ಹರಿ ನೀನೇ ಗತಿಯೆಂದು ನೆರೆನಂಬಿದವರನು
ಮರೆತಿರುವುದು ನ್ಯಾಯವೆ? ಪ
ಗರುಡಗಮನ ನೀ ಸಿರಿಲೋಲನಾರಿಗೆ |
ಅರಸಿ ಎನ್ನನು ಕಾಯ್ವ ದೊರೆಗಳಿನ್ನಾರಯ್ಯಅ.ಪ
ಮುಟ್ಟಿ ಪೂಜಿಸಿ ನಿನ್ನ ಇಷ್ಟವ ಬೇಡುವ
ದೃಷ್ಟಿಯೆನ್ನೊಳಗಿದೆಯೆ?
ಕಷ್ಟವ ಪಡಲಾರೆ ಸೃಷ್ಟಿಯೊಳಗೆ ಎನ್ನ
ದುಷ್ಟ ಕರ್ಮವ ಬಿಡಿಸಿ ದಿಟ್ಟನೆಂದೆಣಿಸೊ 1
ಭುಜಗಶಯನ ನಿನ್ನ ಭಜಕರ ಹೃದಯದಿ
ನಿಜವಾಗಿ ನೀನಿಲ್ಲವೇ?
ಅಜನ ಪಿತನೆ ಕೇಳು ತ್ರಿಜಗವೆಲ್ಲವು ನಿನ್ನ
ಸುಜನಪಾಲಕನೆಂದು ಭಜನೆ ಮಾಳ್ಪುದ ಕಂಡು2
ಭಾಗವತರರಸನೆ ಯೋಗಿಗಳೊಡೆಯನೆ
ಬಾಗಿ ಬಿನ್ನಯಿಪೆ ನಿನ್ನ
ಸಾಗರ ಶಯನನೆ ನೀಗಿಸಿ ಶ್ರಮವನು
ಜಾಗು ಮಾಡದೆ ಎನ್ನ ಬೇಗದಿ ಕಾಯಯ್ಯ3
ತುಂಟರೈವರ ತುಳಿದು ಕಂಟಕನೊಬ್ಬನ ಕಳೆದು |
ಎಂಟು ಮಂದಿಯ ಗರುವವನಳಿದು ||
ನಂಟ ನೀ ಬಂದೆನ್ನ ಕಂಟಕವನೆ ಬಿಡಿಸಿ |
ಉಂಟಾದ ವೈಕುಂಠ ಬಂಟನೆಂದೆನಿಸೊ4
ಧರಣಿಯೊಳಗೆ ನೀ ಸುಜನರ ಸಲಹುವ
ಬಿರುದು ಪಡೆದವನಲ್ಲವೆ? ||
ಸಿರಿರಮಣನೆ ಎನ್ನ ಕರುಣದಿಂದಲಿ ಕಾಯೊ |
ಪರಮಪುರುಷ ಸಿರಿ ಪುರಂದರ ವಿಠಲ 5
______
No comments:
Post a Comment