Labels

Monday 21 October 2019

ಆರು ಹಿತವರು ಮನವೆ Aaru hitavaru manave

ಆರು ಹಿತವರು ಮನವೆ ಮೂರು ಮಂದಿಗಳೊಳಗೆ
ನಾರಿಯೋ ಧಾರಿಣೀಯೊ ಧನದ ಬಲು ಸಿರಿಯೊ ? ಪ.
ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು
ತನ್ನ ಮನೆಯಲ್ಲಿ ಯಜಮಾನಿಯೆನಿಸಿ
ಭಿನ್ನವಿಲ್ಲದೆ ಅರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಂಜುವಳು ಕಾಲನೊಯ್ವಾಗ 1
ಮುನ್ನ ಶತಕೋಟಿ ರಾಯರುಗಳಾಳಿದ ನೆಲನ
ತನ್ನದೆಂದು ಶಿಲೆಯ ಶಾಸನವ ಬರೆಸಿ
ಬಿನ್ನಾಣದಿ ಮನೆಗಟ್ಟಿ ಕೋಟೆ - ಕೊತ್ತಳಿವಿಕ್ಕಿ
ಚೆನ್ನಿಗನೆ ಅಸುವಳಿಯ ಊರ ಹೊರಗಿಕ್ಕುವರು 2
ಉದ್ಯೋಗ - ವ್ಯವಹಾರ ನೃಪಸೇವೆ ಮೊದಲಾಗಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ಧಿಯಿಂದಲಿ ಧನವ ಗಳಿಸಿಕ್ಕಿ ಅಸುವಳಿಯ
ಸದ್ಯದಲಿ ಆರುಂಬವರು ಹೇಳು ಮನುಜಾ 3
ಶೋಕಗೈದಳುವವರು ಸತಿ - ಸುತರು ಭಾಂದವರು
ಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥ
ಲೋಕದಲಿ ಸ್ಥಿರವಾದ ಕೀರ್ತಿ ಅಪಕೀರ್ತಿಗಳು
ಸಾಕಾರವಾಗಿ ಸಂಗಡ ಬಾಹುವಲ್ಲದೇ ? 4
ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡ
ಸ್ವಸ್ಥದಲಿ ನೆನೆಕಾಣೊ ಪರಮಾತ್ಮನ
ಚಿತ್ತಶುದ್ದಿಯಲಿ ಶ್ರೀ ಪುರಂದರವಿಠಲನ
ಭಕ್ತಿಯಿಂದಲಿ ನೆನೆದು ಮುಕ್ತಿಪಡೆ ಮನವೆ 5

No comments:

Post a Comment