ಶ್ರೀ ತತ್ತ್ವವಾದ ಮತವ ಪ
ಶ್ರೀ ತತ್ತ್ವವಾದ ಮತವಾರ್ದಿ ಶುಭ ಚಂದ್ರಮನ |
ಭೂತಲದೊಳಪ್ರತಿಮನೆನಿಪ ಶ್ರೀಯತಿವರನ |
ಪ್ರೀತಿಯಿಂ ಭಜಿಸೆ ಇಷ್ಟಾರ್ಥಗಳ
ಸಲಿಸುವವಾತಜಾತನ ಸ್ಮರಿಸಿರೈ ಅ.ಪ
ಶ್ರೀಮಾರುತನು ತ್ರೇತೆಯಲಿ ಹನುಮನೆಂದೆನಿಸಿ |
ತಾ ಮುದದಿ ಅಂಜನಾದೇವಿ ಗರ್ಭದಿ ಜನಿಸಿ |
ರಾಮಪಾದಾಂಬುರುಹ ಭಜಿಸಿ ಸದ್ಬಕ್ತಿಯಲಿ
ಸ್ವಾಮಿಯಾಜ್ಞೆಯನೆ ಕೊಂಡು |
ನೇಮದಿಂ ಸಾಗರವ ದಾಟಿ ಲಂಕೆಯ ಪೊಕ್ಕು |
ಪ್ರೇಮದಿಂದೊಯ್ದ ಮುದ್ರೆಯ ಜಾನಕಿಗೆ ಕೊಟ್ಟು |
ಆ ಮಹದ್ವನದ ದನುಜರನೆಲ್ಲವಳಿದ - ನಿಸ್ಸೀಮ -
ಹನುಮನ ಭಜಿಸಿರೈ 1
ದ್ವಾಪರದಿ ಮಾರುತನು ಕುಂತಿದಾರಕನೆನಿಸಿ |
ದ್ವಾಪರನ ಯುಕ್ತಯಿಂದುತ್ಕøಷ್ಟರಾಗಿದ್ದ |
ಪಾಪಿಗಳನಳಿದು ಕೀಚಕ - ಜರಾಸಂಧಾದಿ
ಭೂಪಾಲಕರನು ತರಿದು ||
ದ್ರೌಪದಿಗೆ ಸೌಗಂಧಿ ಕುಸುಮವನು ತರಪೋಗ -
ಲಾಪಥದೊಳಸುರ ಮಣಿಮಂತ ಕದನವ ಮಾಡೆ|
ಕೋಪದಿಂದವನ ಮರ್ದಿಸಿದನತಿ
ಬಲವಂತನಾ ಪುರುಷನಂ ಭಜಿಸಿರೈ 2
ಕಲಿಯುಗವು ಪ್ರಾಪ್ತವಾಗಲು ಮಧ್ವನಾಮದಿಂ
ದಿಳೆಯೊಳವತರಿಸಿ ಸೋಹಂ ಎಂಬ ಶಂಕರನ
ಹುಲುಮತಂಗಳ ಜರಿದು ಮಾಯಿಗಳ
ಗೆಲಿದು ಮೋಹನ ಶಾಸ್ತ್ರಬಲೆಯನರಿದು
ಮತಿತ ದರುಶನವೈದ ನುಂಗಿ ಜೀರ್ಣಿಸಿಕೊಂಡು
ಪ್ರಲಯ ಭೈರವನೆಂಬ ಬಿರುದ ಅವನಿಯ ಮೇಲೆ
ನೆಲೆಗೊಳಿಸಿ ವಿಷ್ಣು ಪರದೈವವೆಂದರುಹಿದಾ
ಅಲವಭೋದರ ಭಜಿಸಿರೈ 3
ಪ್ರತಿವಾದಿಗಿದಿರಾಗಿ ತಲೆಯೆತ್ತದಂತೆ ಸಂ-
ತತ ಧರೆಯೊಳದ್ವೈತವಂಕುರಿಸದಂತೆ ದು-
