Labels

Wednesday 15 January 2020

ಧೂಪಾರತಿಯ ನೋಡುವ ಬನ್ನಿ dhuparatiya noduva banni


ಧೂಪಾರತಿಯ ನೋಡುವ ಬನ್ನಿ ನಮ್ಮ
ಗೋಪಾಲಕೃಷ್ಣನ ಪೂಜೆಯ ಸಮಯದಿ ಪ.
ಅಗುರು ಚಂದನ ಧೂಪ ಗುಗ್ಗುಳ ಸಾಮ್ರಾಣಿ
ಮಘಮಘಿಸುವ ಧೂಪದಾರತಿಯು ||
ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮ
ಜಗನ್ನಾಥ ಕೃಷ್ಣನ ದೇವರ ಪೂಜೆಯ 1
ಮದ್ದಳೆ ಜಾಂಗಟಿ ತಾಳ ತಮ್ಮಟೆ ಭೇರಿ
ತದ್ಧಿಮಿ ಧಿಮಿಕೆಂಬ ನಾದಗಳು ||
ಹೊದ್ದಿದ ಧವಳ ಶಂಖದ ಘೋಷಣಂಗಳ
ಪದ್ಮನಾಭನ ದಿವ್ಯ ದೇವರ ಪೂಜೆಯ 2
ಢಣ ಢಣ ಢಣರೆಂಬ ತಾಳ ದಂಡಿಗೆ ವೇಣು
ಢಣಕು ಧಿಮಿಕು ಎಂಬ ಮದ್ದಳೆಯು ||
ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳ
ಘನರಾಗದಿಂದಲಿ ಹಾಡುತ ಪಾಡುತ 3
ಮುತ್ತು ಛತ್ರ ಚಾಮರ ಪತಾಕ ಧ್ವಜ
ರತ್ನ ಕೆಚ್ಚಿದ ಪದಕ ಹಾರಗಳು ||
ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ
ಸತ್ಯಭಾಮೆ ರುಕ್ಮಿಣಿಯರರಸನ 4
ಹರ ಬ್ರಹ್ಮ ಸುರಪತಿ ದೇವತೆ ಮೊದಲಾದ
ಪರಮ ಪಾವನ ಮೂರ್ತಿ ಪುರುಷೋತ್ತಮನ ||
ಪರದೈವತವೆಂದು ಬಿರುದು ಪೊಗಳಿಸಿಕೊಂಬ
ಪುರಂದರವಿಠಲನ ಪೂಜೆಯ ಕಾಲದ 5


No comments:

Post a Comment