ಲ ಇದ್ದವರು ವಶವಿಲ್ಲ |
ಕೊನೆಗೊಂಡು ಗ್ರಾಮ ಕಾಪಾಡುವ ತೆರನೆಂತೊ 6
ಎನಗೆ ಈ ಬಹುನಾಯಕರ ಕೊಂಪೆಯೊಳು ವಾಸ-|
ವನು ಬಿಡಿಸಿ ನಿನ್ನ ನಿಜ ಪಟ್ಟಣದೊಳು ||
ಮನೆ ಮಾಡಿಕೊಡಲು ನಾನಿನ್ನ ನೋಡಿಕೊಳುತ |
ಅನುಗಾಲ ಬದುಕುವೆನೊ ಪುರಂದರವಿಠಲ 7

No comments:

Post a Comment