ಅವರು ನಡೆದದ್ದೆ ರಾಜಪಥ ನಾರಾಯಣ |
ಅವರು ನುಡಿದದ್ದೆ ವೇದಾರ್ಥ ನಾರಾಯಣ |
ಅವರು ಮಾಡಿದ್ದೆ ಮರ್ಯಾದೆ ನಾರಾಯಣ |
ಅವರು ನಿಂತಿದ್ದೆ ಕ್ಷೇತ್ರವೈ ನಾರಾಯಣ |
ಅವರು ಮಿಂದದ್ದೆ ಸುರಗಂಗೆ ನಾರಾಯಣ |
ಅವರು ರಾಜಾಧಿರಾಜರು ಅವರೆ ಕಾಣಿರೋ |
ಅವರು ರಾಜಪರಮೇಶ್ವರರು ಅವರೆ ಕಾಣಿರೋ |
ಅವರ ದಾಸ ಜಗದೇಕನಾಥ |
ಅವರು ನಮ್ಮ ಪುರಂದರ ವಿಠಲನ ಆಳುಗಳು ಕಾಣಿರೊ 1
ಮಟ್ಟ ತಾಳ
ಹಸ್ತಿನಾಪಟ್ಟಣವ ನೇಗಿಲಲೆತ್ತಿದನೊಬ್ವ |
ಅಸ್ತಮಿಸಿದ ಇನಮಂಡಲಕೆ ಉದಯವಿತ್ತನೊಬ್ಬ |
ಪೃಥ್ವಿಯ ಅಂಬಿನಲಿ ಹರಗಿದನೊಬ್ಬ |
ವಸ್ತು ಪುರಂದರವಿಠಲಾ ನೀನಿತ್ತ ಸಲುಗೆ ಎಂತೊ 2
ತ್ರಿವಿಡೆ ತಾಳ
ಅಯ್ವತ್ತು ಸಾವಿರ ಯೋಜನವು ಎತ್ತ, ಸಂಜೀವಿನಿ ಎತ್ತ |
ಲಂಕಾಪಟ್ಟಣ ತಾನೆತ್ತ,ಹನುಮ ಕಿತ್ತೆತ್ತಿ ತಾಹೋದೆತ್ತ
ಇಲ್ಲಿಂದಲ್ಲಿಗೆ ಈಡಾಡುವುದೆತ್ತ, ಹನುಮಕಿತ್ತೆತ್ತಿ ತಾಹೋದೆತ್ತ |
ಪುರಂದರವಿಠಲಾ ನಿನ್ನ ಮಹಿಮೆ ಎಂತೊ 3
ಆಟ ತಾಳ
ಸ್ವರ್ಗದ ಮುಕ್ತಿತಿಯ ಅಂಬಿನಲಿ ಇಸುವರು |
ಮಾರ್ಗಣದಿಂದೆರೆವರು ಪಾತಾಳದ ಉದಕವನು |
ನೀರ್ಗೆಯ್ಸಿ ಭೂಮಿಯ ಮೇಲಿಟ್ಟು ಮೆರೆವರು |
ಅಗ್ರಣಿ ಪುರಂದರವಿಠಲನ ಆಳುಗಳು ಕಾಣಿರೋ 4
ಏಕತಾಳ
ಭಾಗೀರಥಿಯ ನೀಂಟಿದರುಂಟೆ |
ಸಾಗರವ ಆಪೋಶನವ ಕೊಂಡವರುಂಟೆ |
ನಾಗಾಭರಣವ ಮಾಡಿದರುಂಟೆ |
ಭಾಗವತೋತ್ತಮರುತ್ತಮರಲ್ಲದೆ |
ನಾಗಾಭರಣವ ಮಾಡಿದರುಂಟೆ |
ಪುರಂದರವಿಠಲನೆ ನಿನ್ನ ಕರುಣೆವೆಂತುಟೋ 5
ಜತೆ
ಹರಿಶರಣರಿಗಿನ್ನು ಸರಿಗಾಣೆ ಜಗದೊಳು |
ಪುರಂದರವಿಠಲ ಸ್ವಾಮಿ ನೀನಿರಲಾಗಿ |
No comments:
Post a Comment