ಏನ ಮಾಡಲಿ ಶ್ರೀ ಹರಿ - ಇಂಥ |
ಮಾನವಜನ್ಮ ನಚ್ಚಿಸಬಹುದೆ? ಪ
ಮಾತನಾಡದೆ ಮೌನದೊಳಿದ್ದರೆ-ಮೂಕ-|
ನೀತನೆಂದು ಧಿಕ್ಕರಿಸುವರು ||
ಚಾತುರ್ಯದಿಂದಲಿ ಮಾತುಗಳಾಡಲು |
ಈತನು ಬಲು ಬಾಯ್ಬಡಿಕನೆಂಬುವರಯ್ಯ 1
ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |
ಬಡಿವಾರದವನೆಂದಾಡುವರು ||
ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |
ನಡತೆ ಹೀನನೆಂದು ಬಲು ನಿಂದಿಸುವರಯ್ಯ2
ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |
ನಿಷ್ಟೆಯೇನು ಸುಟ್ಟಿತೆಂಬರು |
ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |
ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ3
ಒಲಪಿನೊಳ್ಚೆನ್ನಿಗತನವನು ಮಾಡಲು |
ಬಲು ಹೆಮ್ಮೆಗಾರನೆಂದಾಡುವರು ||
ಸುಲಭತನದಿ ತಾ ನಿಗರ್ವಿಯಾಗಿದ್ದರೆ |
ಕಲಿಯುಗದಲಿ ಮಂದಮತಿಯೆಂಬುವರಯ್ಯ 4
ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |
ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||
ಧರೆಯೊಳಗಿಹ ಪರಿಯಂತರ ಸಲಹೆನ್ನ |
ಕರುಣವಾರಿಧಿ ಶ್ರೀ ಪುರಂದರ ವಿಠಲ5
No comments:
Post a Comment