ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಪದುಮನಾಭನ ಪಾದ ಭಜನೆ ಸುಖವಯ್ಯ ಪ.
ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಬೇಕು ಬಲ್ಲವರ ಒಳಗೆ ||
ಮೆಲ್ಲನೇ ಮಾಧವನ ಮನದಿ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಭಕುತಜನರೊಳಗೆ 1
ಬುಧ್ಧಿಯಲಿ ತನ್ನ ಮನ ತಿದ್ದುತ್ತಲಿರಬೇಕು
ಮುದ್ದಾಗಬೇಕು ಮುನಿಯೋಗಿಗಳಿಗೆ ||
ಮಧ್ವಮತದಬ್ಧಿಯೊಳು ಮೀನಾಗಿ ಇರಬೇಕು
ಶುದ್ಧ ಭಕುತಿಯ ಸುಕೃತ ಉಣಲುಬೇಕು 2
ವಿಷಯ ಭೋಗದ ತೃಣಕೆ ಉರಿಯಾಗಿ ಇರಬೇಕು
ಕುಶಲದಲಿ ಶ್ರೀ ಹರಿಯ ನೆನೆಯಬೇಕು ||
ವಸುಧೆಯೊಳು ನಮ್ಮ ಪುರಂದರವಿಠಲನ
ಹಸನಾಗಿ ನೆನೆನೆನೆದು ಸುಖಿಯಾಗಬೇಕು 3
No comments:
Post a Comment