ಆತನ ಪಾಡುವೆನನವರತ |
ಪ್ರೀತಿಯಿಂದಲಿ ತನ್ನ ಭಕುತರ ಸಲಹುವ ಪ
ಆವಾತನ ಕೀರ್ತಿಯನು ಪರೀಕ್ಷಿತ ಕೇಳೆ |
ಪಾವನನಾದನು ಮೂಜಗವರಿಯೆ ||
ಭಾವಶುದ್ಧಿಯಲಿ ಶುಕನಾರನು ಪೊಗಳುವ |
ಆವಗಂ ಪ್ರಹ್ಲಾದನಾದವನ ನೆನೆವನಯ್ಯ 1
ಶಿಲೆಯ ಬಾಲೆಯ ಮಾಡಿದ ಪಾದವಾರದು |
ನಳಿನ ಸಂಭವನನು ಪೆತ್ತವನಾರು ||
ಕಲಿಯುಗದ ಮನುಜರಿಗೆ ಆರನಾಮವು ಗತಿ |
ಇಳೆಯ ಭಾರವನಿಳುಹಿ ಸಲಹಿದರಾರಯ್ಯ 2
ದ್ರುಪದನ ಸುತೆಯ ಮಾನರಕ್ಷಕನಾರು |
ನೃಪಧರ್ಮನಿಗೆ ಸಂರಕ್ಷಕನಾರು |
ಕೃಪೆಯಿಂದ ವಿದುರನ ಮನೆಯಲುಂಡವನಾರು |
ಆಪತ್ಕಾಲದಿ ಗಜವ ಸಲಹಿದರಾರಯ್ಯ 3
ಅತಿಶಯದಿಂದ ಅರ್ಜುನಗೆ ಸಾರಥಿಯಾಗಿ |
ರಥವ ಪಿಡಿದು ನಡೆಸಿದವನಾರೊ ||
ಪೃಥಿವಿಯೆಲ್ಲವ ಬಲಿ ಆರಿಗೊಪ್ಪಿಸಿದನು |
ಮತಿವಂತ ಧ್ರುವನ ರಕ್ಷಕನಾರು ಪೇಳಯ್ಯ 4
ಸಾಗರನ ಮಗಳಿಗೆ ಆರ ನಾಮವೆ ಗತಿ |
ಯೋಗದಿ ನಾರದನಾರ ಭಜಿಪನಯ್ಯ ||
ರಾಗರಹಿತ ಹನುಮಂತನೊಡೆಯನಾರು |
ಭಾಗವತರ ಪ್ರಿಯ ಪುರಂದರವಿಠಲ 5
No comments:
Post a Comment