Labels

Sunday 29 March 2020

ಏನೆಂತೊಲಿದೆ ಇಂತವರಂತೆ ಕೆಡುಬುದ್ಧಿ - ಎನ್ನೊಳಿಲ್ಲ ಗುಣ |


ಏನೆಂತೊಲಿದೆ ಇಂತವರಂತೆ ಕೆಡುಬುದ್ಧಿ - ಎನ್ನೊಳಿಲ್ಲ ಗುಣ |
ಹೀನರಲ್ಲದ ದೀನ ಜನರ ಪಾಲಿಪ ಬುದ್ಧಿ ನಿನ್ನೊಳಿಲ್ಲ ಪ
ತರಳ ಪ್ರಹ್ಲಾದನಂದದಿ ನಿನ್ನಯ ರೂಪ ಕೆಡಿಸಲಿಲ್ಲ
ನರನಂತೆ ತನ್ನ ಬಂಡಿಯ ಬೋವನ ಮಾಡಿ ಹೊಡಿಸಲಿಲ್ಲ ||
ಸುರನದೀಸುತನಂತೆ ಪಣೆಯೊಳು ಬಾಣವ ಸಿಡಿಸಲಿಲ್ಲ
ದೊರೆ ಅಂಬರೀಷನಂದದಿ ಈರೈದು ಜನ್ಮವ ಪಡಿಸಲಿಲ್ಲ 1
ನಾರದನಂತೆ ಕಂಡವರ ಕೊಂಡೆಯವ ನಾ ಪೇಳಲಿಲ್ಲ |
ಪರಾಶರನಂತೆ ನದಿಯೊಳಂಬಿಗ ಹೆಣ್ಣ ಕೊಡಲಿಲ್ಲ ||
ಆ ರುಕುಮಾಂಗದನಂತೆ ಸುತನ ಕೊಲ್ಲಲು ಧೃಢಮಾಡಲಿಲ್ಲ
ಮಾರುತನಂತೆ ನೀನುಣುತಿದ್ದ ಎಡೆಯ ಕೊಂಡೋಡಲಿಲ್ಲ2
ವಿದುರನಂತೆ ನನ್ನ ಸದನವ ಮುರಿದು ನಾ ಕುಣಿಯಲಿಲ್ಲ
ಮದಕರಿಯಂತೆ ಮಕರಿಯ ಬಾಯೊಳು ಸಿಕ್ಕಿ ಒದರಲಿಲ್ಲ ||
ಹೆದರದೆ ಬಲಿಯಂತೆ ಭೂಮಿಯ ಧಾರೆಯನೆರೆಯಲಿಲ್ಲ
ಸದರ ಮಾತುಗಳಾಡಿ ಶಿಶುಪಾಲನಂತೆ ನಾ ಜರೆಯಲಿಲ್ಲ 3
ಸನಕಾದಿ ಮುನಿಯಂತೆ ಅನುದಿನ ಮನದೊಳು ಸ್ಮರಿಸಲಿಲ್ಲ
ಇನಸುತ ಕಪಿಯಂತೆ ವಂಚಿಸಿ ವಾಲಿಯ ಕೊಲಿಸಲಿಲ್ಲ ||
ಬಿನುಗು ಬೇಡತಿಯಂತೆ ಸವಿದುಂಡ ಹಣ್ಣ ನಾ ತಿನಿಸಲಿಲ್ಲ
ಘನ ಅಜಾಮಿಳನಂತೆ ಸುತನ ನಾರಗನೆಂದು ಕರೆಯಲಿಲ್ಲ 4
ವರ ಶೌನಕನಂತೆ ನಿತ್ಯ ಸೂತನ ಕಥೆ ಕೇಳಲಿಲ್ಲ
ಪಿರಿದು ತುಂಬುರುನಂತೆ ನಾಟ್ಯ - ಸಂಗೀತವ ಪೇಳಲಿಲ್ಲ ||
ಉರಗಾಧಿಪತಿಯಂತೆ ಉದರದೊಳಿಟ್ಟು ನಾ ತೂಗಲಿಲ್ಲ
ಪಿರಿದು ಕುಚೇಲನ ತೆರನಂತೆ ಅವಲಕ್ಕಿ ಈಯಲಿಲ್ಲ 5
ಭೃಗುಮುನಿಯಂತೆ ಗರ್ವದಿ ನಿನ್ನ ಎದೆಯನು ಒದೆಯಲಿಲ್ಲ
ಅಗಣಿತ ಮಹಿಮ ನೀನಹುದೆಂದು ಧ್ರುವನಂತೆ ಪೊಗಳಲಿಲ್ಲ ||
ಖಗರಾಜನಂತೆ ನಿನ್ನನು ಪೊತ್ತು ಗಗನದಿ ತಿರುಗಲಿಲ್ಲ
ಅಗಜೆಯರಸನಂತೆ ಮಸಣದಿ ರಾಮನ ಸ್ಮರಿಸಲಿಲ್ಲ 6
ಅವಹಿತದಲಿ ವಿಭೀಷಣನಂತೆ ಅಣ್ಣನ ಕೊಲಿಸಲಿಲ್ಲ
ಯುವತಿ ದ್ರೌಪದಿಯಂತೆ ಪತ್ರಶಾಕವನುಣಬಡಿಸಲಿಲ್ಲ ||
ತವೆ ಪುಂಡಲೀಕನಂದದಿ ಇಟ್ಟಿಗೆಯ ಮೇಲೆ ನಿಲಿಸಲಿಲ್ಲ ದೇವ
ಇವರಂತೆ ಪುರಂದರ ವಿಠಲ ನಿನ್ನಯ ಕೃಪೆಯೆನ್ನೊಳಿಲ್ಲ 7
(ಈ ಕೀರ್ತನೆಯ ಮೊದಲಿನ ನಾಲ್ಕು ನುಡಿಗಳು ಕನಕದಾಸರಅಂಕಿತದಲ್ಲೂ ಇವೆ.)


No comments:

Post a Comment