Labels

Sunday, 29 March 2020

ಉಪ್ಪವಡಿಸಯ್ಯ ಹರಿಯೇ


ಉಪ್ಪವಡಿಸಯ್ಯ ಹರಿಯೇ
ಏಳೈ ಹೃಷಿಕೇಶ ಏಳು ರವಿ - ಶಶಿ ನಯನ ಪ.
ಏಳು ಪಶುಗಳ ಕಾಯ್ದು ಪಾಲಿಸಿದೆ ಗೋಕುಲವ
ಏಳು ಸುರವಂದಿತನೆ ಏಳು ಭೂಸತಿರಮಣ
ಉಪ್ಪವಡಿಸಯ್ಯ ಹರಿಯೇ ಅಪ
ಪಚ್ಚೆ ಮುಡಿವಾಳಗಳು ಅಚ್ಚ ಸೇವಂತಿಗೆಯು
ಬಿಚ್ಚು ಮಲ್ಲಿಗೆ ಜಾಜಿ ಸಂಪಿಗೆಯು ಪುನ್ನಾಗ
ಅಚ್ಚರಿಯ ಬಕುಲ ಕೆಂಜಾಜಿ ಕೇತಕಿ ಕುಸುಮ ಗುಚ್ಛಗಳ ಪಿಡಿದುಕೊಂಡು ||
ಅಚ್ಚ ಜಾಣೆಯರು ಶ್ರೀಗಂಧ ಕಸ್ತೂರಿ ಪುನುಗು
ಬಿಚ್ಚು ಬಿಳಿಯೆಲೆಯಡಿಕೆ ಪಿಡಿದು ನಿಂತಿಹರಯ್ಯ
ಮುಚ್ಚುತಿವೆ ತಾರೆಗಳು ಹೆಚ್ಚುತಿವೆ ರವಿಕಿರಣ ಅಚ್ಯುತನೆ
ಉಪ್ಪವಡಿಸೊ 1
ಚೆನ್ನೆಯರು ಚದುರೆಯರು ಸುಗುಣಸಂಪನ್ನೆಯರು
ಪನ್ನೀರು ತುಂಬಿರ್ದ ಪೊನ್ನ ತಂಬಿಗೆಗಳನು
ರನ್ನಗನ್ನಡಿಯನ್ನು ಪಿಡಿದು ನಿಂತಿರುವರೈ ಪನ್ನಂಗಶಯನ ಏಳೈ ||
ಮನ್ನಣೆಯ ನಾರದರು ಮೊದಲಾದ ಮುನಿನಿಕರ
ನಿನ್ನ ಮಹಿಮೆಗಳನ್ನು ಪಾಡಿ ನಲಿಯುವರಯ್ಯ
ಇನ್ನು ಏಳೇಳು ಉದಯದ ಸಮಯ ಸಿರಿಯರಸ
ಚೆನ್ನಿಗನೆ ಉಪ್ಪವಡಿಸೊ 2
ದೇವ ದುಂದುಭಿ ಮೊಳಗೆ ದೇವಕನ್ನೆಯರೆಲ್ಲ
ದೇವಾಂಗ ವಸ್ತ್ರವನು ಪಿಡಿದು ನಿಂತಿಹರಯ್ಯ
ದೇವ ದೇವೇಶ ನಿಮ್ಮೋಲಗದ ಸಂಭ್ರಮಕೆ ದೇವತೆಗಳೆಲ್ಲ ಕರೆದು ||
ದೇವ ಪ್ರಹ್ಲಾದ ಬಲಿ ಮುಖ್ಯರನು ಕಾಯ್ದವನೆ
ದೇವ ಬ್ರಹ್ಮನ ಪಡೆದ ದೇವಗಂಗೆಯ ಪಿತನೆ
ದೇವ ದೇವೋತ್ತಮನೆ ದೇವಾಧಿದೇವ ಪುರಂದರವಿಠಲ
ಉಪ್ಪವಡಿಸೊ 3


No comments:

Post a Comment