Labels

Sunday, 29 March 2020

ಎಲ್ಲಿಯ ಮಧುರಾಪುರವು | ಎಲ್ಲಿಯ ತಾ ಬಿಲ್ಲು ಹಬ್ಬ |


ಎಲ್ಲಿಯ ಮಧುರಾಪುರವು | ಎಲ್ಲಿಯ ತಾ ಬಿಲ್ಲು ಹಬ್ಬ |
ಎಲ್ಲಿಯ ಸೋದರಮಾವನೆ ಪ
ಎಲ್ಲಿಯ ಮಲ್ಲರಸಂಗ | ಖುಲ್ಲ ಕಂಸನು ನಮಗೆ |
ಎಲ್ಲಿಯ ಜನ್ಮದ ವೈರಿಯೆ-ಸಖಿಯೆ ಅ.ಪ
ವೃಂದಾವನದೊಳಗಿರುವ ವೃಕ್ಷಜಾತಿಗಳೆಲ್ಲ |
ಒಂದೊಂದು ಫಲದಿಂದಲಿ ಸಂದಣಿತವೆ ||
ಕುಂದಕುಸುಮದಲಿರುವ ಮಂದಿರದಲಿ ಚಕೋರ |
ಒಂದೊಂದು ಸುಖಭರಿತವೆ ||
ಅಂದು ಮಾಧವ ನಮ್ಮ ಹೊಂದಿ ಕರವಿಡಿದ |
ನಂದನ ಕಂದನ ಚರಿತವೆ ಸಖಿಯೆ 1
ಅಕ್ರೂರ ತಾನೆಲ್ಲ ಅಚ್ಯುತಗೆ ಎಡೆ ಮಾಡಿ |
ಆ ಕ್ರೂರನೆನಿಸಿದನೆ |
ವಕ್ರಮಾರ್ಗವ ಕೂಡಿ ವನಿತೆಯರ ಉಸಿರೆಣಿಸಿ |
ಚಕ್ರಧರನಗಲಿಸಿದನೆ ||
ಆಕ್ರಮಿಸಿ ಸುರಲೋಕ ಪಾರಿಜಾತವನಂಬು-|
ಜಾಕ್ಷಿಗೆ ತಂದಿತ್ತನೆ-ಸಖಿಯೆ 2
ನೀರ ಚೆಲ್ಲಾಟದೊಳು ನಿಲಿಸಿ ನಮ್ಮೆಲ್ಲರ |
ನಾರಿಯರಿಗೆ ಚಲ್ಲಿದನೆ ||
ಮೋರೆ ಮೋರೆ ನೋಡಿ ಅಧರಾಮೃತಗಳ |
ಸಾರಿ ಸಾರಿ ಸವಿದುಂಬನೆ ||
ದ್ವಾರಕಾಪುರವಾಸ ಪುರಂದರವಿಠಲ |
ಸೇರಿ ನಮ್ಮನು ಸಲಹುವನೆ-ಸಖಿಯೆ 3


No comments:

Post a Comment