ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ |
ಭಕ್ತವತ್ಸಲ ದೇವನು ಪ
ಮಕ್ಕಳ ಚೆಂಡಿಕೆ ಮರದ ಕೊನೆಗೆ ಕಟ್ಟಿ |
ಗಕ್ಕನೆ ಕೃಷ್ಣ ಚೆಪ್ಪಾಳಿಕ್ಕಿದನಮ್ಮ ಅ.ಪ
ಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಮಂಡೆಯೊಳು |
ಬಣ್ಣವಸ್ತ್ರವ ಬಿಚ್ಚಿ ಬರಿಮೈಯಲಿರುತಿರೆ ||
ಕಣ್ಣಿಗೆ ಬಿಸಿನೀರ ಚೆಲ್ಲಿ ಸೀರೆಯನೊಯ್ದು |
ಉನ್ನತವಾದ ವೃಕ್ಷವನೇರಿದನೆ ರಂಗ 1
ಪಟ್ಟೆಮಂಚದ ಮೇಲೆ ಪತಿಯಂತೆ ಕುಳಿತಿರುವ |
ಎಷ್ಟು ಸ್ವಾತಂತ್ರ್ಯವೆ ಗೋಪಿ ||
ಉಟ್ಟ ಸೀರೆಯನೆಳೆದು ಬಟ್ಟಕುಚವ ಪಿಡಿದು |
ಅಷ್ಟು ಮಂದಿಗಳೊಳಗೆ ಗಟ್ಟಿ ಅಪ್ಪಿಕೊಂಡನೆ 2
ಸಡಗರದಿಂದ ಗೋವಳಿತಿಯರೊಡಗೂಡಿ |
ನುಡಿಸುತ ಕೊಳಲನು ಪುರದೊಳಗೆ ||
ಕಡೆವ ಮಡದಿಯರ ಕೈ ಪಿಡಿದಾಡುವ |
ಒಡೆಯನೆ ನಮ್ಮ ಶ್ರೀಪುರಂದರವಿಠಲ3
No comments:
Post a Comment