ಅರಿಯರು ಮನುಜರು ಅರಿತೂ ಅರಿಯರು
ಧರೆಗೆ ಒಡೆಯ ಶ್ರೀ ಹರಿಯಲ್ಲದಿಲ್ಲವೆಂದು ಪ
ಶಿವಬಲ್ಲ ಧ್ರುವಬಲ್ಲ ದ್ರೌಪದಿ ಬಲ್ಲಳು
ಅವನಿ ಪಾಲಿಪ ಜನಕನೃಪ ಬಲ್ಲನು ||
ಯುವತಿಗೆ ಶಾಪವಿತ್ತ ಗೌತಮ ಬಲ್ಲನು
ಭವರೋಗ ವೈದ್ಯ ಶ್ರೀಹರಿಯಲ್ಲದಿಲ್ಲವೆಂದು 1
ನಾರದ ಮುನಿ ಬಲ್ಲ ವಾರಿಜೋದ್ಭವ ಬಲ್ಲ
ಪಾರಾಶರನು ಬಲ್ಲ ಮನು ಬಲ್ಲನು ||
ಧೀರ ಭೀಷ್ಮನು ಬಲ್ಲ ಪಾರ್ವತಿ ಬಲ್ಲಳು
ಕಾರಣಕರ್ತ ಶ್ರೀಹರಿಯಲ್ಲದಿಲ್ಲವೆಂದು 2
ದಿಟ್ಟ ಪ್ರಹ್ಲಾದ ಮೊರೆಯಿಟ್ಟ ಗಜೇಂದ್ರ ಬಲ್ಲ
ದೃಷ್ಟಾಂತ ಕಂಡ ಭೃಗುಮುನಿ ಬಲ್ಲನು ||
ಕೊಟ್ಟ ಬಲಿಯು ಬಲ್ಲ ಕೆಟ್ಟಜಾಮಿಳ ಬಲ್ಲ
ಸೃಷ್ಟಿಗೆ ಪುರಂದರವಿಠಲನಲ್ಲದಿಲ್ಲವೆಂದು 3
No comments:
Post a Comment