Labels

Monday 21 October 2019

ಆರೇನ ಮಾಡುವರು ಆರಿಂದಲೇನಹುದು Aarena maaduvaru

ಆರೇನ ಮಾಡುವರು ಆರಿಂದಲೇನಹುದು
ಪೂರ್ವಜನ್ಮದ ಕರ್ಮವಿಧಿ ಬೆನ್ನಬಿಡದು ಪ
ಐದು ವರುಷದ ತರಳ ತಾನೆತ್ತ ತಪವೆತ್ತ |
ಬೈದು ಮಲತಾಯಿ ಅಡವಿಗೆ ನೂಕಲು ||
ಸುಯ್ದು ಕೋಪಾಗ್ನಿಯಲಿ ಪೊರಮಟ್ಟು ಪೋಪಾಗ |
ಐದೆ ಬಂಧುಗಳಿದ್ದು ಏನ ಮಾಡಿದರು 1
ನೃಪರೊಳಗೆ ಅತಿ ಶ್ರೇಷ್ಠ ಬಲವಂತ ರಘುರಾಮ |
ಅಪರಿಮಿತ ಶೂರ ಲಕ್ಷ್ಮಣದೇವರು |
ಚಪಲಾಕ್ಷಿ ಸೀತೆಯನು ಖಳನು ಕದ್ದೊಯ್ವಾಗ |
ವಿಪರೀತ ವೀರರಿದ್ದೇನ ಮಾಡಿದರು ? 2
ಪಾಪಿ ದುಶ್ಯಾಸ ದ್ರೌಪದಿಯ ಸೀರೆಯ ಸೆಳೆದು |
ಕೋಪದಿಂ ಮಾನಭಂಗವ ಮಾಡಲು ||
ಆಪತ್ತು ಬೆನ್ನಟ್ಟಿ ಹಾ ಕೃಷ್ಣ | - ಎನುವಾಗ |
ಭೂಪತಿಗಳೈವರಿದ್ದೇನ ಮಾಡಿದರು ? 3
ರಣದೊಳಗೆ ಅಭಿಮನ್ಯು ಚಕ್ರವ್ಯೂಹವ ಪೊಕ್ಕು |
ಸೆಣಸಿ ಷಡುರಥದೊಡನೆ ಹೊಯ್ದಾಡಲು ||
ಅಣಕವಿಲ್ಲದೆ ಕಾದಿ ಅಸುವಳಿದು ಪೋಪಾಗ |
ತ್ರಿಣಯಸಖಿ ಪಾರ್ಥರಿದ್ದೇನ ಮಾಡಿದರು 4
ಬ್ರಹ್ಮಶಿರ ಕರಕಟ್ಟಿ ಶಿವನ ಪೀಡಿಸುತಿರಲು |
ಸುಮ್ಮನೇ ಜಗವನೆಲ್ಲವ ತಿರುಗಿದ ||
ಬೊಮ್ಮಮೂರುತಿಯಾದ ಪುರಂದರವಿಠಲನೇ
ನಮ್ಮ ಅಳವಲ್ಲ ವಿಧಿಮೀರಿ ಬಾಳುವರೆ5

No comments:

Post a Comment