ರ್ಮತದ ಮೋಹನಶಾಸ್ತ್ರ ಪಲ್ಲವಿಸದಂತೆ ಮಾಯಿಗಳ
ಮತಗಳ ಮತ ಹೆಚ್ಚದಂತೆ ||
ಕ್ಷಿತಿಯೊಳಗೆ ಶ್ರೀತತ್ತ್ವವಾದ ನೆಲಸಿಪ್ಪಂತೆ |
ಶ್ರುತಿಶಾಸ್ತ್ರವದ್ವೈತವಂ ಬಿಟ್ಟು ಸೆಳೆವಂತೆ
ಪ್ರತಿಪಾದಿಸುವ ಖಳರ ದುರ್ಭಾಷ್ಯಗಳ ಜರಿದ
ಯತಿರಾಯರು ಭಜಿಸಿರೈ 4
ಪರಮವೈಷ್ಣವರ ಮಿಂಚಿಡುವ ರತ್ನದ ಸಾಣೆ |
ಪರವಾದಿಗಳ ಬೆನ್ನ ಮುರಿವ ವಜ್ರದ ಸಾಣೆ |
ಗುರುಮಧ್ವಮುನಿಯ ಬಲುವಿದ್ಯ ಸಾಮಥ್ರ್ಯಕ್ಕೆ
ಸರಿಗಾಣೆ ಲೋಕದೊಳಗೆ ||
ಧರೆಯೊಳಗೆ ಶ್ರೀತತ್ತ್ವವಾಗಿ ನೆಲಸಿಹ ವೀಣೆ |
ಚರಿಸದಂತಿಳೆಯಲದ್ವೈತಕಿಕ್ಕಿದ ಆಣೆ |
ವರಮೂರ್ತಿ ಚೈತನ್ಯ ವಂದ್ಯ ಸುತ್ರಾಮನೇ |
ಪೂರ್ಣಪ್ರಜ್ಞರ ಭಜಿಸಿರೈ 5
ಅಕಳಂಕ ಚರಿತನೆ ಮುಮುಕ್ಷ ಮಸ್ತಕದ ಮಣಿ |
ನಿಖಿಳ ಪೌರಾಣಶ್ರುತಿ ಶಾಸ್ತ್ರದಾಗಮದ ಖಣಿ |
ಸಕಲವಾದಿಗಳ ಜಿಹ್ವೆಯಲಿ ಮೆಟ್ಟಿದ ಆಣಿ
ಭಾಗವತ ಚಿಂತಾಮಣಿ ||
ಯುಕುತಿ ಪರಿಪೂರ್ಣಯತ್ಯಾಶ್ರಮಕೆ ಕಟ್ಟಾಣಿ |
ಪ್ರಕಟ ಕವಿಜನ ಕಮಲ ವ್ಯೂಹಕೆ ಗಗನಮಣಿ |
ಸಕಲ ಜಗವಂದ್ಯ ಚೈತನ್ಯ ಚಿಂತಾಮಣಿ
ಮುಖ್ಯಪ್ರಾಣರ ಭಜಿಸಿರೈ 6
ಮುಂದೆ ಅಜನಾಗಿ ಪವಮಾನ ಕೃತಯುಗದಲ್ಲಿ |
ಒಂದು ನಿಮಿಷದಲಿ ಸೃಜಿಸುವನು ಸಚರಾಚರವ |
ಸಂದೇಹವಿಲ್ಲ ತಪ್ಪದು ವೇದವಾಕ್ಯವಿದು
ಹಿಂದೆ ಶ್ರೀಹರಿಸೇವೆಯ ||
ಒಂದು ಬಯಸದಲೆ ನಿಚ್ಚಟದ ಭಕ್ತಿಯಲಿ ತಾ -
ನಂದು ಮಾಡಿದ ಸುಕೃತ - ಫಲದಿಂದ ಬ್ರಹ್ಮತ್ವ |
ಬಂದು ಯುಗ -ಯುಗದೊಳವರಿತರಿಸಿ ದೃಷ್ಟವ
ತೋರ್ಪನಂದ ಮುನಿಪರ ಭಜಿಸಿರೈ
No comments:
Post a Comment