Labels

Sunday, 29 March 2020

ಏಳಿ ಮೊಸರ ಕಡೆಯಿರೇಳಿ-ಗೋ-|ಪಾಲ ಚೂಡಾಮಣಿ ಏಳದ ಮುನ್ನ


ಏಳಿ ಮೊಸರ ಕಡೆಯಿರೇಳಿ-ಗೋ-|
ಪಾಲ ಚೂಡಾಮಣಿ ಏಳದ ಮುನ್ನ ಪ
ಇಂದುಮುಖಿಯರೆದ್ದು ಮುಖವನೆ ತೊಳೆದು ಶ್ರೀ-|
ಗಂಧ-ಕಸ್ತೂರಿ-ಕುಂಕುಮಗಳಿಟ್ಟು ||
ಚಂದ್ರಗಾವಿಯ ಸೀರೆಯ ನೀರಿವಿಟ್ಟು ಮು-|
ಕುಂದನ ಪಾಡುತ ಚದುರೆಯರೆಲ್ಲ 1
ಹೊಂಗೊಡ ಬೆಳಗಿಟ್ಟು ಪೊಸಮೊಸರನೆ ತುಂಬಿ |
ರಂಗನೀಲದ ಕಡೆಗೋಲನಿಟ್ಟು ||
ಶೃಂಗಾರವಾದ ರೇಶಿಮೆಯ ನೇಣನೆ ಹಿಡಿದು |
ರಂಗನ ಪಾಡುತ ಚದುರೆಯರೆಲ್ಲ 2
ಬಡನಡು ಬಳುಕುತ ಕುಚಗಳಲ್ಲಾಡುತ |
ಕಡಗ-ಕಂಕಣ ಝಣಝಣರೆನ್ನುತ ||
ಮುಡಿದ ಮಲ್ಲಿಗೆ ಹೂವು ಎಡಬಲಕುದುರೆ ಪಾ-|
ಲ್ಗಡಲೊಡೆಯನ ಪಾಡುತ ಚದುರೆಯರು 3
ಹುಸಿನಿದ್ದೆಯಲಿ ಶ್ರೀಕೃಷ್ಣನು ಮಲಗಿರೆ |
ಹಸಿದು ಆಕಳಿಸಿ ಬಾಯಾರುತಲಿ ||
ಮುಸುಕಿನೊಳಿದ್ದು ಬೆಣ್ಣೆಯ ಬೇಡುತಲಿರೆ |
ಶಶಿವದನನಿಗೆ ಬೆಣ್ಣೆಯ ನೀಡಲೋಸುಗ 4
ಏಣಾಂಕಮುಖಿಯರು ಹೊಸ ಬೆಣ್ಣೆಯನು ತೆಗೆದು |
ಪ್ರಾಣಪದಕ ಕೃಷ್ಣನಿಗೆ ಕೊಡಲು ||
ಚಾಣೂರ ಮಲ್ಲನ ಗೆಲಿದು ಬಾರೆನುತಲಿ ||
ಜಾಣ ಪುರಂದರವಿಠಲನಪ್ಪಲು ಗೋಪಿ 5
ದೃಷ್ಟಿಯು ತಾಗೀತೆಂದಿಟ್ಟು ಅಂಗಾರವ |
ತಟ್ಟೆಯೊಳಾರತಿಗಳ ಬೆಳಗಿ ||
ಥಟ್ಟನೆ ಉಪ್ಪು-ಬೇವುಗಳ ನಿವಾಳಿಸಿ |
ತೊಟ್ಟಿಲೊಳಿಟ್ಟು ಮುದ್ದಾಡುವಳೊ 6
ನಮ್ಮಪ್ಪ ರಂಗಯ್ಯ ಅಳಬೇಡವೊ ದೊಡ್ಡ |
ಗುಮ್ಮ ಬಂದಿದೆ ಸುಮ್ಮನಿರು ಎನುತ ||
ಅಮ್ಮಿಯನೀಯುತ ಅಮರರನಾಳ್ದನ |
ರಮ್ಮಿಸಿ ರಮ್ಮಿಸಿ ಮುದ್ದಾಡುವಳೊ 7
ಏಸೊ ಬೊಮ್ಮಾಂಡವ ರೋಮದೊಳಿರಿಸಿದ |
ವಾಸುದೇವನನೆತ್ತಿ ಕೊಂಬುವಳೊ ||
ನಾಶರಹಿತನಾಯುಷ್ಯ ಹೆಚ್ಚಲೆಂದು |
ರಾಶಿದೈವಕೆ ತಾ ಬೇಡಿಕೊಂಬುವಳೊ 8
ಮಾಧವ ಬಾ ಮದುಸೂದನ ಬಾ ಬ್ರ-|
ಹ್ಮಾದಿವಂದಿತ ಹರಿ ಬಾ ಯೆನುತ ||
ಆದಿ ಮೂರುತಿ ಶ್ರೀ ಪುರಂದರವಿಠಲನ |
ಆದರದಲಿ ಮುದ್ದಾಡುವಳೊ 9


No comments:

Post a Comment