Labels

Sunday 29 March 2020

ಏಳಯ್ಯ ಬೆಳಗಾಯಿತು


ಏಳಯ್ಯ ಬೆಳಗಾಯಿತು ಪ.
ಬೆಳಗಾಯಿತೇಳಯ್ಯ ಬಿಸಿಲು ಮೈದೋರುತಿದೆ
ಸುಳಿದೋರೈ ನಿನ್ನ ಹಾರಯ್ಸಿ ನಿಂದಿಹರು
ತಳುವ ಮಾಡದಿರಯ್ಯ ಸ್ವಾಮಿ ತಿರುಮಲೆರಾಯ
ಸೆಳೆಮಂಚದಿಂದಲೇಳು ಅಪ
ವೇದವನು ತರಲೇಳು ಮಂದರವ ಹೊರಲೇಳು
ಛೇದಿಸುತ ಅಸುರರನು ಭೂಮಿಯ ತರಲೇಳು
ಕಾದಿ ಹಿರಣ್ಯನ ಕರುಳ ಕೊರಳೊಳಗೆ ಧರಿಸೇಳು ಕಾದು ಬಲಿ
ಬಾಗಿಲೊಳಗೆ ||
ಭೇದದಲಿ ಭೂಮಿಯ ತ್ರಿಪಾದದಿಂದಳೆಯೇಳು
ಛೇಧಿಸುತ ಕ್ಷತ್ರಿಯರ ಕೊಡಲಿಯಿಂ ಕಡಿಯೇಳು
ಸಾಧಿಸುತ ಶರಧಿಯಲಿ ಸೇತುವೆಯ ಕಟ್ಟೇಳು
ನಂದಗೋಪನ ಉದರದಿ 1
ಪುರಮೂರ ಗೆಲಬೇಕು ಅರಿವೆಯನು ಕಳೆದೇಳು
ದುರುಳರನು ಕೊಲಬೇಕು ತುರಗವಾಹನನಾಗು
ಪರಿಪರಿಯ ಕೆಲಸಗಳ ಮಾಡಲುದ್ಯೋಗಿಸದೆ ಮರೆತುನಿದ್ರೆಯಗೈವರೆ||
ಉರಿಗೈಯನಟ್ಟಿದರೆ ಹರನೋಡಿ ಬಂದಿಹನು
ಗಿರಿಜೆ ವರವನು ಬೇಡಬೇಕೆಂದು ನಿಂದಿಹಳು
ಸುರಪಾರಿಜಾತವನು ಕೊಂಡು ಸುರರಾಜ
ಬಂದಿರುವನೇಳಯ್ಯ ಹರಿಯೆ 2
ಆಲದೆಲೆಯಿಂದೇಳು ಮಾಲಕುಮಿ ಬಂದಿಹಳು
ಹಾಲುಗಡಲಿಂದೇಳು ಶ್ರೀದೇವಿನಿಂದಿಹಳು
ಕಾಲಹೆಡೆಯಿಂದೇಳು ಭೂದೇವಿ ಬಂದಿಹಳು ಸಾಲಮಂಚಿಗಳಿಂದಲಿ ||
ಕ್ಷಿತಿನಾಥ ನೀನೇಳು ಸತ್ಯಭಾಮೆ ಬಂದಿಹಳು
ಮತಿವಂತ ನೀನೇಳು ಜಾಂಬವತಿ ಬಂದಿಹಳು
ಗತಿವಂತ ನೀನೇಳು ಶ್ರೀತುಳಸಿ ಬಂದಿಹಳು ಏಕಾಂತ ಸೇವೆಯ
ಮಾಡಲು 3
ಅಂಬುರುಹದಿಂದ ಜನಿಸಿದ ಬ್ರಹ್ಮ ಬಂದಿಹನು
ಗಂಭೀರ ಗಾಯನದ ನಾರದನು ನಿಂದಿಹನು
ರಂಭೆ ಮೇನಕೆ ಮೊದಲು ನರ್ತನಕೆ
ಐದಿಹರು ಶಂಬರಾರಿಪಿತನೆ ಏಳು||
ರಾಜಸೂಯವಕೊಳಲು ವಾಯುಸುತ ಬಂದಿಹನು
ತೇಜಿಯಾಟಕೆ ಅರ್ಜುನನು ಕರೆದು ಬಂದಿಹನು
ಸಾಜಧರ್ಮಜ ಅಗ್ರಪೂಜೆ ಮಾಡುವೆನೆಂದು ಹೂಜೆಯನು
ಪಿಡಿದುಕೊಂಡು 4
ದೇವ ನಿನ್ನಂಘ್ರಿಯನು ಪೂಜೆ ಮಾಡುವೆನೆಂದು
ಕಾವೇರಿ ಕೃಷ್ಣೆ ಗೌತಮಿ ಗಂಗೆ ಮಲಪಹರಿ
ಸಾವಧಾನದಿ ಯಮುನೆ ತುಂಗಾ ಸರಸ್ವತೀ
ಭೀಮರಥಿ ನೇತ್ರಾವತಿ ||
ದುರಿತ ಬಂಧನವನ್ನು ಪರಿಹರಿಸಿದೆಯೊ ಸ್ವಾಮಿ
ದುರಿತ ದುಷ್ಕರ್ಮವನು ದೇವ ಎಂದರೆ ಸುಡುವೆ
ದುರಿತ ತಾಪಕೆ ಚಂದ್ರ ನೀನೆನಿಸಿಕೊಂಡೆಯೊ
ಶ್ರೀ ಪುರಂದರವಿಠಲನೆ 5


No comments:

Post a Comment