ಮರೆಯದೆ ಮನದಲಿ ಸಿರಿವರನ ಚರಣವನು
ಸ್ಮರಿಸಿದಂಥವರನ್ನು ನರರೆನ್ನಬಹುದೆ ? ಪ.
ಮುರಹರನಿಗೆರಗುವ ಶಿರವು ದ್ವಾರಕಾಪುರವು
ಹರಿಕಥೆ ಕೇಳುವ ಕರ್ಣ ಗೋಕರ್ಣವು
ಬಿರುದು ಪೊಗಳುವ ಜಿಹ್ವೆ ಸ್ಥಿರದಿ ಕ್ಷೀರಾರ್ಣವ
ವರದನ ಪೂಜಿಪ ಕರವು ರಾಮೇಶ್ವರವು 1
ಸೃಷ್ಟೀಶ ನಿರ್ಮಾಲ್ಯ ಗೃಹಣ ನಾಸಿಕ ಕಾಶಿ
ಕೃಷ್ಣನ ನೋಡುವ ದೃಷ್ಟಿ ಶ್ರೀ ಮುಷ್ಣವು
ಅಷ್ಟಮದಗಳ ಜರೆದ ಮುಖ ಮಥುರಾಪುರ
ವಿಷ್ಣುವನು ಪಾಡುವ ಕಂಠ ಭೂ ವೈಕುಂಠ 2
ಪರಕೆ ನಡೆಸುವ ಜಂಘೆ ಹರಿವ ಗಂಗೆಯು ಈ
ಪರಿಯಲೊಪ್ಪುವ ಅಂಗ ಶ್ರೀರಂಗವು
ಧರೆಯೊಳು ಪುರಂದರ ವಿಠಲರಾಯನ
ಪರಮ ಭಾಗವತರ ಉದರವೆ ಬದರಿ 3
No comments:
Post a Comment