Labels

Wednesday 15 January 2020

ದಾಸನೆಂತಾಗುವೆನು ಧರೆಯೊಳಗೆ ನಾನು daasanantaguvenu dhareyolage


ದಾಸನೆಂತಾಗುವೆನು ಧರೆಯೊಳಗೆ ನಾನು | ವಾಸುದೇವನಲಿ ಲೇಸ ಭಕುತಿಯ ಕಾಣೆ ಪ.
ಗೂಟನಾಮವ ಹೊಡೆದು ಗುಂಡು ತಂಬಿಗೆ ಹಿಡಿದು | ಗೋಟಂಚುಧೋತರ ಮುಡಿಯನುಟ್ಟು ||
ದಾಟುಗಾಲಿಡುತ ನಾಧರೆಯೊಳಗೆ ಬರಲೆನ್ನ | ಬೂಟಕತನ ನೋಡಿ ಭ್ರಮಿಸದಿರಿ ಜನರೆ 1
ಅರ್ಥದಲ್ಲಿಯ ಮನಸು ಆಸಕ್ತವಾಗಿದ್ದು | ವ್ಯರ್ಥವಾಯಿತು ಜನ್ಮ ವಸುಧೆಯೊಳು ||
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಿಲ್ಲ ನಾ | ಸತ್ಯ - ಶೌಚಗಳರಿಯೆ ಸಜ್ಜನರು ಕೇಳಿ 2
ಇಂದಿರೇಶನ ಪೂಜೆ ಬಂದು ಮಾಡಿದ್ದಿಲ್ಲ | ಸಂಧ್ಯಾನ - ಜಪ - ತಪವೊಂದನರಿಯೆ ||
ಒಂದು ಸಾಧನ ಕಾಣೆ ಪುರಂದರವಿಠಲನ | ದ್ವಂದ್ವಪಾದವ ನಂಬಿ ಅರಿತು ಭಜಿಸಿದರೆ 3


No comments:

Post a Comment