ಮಾನಭಂಗವ ಮಾರಿ ಮೇಲುಪಚಾರವ
ಏನ ಮಾಡಿದರಿಲ್ಲಿ ಇರಬಾರದಯ್ಯ ಪ.
ಕುಂದುಗಳನಾಡಿ ಕುಚೋದ್ಯಗಳನೆ ಮಾಡಿ
ಕಂದ ಬಾಯೆಂದು ಬಣ್ಣಿಸಿ ಕರೆಯಲು
ಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದು
ಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ 1
ನಗಗೇಡಿ ಮಾಡಿ ನಾಲುವರೊಳಗೆ ಕೈಯ
ಮುಗಿವೆ ಬಾಯೆಂದು ಬಣ್ಣಿಸಿ ಕರೆಯಲು
ಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲು
ತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ 2
ಆರ್ಥ ಹೋದರು ಪ್ರಾಣ ಹೋದರೂ ಮಾನ
ವ್ಯರ್ಥವಾಗದ ಹಾಗೆ ಕಾಯಬೇಕು
ಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನ
ಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ 3
No comments:
Post a Comment