ಮಗನೆಂದಾಡಿಸುವಳು | ಮೊಗ ನೋಡಿ ನಗುವಳು ಪ
ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ.ಪ
ಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆ
ಫಾಲದ ಅರಳೆಲೆಯು ಕುಣಿಯೆ
ನೀಲದುಡುಗೆಯಿಟ್ಟ ಬಾಲನೆ ಬಾರೆಂದು
ಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1
ಬಣ್ಣದ ಸರಗಳಿಡೆ ರನ್ನದ ನೇವಳ
ಹೊನ್ನ ಘಂಟೆಯು ಘಣ ಘಣರೆನಲು
ಪನ್ನಗ ಶಯನನೆ ಕುಣಿಯೊಮ್ಮೆ ಕುಣಿಯೆಂದು
ಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2
ಕುಕ್ಷಿಯೊಳೀರೇಳು ಜಗವನು ಸಲಹುವ
ರಕ್ಷಿಪರುಂಟೆ ತ್ರೈಜಗದೊಳಗೆ
ಪಕ್ಷಿವಾಹನ ನೀನು ಅಂಜಬೇಡೆನುತಲಿ
ರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ 3
ಶಂಕ ಚಕ್ರಗದಾ ಪದುಮಧಾರಕನ
ಪಂಕಜ ಮಿತ್ರ ಶತಕೋಟಿ ತೇಜನನು
ಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅ
ಲಂಕರಿಸುವ ಪುಣ್ಯವೆಂತು ಪಡೆದಳಯ್ಯ 4
ಸಾಗರಶಯನು ಭೋಗೀಶನ ಮೇಲೆ
ಯೋಗನಿದ್ದೆಯೊಳಿಪ್ಪ ದೇವನನು
ಆಗಮ ನಿಗಮಗಳರಸ ಕಾಣದ ವಸ್ತು
ತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 5
ಪನ್ನಗ ಶಯನ ಉನ್ನಂತ ಮಹಿಮನ
ಸನ್ನುತ ಭಕುತರ ಸಲಹುವನ
ಪನ್ನಗಾರಿ ವಾಹನ ದೇವರ ದೇವ
ಚೆನ್ನಕೇಶವನ ಪಡೆದಳಯ್ಯಾ *6
No comments:
Post a Comment